ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಳೆದೆರಡು ತಿಂಗಳಿಂದ ಮಳೆಯ ಅಬ್ಬರದಿಂದಾಗಿ ರಾಜ್ಯ ತಲ್ಲಣ ಗೊಂಡಿತ್ತು. ಮಳೆಯಾಗಲಿಲ್ಲವೆಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ರಾಜ್ಯದ ರೈತರು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಖುಷಿಯಿಂದ ಕೃಷಿಯಲ್ಲಿ ತೊಡಗಿಸಿ ಕೊಳ್ಳುವಂತಾಯಿತು. ಇಡೀ ರಾಜ್ಯದಲ್ಲಿ ಧಾರಾಕಾರ ಸುರಿದ ಮಳೆ ಅದೇಕೋ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಡೆ ತೋರದಿದ್ದದು ವಿಪರ್ಯಾಸ.
ಅದರಲ್ಲೂ ದೊಡ್ಡಬಳ್ಳಾಪುರ ತಾಲೂಕು ಕಸಬಾ ಹಾಗೂ ನಗರದಂಚಿಗೆ ಮಳೆಯ ಅಭಾವ ತಲೆ ದೋರಿದೆ. ಇತ್ತೀಚೆಗೆ ಬಿದ್ದ ಅಲ್ಪಸ್ವಲ್ಪ ಮಳೆಯಿಂದಾಗಿ ಇಲ್ಲಿನ ರೈತರು ಬಿತ್ತನೆ ಕಾರ್ಯ ಮುಗಿಸಿದ್ದರು. ಬಿತ್ತನೆಯಾದ ನಂತರ ಮತ್ತೆ ಮಳೆಯ ದರುಶನ ಆಗಲೇ ಇಲ್ಲ. ಈಗ ತುರ್ತಾಗಿ ಬಿತ್ತನೆಯಾಗಿ ಕುಂಟೆ ಹಾಕಿದ ಹೊಲಗಳಿಗೆ ಮಳೆಯ ಅಗತ್ಯವಿದೆ.
ಅಗತ್ಯವಿರುವ ಸಮಯದಲ್ಲಿ ಮಳೆಯಾಗದ ಕಾರಣ ನಗರದ ತೇರಿನ ಬೀದಿಯ ರೈತರು ಮಳೆರಾಯನ ಮೊರೆ ಹೋಗಿದ್ದಾರೆ. ವಿಶ್ವೇಶ್ವರಯ್ಯ ವೃತ್ತದಲ್ಲಿ ಕಳೆದ ಮೂರು ದಿನಗಳಿಂದ ಮಳೆರಾಯನ ಮೂರ್ತಿಯನ್ನು ಮಾಡಿ ಪ್ರತಿ ಮನೆಯ ಬಳಿ ಮೂರ್ತಿಯನನ್ನುಹೊತ್ತು ತಂಬಿಗೆ ನೀರು ಸುರಿಸಿ… ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ. ಬಾರೋ ಬಾರೋ ಮಳೆರಾಯ ಬಾಳೆತೋಟಕೆ ನೀರಿಲ್ಲ. ಬರಪ್ಪೋ ಮಳೆರಾಯ ನೀನು ಬಂಧುಯ್ಯೋ ಶಿವರಾಯ ಎಂದು ಹಾಡಿ ಮಳೆರಾಯನ ಪೂಜಿಸುವ ಕಾರ್ಯ ಕೈಗೊಂಡಿದ್ದಾರೆ.
ಇದಾದ ನಂತರ ಬಯಲು ಬಸವಣ್ಣ ಹಾಗೂ ಕರುವು ಗಲ್ಲಿಗೆ ನೂರೊಂದು ಬಿಂದಿಗೆ ಕುಂಬಾಭಿಷೇಕ ಮಾಡಲಿದ್ದಾರೆ ತೇರಿನ ಬೀದಿಯ ರೈತರು.
ಇಲ್ಲಿ ಒಂದು ಪ್ರತೀತಿ ಇದೆ. ಮೂರ್ನಾಲ್ಕು ದಿನ ಮಳೆರಾಯನ ಮೂರ್ತಿಯನ್ನು ಪೂಜಿಸಿ ನಂತರದ ದಿನ ಸ್ಥಳೀಯ ರೈತರೆಲ್ಲ ಸೇರಿ ಊರ ಹೊರಗಿನ ಬಯಲು ಬಸವಣ್ಣ ದೇವರಿಗೆ ನೂರೊಂದು ಬಿಂದಿಗೆ ಜಲಭಿಷೇಕ ಮಾಡಿ ಅದೇ ದಿನ ವಿಶ್ವೇಶ್ವರಯ್ಯ ವೃತ್ತದ ಐತಿಹಾಸಿಕ ಸಾಕ್ಷಿ ಕಲ್ಲಿನಂತಿರುವ ಕರುವು ಗಲ್ಲಿಗೆ ನೂರೊಂದು ಕುಂಬಾಭಿಷೇಕ ಮಾಡಿ ಆಂಜನೇಯನನ್ನು ಪೂಜಿಸಿದರೆ ಮಳೆ ಬರುತ್ತದೆನ್ನುವುದು ಸ್ಥಳೀಯ ರೈತರ ನಂಬಿಕೆ. ಬಸವಣ್ಣ ಹಾಗೂ ಕರುವು ಗಲ್ಲಿಗೆ ಕುಂಬಾಭಿಷೇಕ ಮಾಡಿ ಪೂಜಿಸಿದ ನಂತರ ಮಳೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಇದು ಅಚ್ಚರಿಯ ಸಂಗತಿಯೇ ಸರಿ. ಆದರೂ ಸತ್ಯ ಎನ್ನುತ್ತಾರೆ ಸ್ಥಳೀಯ ರೈತರಾದ ಲಚ್ಚಣ್ಣ ನವರ ಮೂರ್ತಿ, ಜಯಣ್ಣ, ಸು. ನರಸಿಂಹ ಮೂರ್ತಿ, ಅಂಜಿ, ಪರಮೇಶ್, ಮಂಜುನಾಥ್, ಎಲ್ಲಪ್ಪ ಕುಮಾರ್ ಮುಂತಾದವರು.