ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಂಗೋತ್ರಿ ಸಾಂಸ್ಕೃತಿಕ ಸಂಸ್ಥೆ ರಾಷ್ಟ್ರಮಟ್ಟದ ಪ್ರತಿಷ್ಠಿತ “ಬುದ್ಧ ಪ್ರಶಸ್ತಿ” ಪ್ರಕಟಿಸಿದ್ದು ಬೇತೂರು ಪಾಳ್ಯದ ಬಿಬಿಎಂಪಿ ಡೆಪ್ಯೂಟಿ ಕಮಿಷನ್ ಜೆ.ರಾಜು ಸೇರಿದಂತೆ ಹಿರಿಯ ಸಾಂಸ್ಕೃತಿಕ ಚಿಂತಕ, ಡಾ. ಸಿ.ಸೋಮಶೇಖರ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ, ಹಿರಿಯ ಜಾನಪದ ಗಾಯಕ ಗುರುರಾಜ್ ಹೊಸಕೋಟೆ ಸೇರಿ ಏಳು ಮಂದಿ ಗಣ್ಯರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.
ಸಂಸ್ಥಾಪಕ ಕಾರ್ಯದರ್ಶಿ ಕೆ ಎಚ್. ಕುಮಾರ್ ಸಾರಥ್ಯದ ರಂಗೋತ್ರಿ ಮಕ್ಕಳ ರಂಗಶಾಲೆ ಕಳೆದ ಮೂರುವರೆ ದಶಕಗಳಿಂದ ರಂಗಭೂಮಿಯ ಮೂಲಕ ಮಕ್ಕಳ ಮನೋವಿಕಾಸಕ್ಕಾಗಿ ಶ್ರಮಿಸುತ್ತಾ ಬಂದ ಸಾಂಸ್ಕೃತಿಕ ಸಂಸ್ಥೆ ಪ್ರತಿ ಬುದ್ದ ಪೌರ್ಣಿಮೆಯಂದು ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ, ಅಭಿನಂದನೆ, ಕವಿಗೋಷ್ಠಿ, ವಿಚಾರಗೋಷ್ಠಿ, ಜನಪದ ಕ್ರೀಡೆಗಳು, ಕಾಲೇಜು ರಂಗಭೂಮಿ ಹಾಗೂ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ಸಂಸ್ಥೆಯಾಗಿದೆ.
ಈ ಸಂಸ್ಥೆ ವತಿಯಿಂದ ಪ್ರತಿ ವರ್ಷ ಬುದ್ದ ಪೂರ್ಣಿಮೆಯಂದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರತಿಷ್ಠಿತ ರಾಷ್ಟ್ರೀಯ ಬುದ್ದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಆ ಸಾಲಿಗೆ ಜೆ.ರಾಜು ಬೇತೂರು ಪಾಳ್ಯ ಅವರು ಸೇರಿ ಸನ್ಮಾನ ಸ್ವೀಕರಿಸಲಿದ್ದಾರೆ.
ಮೇ-12 ರಂದು ಸೋಮವಾರ ಸಂಜೆ 5.30 ಗಂಟೆಗೆ ಬುದ್ಧ ಪೌರ್ಣಿಮೆಯಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬೆಂಗಳೂರಿನ ಮಾಗಡಿ ಮುಖ್ಯರಸ್ತೆ, ಎಲೆಕೊಡಿಗೆಹಳ್ಳಿಯ, ನ್ಯೂ ಹಾರ್ಡ್‌ವೀಕ್ ಇಂಡಿಯನ್ ಸ್ಕೂಲ್ ಆವರಣದಲ್ಲಿ ನಿ.ಪ್ರ.ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು, ಬೇಲಿಮಠ ಇವರ ಸಮ್ಮುಖದಲ್ಲಿ ನೀಡಲಾಗುವುದು.
ಹಿರಿಯ ಪೊಲೀಸ್ ಅಧಿಕಾರಿ, ಸಾಹಿತಿ ಎಂ.ನಂಜುಂಡಸ್ವಾಮಿ, ಬಿಬಿಎಂಪಿ ಡೆಪ್ಯೂಟಿ ಕಮಿಷನರ್ ಜೆ.ರಾಜು ಬೇತೂರು ಪಾಳ್ಯ, ಅರಣ್ಯ ಇಲಾಖೆ ಅಧಿಕಾರಿ ಜಗದೀಶ್.ಎಸ್.ಮಹಾರಾಜಪೇಟ, ಸಮಾಜ ಸೇವಕ ಜಿ.ಅಂಬರೀಷ್, ಯುವ ಕವಿ, ವಕೀಲ ಎನ್.ಚಂದ್ರಶೇಖರ್ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ನಾಡಿನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಕೆ ಎಚ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.