ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಇತ್ತೀಚೆಗೆ ನಡೆದ ೨೦೨೪ರ ಶರಣ ಸಂಸ್ಕೃತಿ ಉತ್ಸವ ಹಾಗೂ ಶ್ರೀಶ್ರೀಜಯದೇವ ಜಗದ್ಗುರುಗಳ ೧೫೦ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ದೊರೆತದ್ದು, ನನ್ನ ಸುಕೃತವೆಂದು ಭಾವಿಸಿರುವೆ.
ದಿನಾಂಕ : 07.10.2024 ರ ಸೋಮವಾರ ಅಲ್ಲಿ ನಡೆಯುತ್ತಿರುವ ‘ವಚನಕಮ್ಮಟ‘ ಶಿಬಿರದಲ್ಲಿ ನನ್ನದೂ ಒಂದು ಉಪನ್ಯಾಸವಿದ್ದ ಕಾರಣ, ಭಾನುವಾರ ಸಂಜೆಯೇ ಚಿತ್ರದುರ್ಗಕ್ಕೆ ಹೋಗಿದ್ದೆ. ಅಲ್ಲಿ ಆಯೋಜಿಸಲಾಗಿದ್ದ ಆ ಶಿಕ್ಷಣಮಾಲಿಕೆಯಡಿ ಅಷ್ಟಾವರಣಗಳು, ಪಂಚಾಚಾರಗಳು ಮತ್ತು ಷಟ್ಸ್ಥಲಗಳನ್ನು ಕುರಿತಂತೆ ಮೂರು ದಿನ ಉಪನ್ಯಾಸಗಳಿದ್ದ ಕಾರಣ ಗುರುವಾರದವರೆಗೂ ಮಠದ ಅತಿಥಿಗೃಹದಲ್ಲಿಯೇ ತಂಗಿದ್ದೆನು. ಅಲ್ಲಿ ಕಂಡುಂಡ ಕೆಲವು ಅನುಭವಗಳನ್ನು ದಾಖಲಿಸುತ್ತಲೇ, ಮಠದಲ್ಲಿ ನಾನು ಕಂಡ ನಿಜಶರಣರೊಬ್ಬರ ಬಗ್ಗೆ ಹೇಳುವುದಕ್ಕೋಸ್ಕರವೇ ಈ ಬರಹ.
ಬಂಧುಗಳೇ,
ಬಸವಾದಿ ಪ್ರಮಥರ ತತ್ತ್ವಗಳನ್ನು ನಾಡಿನಾದ್ಯಂತ ಪಸರಿಸುತ್ತಾ, ಜನಪರವಾದ ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಾ, ಜಾತ್ಯತೀತವಾಗಿ, ಎಲ್ಲರನ್ನೂ ಒಟ್ಟಿಗೆ ಸೇರಿಸಿ ಮುನ್ನಡೆಸುತ್ತಿರುವ ಶ್ರೀಮಠದ ಈ ‘ಸಂಸ್ಕೃತಿ ಉತ್ಸವ‘ಕ್ಕೆ ಮೊನ್ನೆ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು.
ನಾಡಿನ ನೂರಾರು ಮಠಗಳಿಂದ ಅನೇಕ, ಹಿರಿಯ ಕಿರಿಯ ಸ್ವಾಮೀಜಿಗಳು ಬಂದಿದ್ದರು. ಕೆಲವು, ಸಭಾಕಾರ್ಯಕ್ರಮಗಳಲ್ಲಿ ಮಂತ್ರಿಮಹೋದಯರೂ ಇದ್ದರು. ಈ ಶರಣ ಸಂಸ್ಕೃತಿ ಉತ್ಸವದ ಹಲವು ಕಾರ್ಯಕ್ರಮಗಳಲ್ಲಿ, ಶಿವಯೋಗ
ಆಧ್ಯಾತ್ಮಿಕ ಚರ್ಚೆ ನಡೆಯುತ್ತಿದ್ದರೆ, ಮತ್ತೆ ಕೆಲವೆಡೆ ವಚನ ಕಮ್ಮಟದ ತರಗತಿಗಳು ನಡೆಯುತ್ತಿದ್ದವು. ಸಂಜೆಯಾಗುತ್ತಿದ್ದಂತೆ, ಕಿಕ್ಕಿರಿದು ಸೇರುತ್ತಿದ್ದ ಭಕ್ತಾದಿಗಳಿಗೆ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವಿತ್ತು. ಸಿನಿ ಕಲಾವಿದರ ನೃತ್ಯಗಳಿದ್ದವು, ‘ಸರಿಗಮಪ‘ ಖ್ಯಾತಿಯ ಗಾಯಕ ಗಾಯಕಿಯರಿಂದ ಸದಭಿರುಚಿಯ ಗೀತೆ ಗಾಯನಗಳ ಅಮೃತಸಿಂಚನವಿತ್ತು.
