ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರವು ಭಿಕ್ಷಾಟನೆಯು ಒಂದು ಸಾಮಾಜಿಕ ಪಿಡುಗಾಗಿರುವುದರಿಂದ ಭಿಕ್ಷಾಟನೆ ನಿರ್ಮೂಲನೆಗಾಗಿ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ ಮತ್ತು ನಿಯಮಗಳು 1975ನ್ನು ಜಾರಿಗೆ ತಂದಿದೆ. ಈ ಅಧಿನಿಯಮ ಮತ್ತು ನಿಯಮಗಳನ್ವಯ ಕೇಂದ್ರ ಪರಿಹಾರ ಸಮಿತಿ ಸ್ಥಾಪಿಸಲಾಗಿದೆ.
ಇದರ ಅಧೀನ ಬೆಂಗಳೂರು, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಹುಬ್ಬಳ್ಳಿ–ಧಾರವಾಡ, ಕಲ್ಬುರ್ಗಿ, ಕೋಲಾರ, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ.
ಭಿಕ್ಷಾಟನೆಯಲ್ಲಿ ತೊಡಗಿರುವ ಭಿಕ್ಷುಕರುಗಳನ್ನು ರಕ್ಷಣೆ ಮಾಡಿ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಪ್ರಸ್ತುತ ಸರಾಸರಿ 3500 ನಿರಾಶ್ರಿತರುಗಳಿಗೆ ಪುನರ್ವಸತಿ ಕಲ್ಪಿಸಿ ಅವರುಗಳಿಗೆ ನಿಯಮಾನುಸಾರ ಊಟ–ಉಪಹಾರ, ಸಮವಸ್ತ್ರ, ಹಾಸಿಗೆ–ಹೊದಿಕೆ, ವೈದ್ಯಕೀಯ ಚಿಕಿತ್ಸೆ ಜೊತೆಗೆ ಅವರು ಪುನ: ಭಿಕ್ಷಾಟನೆಯಲ್ಲಿ ತೊಡಗದಂತೆ ಮನಃಪರಿವರ್ತನೆ ಮಾಡುವ ಸಲುವಾಗಿ ವಿವಿಧ ವೃತ್ತಿ ತರಬೇತಿಗಳನ್ನು ನೀಡಲಾಗುತ್ತಿದೆ. ತರಬೇತಿ ಭತ್ಯೆಯನ್ನು ದಿನವೊಂದಕ್ಕೆ 8 ಗಂಟೆ ಅವಧಿಗೆ ರೂ. 75/-ಗಳಂತೆ ಅದಕ್ಕಿಂತ ಕಡಿಮೆ ಅವಧಿಯ ತರಬೇತಿಗೆ ರೂ.35/-ಗಳಂತೆ ತರಬೇತಿಯನ್ನು ನೀಡಲಾಗುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಭಿಕ್ಷಾಟನಾ ನಿಷೇಧ ಅಧಿನಿಯಮ ಮತ್ತು ನಿಯಮಗಳು 1975 ಜಾರಿಯಲ್ಲಿರುವಂತೆ ಸರ್ಕಾರವು ಭಿಕ್ಷಾಟನೆಯಿಂದ ಮುಕ್ತಿಗೊಳಿಸಿ ಅವರುಗಳಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಜಾಹಿರಾತುಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಭಿಕ್ಷಾಟನೆ ಬಗ್ಗೆ ಉಚಿತ ಸಹಾಯವಾಣಿ ಸಂಖ್ಯೆ 10581 ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣ ಮಿತ್ರ ಸಂಖ್ಯೆ 9482300400 ಗೆ ಸಾರ್ವಜನಿಕರು ದೂರುಗಳನ್ನು ದಾಖಲಿಸಿದ್ದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸಲಾಗುತ್ತಿದೆ.
ಉಳಿದ ಜಿಲ್ಲೆಯಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ. 2017-18 ನೇ ಸಾಲಿನ ಆಯವ್ಯಯ ಘೋಷಣೆಯಂತೆ ಹಾಸನ, ಹಾವೇರಿ, ಚಾಮರಾಜನಗರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಜಮೀನು ಮಂಜೂರು ಮಾಡಲಾಗಿದ್ದು, ಹುದ್ದೆಗಳನ್ನು ಸೃಜನೆ ಮಾಡಿ, ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರವು ಆದೇಶ ಹೊರಡಿಸಿದೆ. ಈ ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಹಸ್ತಾಂತರ ಪಡೆದು ಪ್ರಾರಂಭಗೊಳಿಸಲಾಗುವುದು.
ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬಾಗಲಕೋಟೆ, ಉತ್ತರ ಕನ್ನಡ, ಬೀದರ್, ಜಿಲ್ಲೆಗಳಲ್ಲಿ ಜಮೀನು ಮಂಜೂರಾಗಿದ್ದು, ಸರ್ಕಾರದ ನಿರ್ದೇಶನದಂತೆ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಜಮೀನು ಭದ್ರತೆಗಾಗಿ ಕಾಂಪೌಂಡ್ ಗೋಡೆ ಹಾಗೂ ಕೊಳವೆ ಬಾವಿ ನಿರ್ಮಾಣ ಮಾಡಲು ಕ್ರಮವಹಿಸಲಾಗುತ್ತಿದೆ.
ಬೆಂಗಳೂರು ನಗರವು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಜನದಟ್ಟಣೆ ಹೆಚ್ಚಾಗಿರುವುದರಿಂದ ಭಿಕ್ಷಾಟನೆಯು ಹೆಚ್ಚಾಗಿರುವ ಕಾರಣ ಬೆಂಗಳೂರು ನಗರದ ಪೂರ್ವ ವಲಯದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರದ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವಂತೆ ಜಮೀನು ಮಂಜೂರಾತಿಗೆ ಕ್ರಮವಹಿಸಲಾಗಿದೆ.
ಜಮೀನು ಮಂಜೂರು ಮಾಡುವವರೆಗೆ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಿಸಲು ಅನುಮೋದನೆ ನೀಡಿದ್ದು, ಬಾಡಿಗೆ ಕಟ್ಟಡ ದೊರೆಯುವವರೆಗೆ ಬೆಂಗಳೂರು ನಗರದ ಪೂರ್ವ ವಲಯದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ರಕ್ಷಣೆ ಮಾಡಿ, ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯ ದಣನನಾಯಕ ಕೆರೆ ಗ್ರಾಮದ ಶ್ರೀಮತಿ ಸಾಕಮ್ಮ ಎಂಬುವರು ಸುಮಾರು 25 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ದಣನಾಯಕ ಕೆರೆಹಳ್ಳಿಯಿಂದ ತಪ್ಪಿಸಿಕೊಂಡು ರೈಲು ಮುಖಾಂತರ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿನ ಬಾಲಕೋಟ್ ವೃದ್ದಾಶ್ರಮದಲ್ಲಿ ವಾಸವಾಗಿದ್ದು ಕರ್ನಾಟಕ ಮೂಲದ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ರವಿನಂದನ್ರವರು ಇವರನ್ನು ಕರ್ನಾಟಕದವರೆಂದು
ಗುರುತಿಸಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಮಾಹಿತಿ ನೀಡಿರುವಂತೆ ಹಾಗೂ ಸರ್ಕಾರದ ನಿರ್ದೇಶನದಂತೆ ಶ್ರೀಮತಿ ಸಾಕಮ್ಮ ಇವರ ಮಕ್ಕಳು ಹಾಗೂ ಸಂಬಂಧಿಕರನ್ನು ಪತ್ತೆ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿಗಳು, ಹಿಮಾಚಲ ಪ್ರದೇಶದ ಬಾಲಕೋಟ್ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ದಿನಾಂಕ 24-12-2024ರಂದು ಇವರನ್ನು ಕರ್ನಾಟಕ ರಾಜ್ಯಕ್ಕೆ ಮರಳಿ ಕರೆತಂದಿರುತ್ತಾರೆ. ಸರ್ಕಾರದ ವತಿಯಿಂದ ಶ್ರೀಮತಿ ಸಾಕಮ್ಮ, ನವರನ್ನು ಸನ್ಮಾನಿಸಿ, ಇವರನ್ನು ಅವರ ಮಕ್ಕಳು ಹಾಗೂ ಸಂಬಂಧಿಕರೊಂದಿಗೆ ಅವರ ಸ್ವಂತ ಊರಿಗೆ ಮರಳಿ ಮನೆಗೆ ತಲುಪಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಲೇಖನ-ಸ್ಮಿತ ಆರ್, ವಾರ್ತಾ ಸಹಾಯಕರು, ಬೆಂಗಳೂರು.