ಅಂತರಗಳು ಕಥೆ ಭಾಗ-5:ಕುಮಾರ್ ಬಡಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
 ವಧು ನೋಡಲು ಹೋಗಿ ತಂದೆಯೇ ವರನಾಗಿ ಉದ್ಭವಿಸಿದ್ದು ಎಷ್ಟು ಸರಿ ಹದಿ ಹರೆಯದ ಹುಡುಗಿಯೊಬ್ಬಳ ಅವಶ್ಯಕತೆ ಅವರಿಗಿದೆಯಾ, ಅವಳನ್ನ ಸಂಬಾಳಿಸುವ ಶಕ್ತಿಯಾದರೂ?
ನನಗಾಗಿ ನೋಡಿದ್ದ ಹೆಣ್ಣವಳು, ಕೊಡು ಮಾಡೋ ವಿಷಯ ಪ್ರಸ್ತಾಪವಾದಂದಿನಿಂದ, ಅದೆಷ್ಟೋ ಬಾರಿ ಅರಿವಿಗೆ ಬಾರದೆ ರಸ್ತೆಯಲ್ಲಿಯೇ ಹುಸಿನಗೆ ನಕ್ಕು, ಕಣ್ ಸನ್ನೆಯಿಂದಲೇ  ಮಾತಾಡಿಸಿ, ಪದೆ ಪದೇ ತಿರುಗಿ ನೋಡುತ್ತಲೇ ಹೋಗುತ್ತಿದ್ದವಳು, ರಂಗು ರಂಗಿನ ಚಿತ್ತಾರಗಳಲ್ಲಿ ಕನಸ ಬಿತ್ತಿಕೊಂಡವಳು, ಹೀಗೆ ಅನ್ನಿಸುತ್ತಿರುವಾಗಲೇ ಅವಳೊಂದಿಗಿನ ನನ್ನ ಕನಸುಗಳೂ ಸಹ ಗರಿಗೆದರಿಕೊಂಡಿದ್ದವು ಆ ದಿನಗಳಲ್ಲಿ , ಮುಂದಿನದೆಲ್ಲವೂ ನನ್ನ ಅವಳ ಬದುಕಿನಲ್ಲಿ ನಡೆದ ಆಕ್ಸಿಡೆಂಟ್.

ಮೊನ್ನೆ ನಡೆದದ್ದು ನನಗೆ ಇನ್ನೂ ಮರೆಯಲಾಗುತ್ತಿಲ್ಲ, ಅಪ್ಪ ಸ್ನಾನಕ್ಕೆ ಹೋಗಿ ಪಂಚೆಗಾಗಿ ಕೂಗಿಕೊಂಡಾಗ, ತಿಂಡಿ ಮಾಡುತ್ತಿದ್ದ ಚಿಕ್ಕಮ್ಮನಿಗೆ ಕೇಳಿಸಿಲ್ಲವೇನೋ ಎಂದು ಅಪ್ಪನ ರೂಮಿಗೆ ಹೋಗಿ ಪಂಚೆ ಹುಡುಕುತ್ತಿದ್ದೆ, ಹಿಂದಿನಿಂದ ಮೇಲು ಧ್ವನಿಯ ಶಬ್ದವೊಂದು ತೇಲಿ ಬಂತು, ಪಕ್ಕನೆ ತಿರುಗಿ ನೋಡಿದರೆ ಬಾಗಿಲಿಗೆ ಅಡ್ಡವಾಗಿ ಅದೇ ಚಿಕ್ಕಮ್ಮ !

- Advertisement - 

ರೂಮ್ ನಿಂದ ಹೊರಗೆ ಓಡಿ ಬಿಡೋಣ ಅನ್ನಿಸಿತು, ಚಿಕ್ಕ..ಮ್ಮಾ ಅಪ್ಪ ಪಂ..ಚೆ ಕೇ..ಳ್ತಿ.ದ್ದಾರೆ. ವೀರೇಶ್ ತೊದಲುತ್ತಲೇ  ಧೈನ್ಯತೆಯಿಂದ ನೋಡಿದ. ಲಲಿತೆ ಚಡಪಡಿಸುತ್ತಲೇ ವೀರೂ ಈ ಮನೆ ಯಾವ ಕಟ್ಟುಪಾಡುಗಳಲ್ಲಿ ನನ್ನ ಬಂಧಿಸಿದೆ, ನಿಜ ಹೇಳು ನಾನು ನಿನಗೆ ಚಿಕ್ಕಮ್ಮಳೇ. ನಾವಂದುಕೊಂಡ ಹಾಗೆ ಯಾವುದೂ ನಡೆಯೊಲ್ಲ, ಪರಿಸ್ಥಿತಿಗೆ ಹೊಂದಿಕೊಂಡು ಹೋಗಬೇಕು. ಚಿಕ್ಕಮ್ಮ ವೀರೇಶ್ ಲಲಿತೆಯ ಪಾದಗಳನ್ನು ನೋಡುತ್ತಲೇ ಮಾತಾಡಿದ.

ನಿಶ್ಯಬ್ದದ ಕೋಣೆಯಲ್ಲಿ ಅಪ್ಪನ ಕೂಗು ಮೇಲಿಂದ ಮೇಲೆ ಲಲಿತಾ ಪಂಚೆ ತಾರೇ……ಲಲಿತೆಯ ಮನಸ್ಸು ಯಾವುದನ್ನೂ ಕೇಳದಂತೆ ಕಾತುರ, ಉದ್ವೇಗವೂ ಸೇರಿ ಉತ್ತರಕ್ಕಾಗಿ ಹುಡುಕಾಡ ತೊಡಗಿದ್ದವು. ಇಷ್ಟು ಬೇಗ ನಾನು ನಿನಗೆ ಚಿಕ್ಕಮ್ಮಳಾಗಿ ಹೋದ್ನೇ, ನನ್ನ ಕಣ್ಣಲ್ಲಿ ಕಣ್ಣಿಟ್ಟು, ಮನಸಲ್ಲಿ ಮನಸ್ಸಿಟ್ಟು ನೋಡು, ನಿನಗೆ ನಾ ಚಿಕ್ಕ ಅಮ್ಮಳೇ….