ಈ ಹಲವು ಕಾರ್ಯಕ್ರಮಗಳ ನಡುವೆ, ವಿದ್ವಜ್ಜನರ ಗೋಷ್ಠಿಗಳೂ ಇದ್ದುದರಿಂದ ನಾಡಿನ ಹಲವು ಮಂದಿ ಸಾರಸ್ವತರೂ ಅಲ್ಲಿದ್ದರು. ಪ್ರೊ.ಎಸ್.ಆರ್. ಗುಂಜಾಳ, ಪ್ರೊ.ಮಲ್ಲೇಪುರಂ, ಡಾ.ಬಿ.ರಾಜಶೇಖರಪ್ಪ, ಡಾ. ಬೈರಮಂಗಲ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಡಾ. ನಂಜುಂಡಸ್ವಾಮಿ ಆದಿಯಾಗಿ ಅನೇಕರು ಈ ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ನನ್ನ ಬರಹದ ಉದ್ದೇಶ ಈ ಉತ್ಸವದ ಬಗ್ಗೆ ಅಲ್ಲ, ಅದರಲ್ಲಿ ತೊಡಗಿಸಿಕೊಂಡಿದ್ದ ಉತ್ಸಾಹಿ ಶರಣರೊಬ್ಬರ ಬಗ್ಗೆ!
ಈ ಉತ್ಸವದಲ್ಲಿ ನನ್ನ ಗಮನಸೆಳೆದದ್ದು ಶರಣರೊಬ್ಬರ ಕ್ರಿಯಾಶೀಲತೆ. ಸಂಯಮದೊಂದಿಗಿನ ಅವರ ಶಿಸ್ತು, ಸಜ್ಜನಿಕೆ, ಸರಳತೆ, ಸನ್ನಡೆ, ಉತ್ಸಾಹಗಳು ನನ್ನಂತಹ ಅನೇಕರ ಮೆಚ್ಚುಗೆಗೆ ಪಾತ್ರವಾಗಿರಬಹುದು! ನಾನು ಅವರನ್ನು ಕಂಡದ್ದು ಇದೇ ಮೊದಲು. ಅಷ್ಟು ಮಾತ್ರವಲ್ಲ, ಚಿತ್ರದುರ್ಗದ ಈ ಬೃಹನ್ಮಠಕ್ಕೆ ಇದೇ ಮೊದಲ ಬಾರಿ ನಾನು ಬಂದದ್ದು! ಹಲವು ಬಾರಿ ಅಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ‘ಮಠ‘ ಗಮನಿಸಿದ್ದೆನಾದರೂ ಎಂದೂ ಒಳಗೆ ಬರುವ ಮನಸ್ಸು ಮಾಡಿರಲಿಲ್ಲ.
ನಾನು ಕಂಡಂತೆ, ಎಷ್ಟೆಲ್ಲ ಚಟುವಟಿಕೆಗಳಲ್ಲಿ ಆ ಶರಣರು ತೊಡಗಿಸಿಕೊಳ್ಳುತ್ತಿದ್ದರೆಂದರೆ, ಅಲ್ಲಿ ಬಂದಿದ್ದ ಸಹಸ್ರಾರು ಮಂದಿಯ ಗಮನ ಸೆಳೆಯುತ್ತಿತ್ತು ಅವರ ಆ ಉತ್ಸುಕತೆ.
ಒಂದು ಕಾವಿ ಜುಬ್ಬಾ, ಕಾವಿ ಪಂಚೆ ಉಡುಗೆಯಲ್ಲಿದ್ದ ಅವರು, ತಮ್ಮದೇ ಮಠದ ಉತ್ಸವವಾದರೂ, ಹೊಸ ಕಾವಿಯನ್ನೇನೂ ತೊಟ್ಟಿರಲಿಲ್ಲ. ಉಡುಪಿಗಿಂತ, ನಡತೆಯಿಂದಲೇ ಮನಸೆಳೆಯುತ್ತಿದ್ದ ಅವರ ಸರಳತೆ ನಮ್ಮಲ್ಲಿ ಗೌರವಭಾವವನ್ನು ಮೂಡಿಸಿತ್ತು. ಆದುದರಿಂದಲೇ, ಅವರ ಕ್ರಿಯಾಶೀಲತೆ ಹಲವರ ಮೆಚ್ಚುಗೆಯ ಮಾತುಗಳಿಗೆ ಗ್ರಾಸವಾಗಿತ್ತು.
ಅವರು, ಅತಿಥಿಗಳಿಗೆ ವ್ಯವಸ್ಥೆ ಮಾಡಿದ್ದ ಕೊಠಡಿಗಳ ಬಳಿ ತಾವೇ ಖುದ್ದಾಗಿ ತೆರಳಿ ಕುಂದುಕೊರತೆಗಳನ್ನು ವಿಚಾರಿಸುತ್ತಿದ್ದರು. ಹಂಚಿಕೆ ಮಾಡಿ, ಜವಾಬ್ದಾರಿ ವಹಿಸಿದ್ದ ಕೆಲವು ಕೆಲಸಗಳನ್ನು ಮಠದ ಸಿಬ್ಬಂದಿ ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂಬ ಬಗ್ಗೆ ಕಾಳಜಿಯಿಂದ ಗಮನಿಸುತ್ತಿದ್ದರು.
ಮತ್ತೊಮ್ಮೆ ಕಂಡಾಗ, ಭಕ್ತರ ದಾಸೋಹದ ಮನೆಯಲ್ಲಿ ಸ್ವಯಂಸೇವಕರಾಗಿದ್ದ ಸ್ಕೌಟ್ ವಿದ್ಯಾರ್ಥಿಗಳ ಜೊತೆ ತಾವೂ ಪಾಯಸ, ಅನ್ನ-ಸಾಂಬಾರು ಬಕೆಟ್, ಸೌಟು ಹಿಡಿದು ಊಟ ಬಡಿಸುತ್ತಿದ್ದರು. ಶುಭ ಸಮಾರಂಭಗಳ ಸಂದರ್ಭದಲ್ಲಿ ಪಂಕ್ತಿಗಳಲ್ಲಿ ಅತಿಥಿಗಳನ್ನು ವಿಚಾರಿಸಿಕೊಳ್ಳುವಂತೆ ಈ ಶರಣರೇ, ಊಟ ಮಾಡುತ್ತಿದ್ದ ಭಕ್ತರನ್ನು ಅಕ್ಕರೆಯಿಂದ ಮಾತನಾಡಿಸುತ್ತಿದ್ದರು. ಜೊತೆಗೆ ‘ಪ್ರಸಾದ‘ ವ್ಯರ್ಥಮಾಡಬಾರದೆಂದು ಸಲಹೆ ನೀಡುತ್ತಿದ್ದರು.
ಎಲ್ಲರೊಂದಿಗೆ ಬೆರೆತು ಮಾತನಾಡುವ, ಪ್ರೀತಿತೋರುವ ಅವರ ‘ಮೃದುವಚನಂಗಳೇ ಸಕಲ ಜಪ-ತಪ‘ಗಳಾಗಿದ್ದವು. ಅಲ್ಲಿ ಅಪಾರ ಜನಸಂದಣಿಯ ನಡುವೆಯೂ, ಭಕ್ತಾದಿಗಳು ಶಿಸ್ತಿನಿಂದ ಸರದಿಸಾಲಿನಲ್ಲಿ ನಿಂತು ದಾಸೋಹ ಕೊಠಡಿಗೆ ಬರಲು ವ್ಯವಸ್ಥೆ ಮಾಡಲಾಗಿತ್ತು. ಅತಿಥಿಗಳ ಕೊಠಡಿಯಲ್ಲಿ ಊಟ ಮುಗಿಸಿದ ನಾನು ಕೈ ತೊಳೆಯೋಣವೆಂದು ವಾಷ್ ಬೇಸಿನ್ ಬಳಿ ಹೋದಾಗ, ಅಲ್ಲಾಗಲೇ ಬ್ಲಾಕ್ ಆಗಿದ್ದ ಸಿಂಕ್ ಸರಿಪಡಿಸಲು ಮುಂದಾಗಿದ್ದರು ಈ ಶರಣರು!