- Advertisement - 

ಪರಿಸ್ಥಿತಿ ನನ್ನನ್ನಿಲ್ಲಿಗೆ ಕರೆತಂದಿರಬಹುದು, ಆದ್ರೆ ನನ್ನಂತರಂಗ ಹಾಗೆ ಒಪ್ಕೊಳ್ತಿಲ್ಲ, ಅದೆಷ್ಟು ದಿನಗಳಿಂದ ನಿನಗಾಗಿ ಕಾದವಳು, ನಾನು ನಿನ್ನವಳೇ ವಿನಃ,ನಿನ್ನ ತಂದೆಗಲ್ಲ,ಇದು ನಮ್ಮಿಬ್ಬರ ಸಂಬಂಧಿಕರಿಗೂ ಗೊತ್ತಿರೋ ವಿಚಾರ, ಲಲಿತ ವೀರೇಶ್ ಒಳ್ಳೆಯ ಜೋಡಿ ಅಂತ ನೋಡಿದವ್ರು ಮಾತಾಡ್ಕೊಳ್ತಾರೆ, ಈಗಲೂ ಕಾಲ ಮಿಂಚಿಲ್ಲ ಎಲ್ಲಾದ್ರೂ ದೂರ ಹೋಗಿ ಜೀವನ ಮಾಡೋಣ.

ವೀರೇಶ್ ಗೆ ಪ್ರಾಣವೇ ಹೊರಬಂದಂತಾಯ್ತು ತುಸು ಕೋಪದಿಂದ್ಲೇ ನೀವು ಎಂತ ಮಾತೂಂತ ಆಡ್ತಿದೀರಿ, ತಂದೆ ಜೊತೆ ತಾಯಿ ಸ್ಥಾನದಲ್ಲಿರೋರು, ದುರಾಲೋಚನೆಗಳಿಗೆ ಹಾದಿ ಮಾಡಿ ಮನಸ್ಸು ಕೆಡಿಸ್ಕೋಬೇಡಿ. ಗೌರವ ಕುಟುಂಬದಿಂದ ಬಂದ ಹೆಣ್ಣಾಗಿ ಹೇಳ್ತಾ ಇದೀನಿ ವೀರೂ, ಇಲ್ಲಾಂದಿದ್ರೆ ಹೆಸರಿಗೆ ನಿನ್ನ ತಂದೆ, ಚಕ್ಕಂದಕ್ಕೆ ಬೇಕಾದವ್ರನ್ನ ಕಂಡುಕೊಳ್ತಿದ್ದೆ.

ಮಾತು ಕೇಳು ನಾನು ನಿಷ್ಕಲ್ಮಶೆ, ಇಂದಲ್ಲ ನಾಳೆ ತಪ್ಪು ತಿಳ್ಕೊಂಡು ನಿನ್ನ ತಂದೆ ಪಶ್ಚತ್ತಾಪ ಪಟ್ಟು ಸುಮ್ಮನಾಗ್ತಾರೆ, ನನ್ನ ಕೈ ಬಿಡಬೇಡ, ಬಾಗಿಲಿಗೆ ಅಡ್ಡವಾಗಿ ಕೈಗಳನ್ನ ಮುಂದೆ ಚಾಚಿ ಬದುಕಿನ ಭಿಕ್ಷೆಗೆ ಅಂಗಲಾಚಿದ್ದಳು ಲಲಿತೆ, ವೀರೇಶ್ ಆವೇಶದಲ್ಲಿ ಮೆಲುದನೆಯಲ್ಲೇ ಕಿರುಚಿದ, ಚಿಕ್ಕಮ್ಮಾ……..

ಅಪ್ಪ ಅದೆಷ್ಟು ಸಾರಿ ಕೂಗಿದ್ರೂ…ಕೇಳಸ್ತಿದಿಯಾ ನಿಮಗೇ…,ಹೋಗಿ ಪಂಚೆ ಕೊಡ್ರೀ, ಲಲಿತೆಯನ್ನ ತಲೆ ತಗ್ಗಿಸಿಯೇ ಭುಜದಿಂದಲೇ ತಳ್ಳಿದವನೇ ವೀರೇಶ್ ರೂಮ್ ನಿಂದ ಹೊರಬಂದ.

ಇನ್ನೂ ಅಷ್ಟಾಗಿ ಬಲಿಯದ ಬಿಸಿಲು ಬೆಳಗಿನ ತೆಳು ಗಾಳಿಗೆ ಮೈ ಬೆವರುತ್ತಿದುದು ಕಾಣಿಸುತ್ತಿತ್ತು,ವರಾಂಡದ ಹಾಲ್ ನ ಕುರ್ಚಿಗೆ ಒರಗಿಕೊಂಡವನೇ ಟವಲ್ ನಿಂದ ಮುಖವನ್ನು ಒರೆಸಿಕೊಳ್ಳತೊಡಗಿದ, ಲಲಿತೆಯು ಅಷ್ಟೇ ಪಂಚೆಯನ್ನಿಡಿದು ವೀರೇಶ್ ನ ನೋಡುತ್ತಲೇ ಬಾತ್ ರೂಂ ಕಡೆ ಹೆಜ್ಜೆ ಹಾಕ ತೊಡಗಿದಳು.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ.        ನಾಳೆಗೆ…….

Share This Article
error: Content is protected !!
";