ಇನ್ನು ಸಭಾ ಕಾರ್ಯಕ್ರಮಗಳಲ್ಲಿಯೂ ಅಷ್ಟೇ ಶಿಸ್ತು ಸಂಯಮದಿಂದ ನಿರ್ವಹಿಸುತ್ತಿದ್ದರು. ತಾವೊಬ್ಬರು ‘ಬೃಹನ್ಮಠದ ಸ್ವಾಮೀಜಿ‘ ಎಂಬ ಭಾವ ಅವರಲ್ಲಿ ಕಂಡುಬರುತ್ತಿರಲಿಲ್ಲ. ವೇದಿಕೆಯ ಮೇಲೂ, ಹಿರಿಯ ಗುರುಗಳನ್ನು ಆತ್ಯಂತಿಕವಾದ ಗೌರವಭಾವದಿಂದ ನಮಸ್ಕರಿಸಿ ಕರೆದು ಕುಳ್ಳಿರಿಸುತ್ತಿದ್ದರು.
೧೦ ರಂದು ಗುರುವಾರ ‘ಅನುಭವಮಂಟಪ‘ ದಲ್ಲಿ ವಿಚಾರಗೋಷ್ಠಿಯೊಂದು ನಡೆಯುತ್ತಿತ್ತು, ಮಧ್ಯೆ, ಹಿರಿಯ ಗುರುಗಳಿಬ್ಬರು ಆಗಮಿಸಿದಾಗ (ಉತ್ತರ ಕರ್ನಾಟಕದ ಮಠಗಳ ಶ್ರೀಗಳಿರಬಹುದು) ಅಲ್ಲಿಯೇ ವೇದಿಕೆ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಈ ಶರಣರು ಅವರನ್ನು ಕಂಡದ್ದೇ ತಡ, ವೇದಿಕೆಯ ಮೇಲೆಯೇ ಹಿರಿಯ ಗುರುಗಳೀರ್ವರಿಗೂ ಸಾಷ್ಟಾಂಗ ನಮಸ್ಕಾರ ಮಾಡಿ, ಅವರನ್ನು ಕರೆತಂದು ಸಭಾಮಧ್ಯದಲ್ಲಿ ಸಾನ್ನಿಧ್ಯ ವಹಿಸುವಂತೆ ಕೋರಿ, ಆಸೀನರನ್ನಾಗಿ ಮಾಡಿದರು.
ನೋಡುತ್ತಿದ್ದ ಭಕ್ತಾದಿಗಳಿಂದ ಕಿವಿಗಡಚಿಕ್ಕುವ ಕರತಾಡನವಾಯಿತು, ಗುರುಗಳ ಆಗಮನಕ್ಕಲ್ಲ! ಈ ಕಿರಿಯ ಸ್ವಾಮೀಜಿಯವರು ಅವರಿಗೆ ಕೋರಿದ, ತೋರಿದ ಆತ್ಮೀಯ ಸ್ವಾಗತದ ರೀತಿಗೆ. ಆ ಚಪ್ಪಾಳೆಯನ್ನೂ ಗಮನಿಸದ ಶರಣರು ಮುಂದಿನ ಕೆಲಸ ನೋಡುತ್ತಿದ್ದರು.
ಗೋಷ್ಠಿಗಳಲ್ಲಿ ವಿಷಯ ಮಂಡನೆಗೆ ಬಂದಿದ್ದ ತಜ್ಞರಿಗೆ ತೋರುತ್ತಿದ್ದ ಅವರ ಪ್ರೀತಿ ಗೌರವವೂ ಸ್ಮರಣೀಯ. ಒಬ್ಬೊಬ್ಬರನ್ನೂ ಅಕ್ಕರೆಯಿಂದ ಮಾತನಾಡಿಸಿ, ಗೌರವರಕ್ಷಾ ವಸ್ತ್ರವನ್ನಾಚ್ಛಾದಿಸಿ, ಕೈಮುಗಿದು ಆಹ್ವಾನಿಸುತ್ತಿದ್ದ ರೀತಿ, ಆಹಾ! ಅನೇಕ ಶರಣರಿಗೆ ಮತ್ತು ಇತರರಿಗೆ ಇವರು ಅನುಕರಣೀಯರು!
ಮತ್ತೊಂದು ವಿಷಯ: ಕಾರ್ಯಕ್ರಮ ನಡೆಯುತ್ತಿದ್ದಾಗ, ಏನಾದರೂ ಪ್ರಕಟಿಸುವುದಿದ್ದರೆ, ತಡವಾಗಿ ಬಂದವರನ್ನ ಸ್ವಾಗತಿಸುವುದಿದ್ದರೆ ತಾವೇ, ಯಾವ ಬಿಗುಮಾನವೂ ಇಲ್ಲದೇ ಒಬ್ಬರ ‘ಮಾತು‘ ಮುಗಿದಾಕ್ಷಣ, ನಿರೂಪಕರನ್ನು ಸೌಜನ್ಯದಿಂದ ಬದಿಗೆ ಸರಿಸಿ (ಕ್ಷಮೆಕೇಳಿ) ತಾವೇ ನಿಂತು ಒಂದರೆಗಳಿಗೆ ಮಾತನಾಡುತ್ತಿದ್ದ ಅವರ ರೀತಿ ಯಾವ ಶಿಷ್ಟಾಚಾರವನ್ನೂ ಮೀರಿದರೆನಿಸುತ್ತಿಲಿಲ್ಲ. ಅಷ್ಟು ಹೊಂದಾಣಿಕೆಯ ವರ್ತನೆ ಅವರಲ್ಲಿತ್ತು.
ಇದು, ಶ್ರೀಜಯದೇವ ಜಗದ್ಗುರುಗಳ ೧೫೦ನೇ ಜಯಂತ್ಯುತ್ಸವವೂ ಆಗಿದ್ದರಿಂದ ‘ಜಯದೇವ ದಿಗ್ವಿಜಯ‘ ಎಂಬ ಎರಡುಸಾವಿರ ಪುಟಗಳ ಬೃಹತ್ ಸ್ಮರಣ ಸಂಚಿಕೆಯೊಂದನ್ನು ಬೃಹನ್ಮಠದಲ್ಲಿ ದಿನಾಂಕ : ೦೯.೧೦.೨೦೨೪ ರಂದು ಸಂಜೆ ಲೋಕಾರ್ಪಣೆ ಮಾಡಲಾಯಿತು.
ಈ ಸಂಗ್ರಹಯೋಗ್ಯ ಕೃತಿಯು ಬಹು ಕಡಿಮೆ ಸಮಯದಲ್ಲಿಯೇ ಶಾಸ್ತ್ರೀಯವಾಗಿ ಸಂಪಾದಿತವಾಗಿ, ಅಚ್ಚುಕಟ್ಟಾಗಿ ಮುದ್ರಿತವಾಗಿದೆ.
ಇದರ ಸಂಪಾದಕರಾಗಿ ದುಡಿದವರು ಡಾ. ಬೈರಮಂಗಲ ರಾಮೇಗೌಡರು. ಅವರಾದಿಯಾಗಿ, ಸಂಪಾದಕ ಮಂಡಳಿಯ ಉಳಿದೆಲ್ಲ ಸದಸ್ಯರ ಬಗ್ಗೆ ಈ ಹಿರಿಯ ವ್ಯಕ್ತಿತ್ವದ ಕಿರಿಯ ಶರಣರು ವೇದಿಕೆಯ ಮೇಲೆ ಆಡಿದ ಕೃತಜ್ಞತೆಯ ಮಾತುಗಳು ಅವರ ಹಿರಿತನಕ್ಕೆ ಸಾಕ್ಷಿಯಾಗಿದ್ದವು. ಈ ಕೃತಿ ‘ಕಾಯಕ‘ ಮಾಡಿದವರನ್ನು ಎಷ್ಟು ಕೊಂಡಾಡಿದರೂ ಅವರಿಗೆ ಸಮಾಧಾನವೆನಿಸಲಿಲ್ಲವೇನೋ, ಮರುದಿನದ ವಿಚಾರಗೋಷ್ಠಿಯಲ್ಲೂ ಸಂಪಾದಕರ ಬಗ್ಗೆ ಮತ್ತು ಕೃತಿಮುದ್ರಕರಾದ ಸ್ವ್ಯಾನ್ ಕೃಷ್ಣಮೂರ್ತಿ ಅವರ ಬಗ್ಗೆಯೇ ಮಾತು.
ನಿಸ್ಪೃಹರಾಗಿ ದುಡಿದವರನ್ನು ಗುರುತಿಸಿ, ಗೌರವಿಸುವಲ್ಲಿಯೇ ಕೃತಕೃತ್ಯತೆ ಇದೆ ಎಂದರಿತಿರುವ ಈ ಶರಣರ ನಡೆಯು ನಾಡಿನ ಇತರ ‘ಮಠದೊಳಗಣ‘ ಶ್ರೀಗಳಿಗೆ ಆದರ್ಶವಾಗಬೇಕು.
ಕಾಯವನ್ನೇ ಕೈಲಾಸ ಮಾಡಿಕೊಂಡು ಬದುಕಿದ, ತ್ರಿವಿಧ ದಾಸೋಹಿ ಸಿದ್ಧಗಂಗಾಶ್ರೀಗಳ ಆಶೀರ್ವಾದ ಪಡೆಯುತ್ತಾ, ಆಗಾಗ್ಗೆ ತುಮಕೂರಿನ ಶ್ರೀಮಠಕ್ಕೆ ಹೋಗಿಬರುತ್ತಿದ್ದ ನನಗೆ, ಈ ನಾಡಿನ ಬೇರಾವ ಮಠದೊಂದಿಗೂ ಒಡನಾಟವಿಲ್ಲ. ಆದರೆ, ವಚನಕಮ್ಮಟದ ತರಗತಿಗಳ ನಿಮಿತ್ತ ‘ದುರ್ಗ‘ದ ಈ ‘ಬೃಹನ್ಮಠ‘ಕ್ಕೆ ಬಂದು ಐದು ದಿನ ತಂಗಿದ್ದು ಹೊಸ ಅನುಭವವನ್ನೇ ನೀಡಿತು.
ಐದು ದಿನಗಳ ಕಾಲ ಅಲ್ಲಿದ್ದು, ಬರುವಾಗ ನನ್ನ ಎಂ.ಎ., ವ್ಯಾಸಂಗದ ಸಮಯದಲ್ಲಿ ಕೆಲವು ತಿಂಗಳು ಬೆಂಗಳೂರಿನ ಜಯದೇವ ಹಾಸ್ಟೆಲ್ ನಲ್ಲಿದ್ದು ಉಪಕೃತನಾದ ನನಗೆ ಅದ್ಯಾವ ಸುಕೃತವೋ, ಶ್ರೀ ಜಯದೇವ ಜಗದ್ಗುರುಗಳ ೧೫೦ನೇ ಜಯಂತ್ಯುತ್ಸವದಲ್ಲಿ ಭಾಗವಹಿಸುವಂತೆ ಮಾಡಿತ್ತು. ‘ಜಯದೇವ ದಿಗ್ವಿಜಯ‘ ಸಂಚಿಕೆ ಬಿಡುಗಡೆಯಾದಂದು ಆ ಹೊತ್ತಗೆ ಸಹಜವಾಗಿಯೇ ನನ್ನ ಗಮನ ಸೆಳೆಯಿತು. ಡಾ. ರಾಮೇಗೌಡರಿಗೆ ಕರೆಮಾಡಿ ನನಗೂ ಆ ಕೃತಿ ಬೇಕೆಂದು ಕೇಳಿದೆ. ಅವರು “ಕಡಿಮೆ ಪ್ರತಿಗಳಷ್ಟೇ ಬಂದಿವೆ, ನೋಡೋಣ ಇರಿ” ಎಂದಿದ್ದರು.
ದಿನಾಂಕ : ೧೦ ರಂದು ನಡೆಯುತ್ತಿದ್ದ ವಿಚಾರಗೋಷ್ಠಿಯ ಮಧ್ಯೆ -ವೇದಿಕೆಯ ಮೇಲೆಯೇ ಕುಳಿತಿದ್ದ- ಬೈರಮಂಗಲ ಅವರು ನನಗೆ ಕರೆ ಮಾಡಿ ‘ಎಲ್ಲಿದ್ದೀರಿ ಜಗದೀಶ್ ?’ ಎಂದರು. ಸಭೆಯಲ್ಲಿ ಶ್ರೋತೃಗಳ ಮಧ್ಯೆಯೇ ಇರುವುದಾಗಿ ಹೇಳಿದೆ, “ಬನ್ನಿ, ವೇದಿಕೆ ಮೇಲೆ ಬನ್ನಿ” ಎಂದರು.
ಆದರೆ, ಇದ್ದಕ್ಕಿದ್ದಂತೆ ವಿದ್ವಜ್ಜನರನೇಕರಿದ್ದ ಆ ವೇದಿಕೆ ಹತ್ತುವುದು ತುಂಬಾ ತುಂಬಾ ಸಂಕೋಚವೆನಿಸಿತು. ಆಗ, ಕೈ ಬೀಸಿ ಕರೆಯುತ್ತಾ, ವೇದಿಕೆಯ ತುದಿಯವರೆಗೂ ಬಂದು ಬನ್ನಿ ಬನ್ನಿ ಅವಸರಿಸಿದವರು ಬೇರಾರೂ ಅಲ್ಲ, ಆ ಅದೇ ಶರಣರು!! ಇನ್ನೆಲ್ಲಿ ಕೆಳಗಿಳಿದು ಬಂದು ಬಿಟ್ಟಾರೋ ಎಂಬ ಭಾವದಲ್ಲಿ ನಾನು ವೇದಿಕೆ ಹತ್ತಿದಾಗ, ನನ್ನನ್ನೂ ಆ ವೇದಿಕೆಯಲ್ಲಿಯೇ ಆಸೀನವಾಗಿಸಿದರು.
ಗೌರವರಕ್ಷೆಯೊಂದಿಗೆ, ವಸ್ತ್ರಾಚ್ಛಾದನ, ಫಲ ಸಮರ್ಪಣೆ, ಜೊತೆಗೆ ‘ಜಯದೇವ ದಿಗ್ವಿಜಯ‘…ನನಗೆ! ಅದೇ ಗುರುಗಳ ಅಮೃತಹಸ್ತಗಳಿಂದ!! ಅವರಿಗೆ, ಶಿರಬಾಗಿ ನಮಿಸಿ ಅವೆಲ್ಲವನ್ನೂ ಪಡೆದಾಗ, ಕೃತಜ್ಞತೆಯನ್ನು ಸಲ್ಲಿಸುವಾಗ ನಾನು ಧನ್ಯ, ಕೃತಕೃತ್ಯ ಎನಿಸದಿರುತ್ತದೆಯೇ? ಇದು ನನ್ನ ಭಾಗ್ಯ, ಪುಣ್ಯ ಎಂಬೆಲ್ಲ ಶಬ್ದಗಳೂ ಚಿಕ್ಕವೇನೋ ಎನಿಸಿದವು.
ಕಾರ್ಯಕ್ರಮ ಮುಗಿದು ಕೆಳಗಿಳಿದು ಬಂದ ಬಳಿಕ ಅವರ ಹೆಸರು, ಶ್ರೀ ಬಸವಕುಮಾರರೆಂದು ತಿಳಿಯಿತು.
ಸದಾ ಶಿಸ್ತು, ಸರಳತೆ, ಹಸನ್ಮುಖ, ಕ್ರಿಯಾಶೀಲತೆ, ಭಕ್ತಾದಿಗಳಲ್ಲಿ ಅಕ್ಕರೆ, ಸ್ಫುಟವಾದ ಮಾತು, ಹಿರಿಯರಲ್ಲಿನ ಗೌರವ, ವಿದ್ವಜ್ಜನ ಪ್ರೀತಿಗಳನ್ನು ಅವರಲ್ಲಿ ಕಂಡ ನನಗೆ ಅವರು ಬಸವಕುಮಾರರಲ್ಲ, ಕುಮಾರ ಬಸವ ಎನಿಸಿದ್ದು ನಿಜ. ಅವರನ್ನೂ, ಅವರ ಸದ್ಗುಣಗಳನ್ನೂ ಹೃನ್ಮನದಲ್ಲಿ ನೆನೆಯುತ್ತಾ, ಅವರನ್ನು ಮತ್ತೊಮ್ಮೆ ಕಾಣುವ ಆಕಾಂಕ್ಷೆಯೊಂದಿಗೆ ಈ ಬರಹಕ್ಕೊಂದು ಅಲ್ಪವಿರಾಮ, ನಮಸ್ಕಾರ…
ಲೇಖನ-ಡಾ.ಸಿ.ಕೆ.ಜಗದೀಶ್, ಕನ್ನಡ ಪ್ರಾಧ್ಯಾಪಕರು (ವಿ), ಬೆಂಗಳೂರು.