ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಪಂಚಾಯಿತಿ ಪ್ರತಿಭಟನೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಜಿಲ್ಲಾ ಪಂಚಾಯಿತಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿ ಉಪ ಕಾರ್ಯದರ್ಶಿ ಮೂಲಕ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖೆ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಡಿಸೆಂಬರ್ನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತೆಂದು ಪ್ರತಿಭಟನಾನಿರತರು ಉಪ ಕಾರ್ಯದರ್ಶಿಗಳ ಗಮನ ಸೆಳೆದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಡಿ.ಎಂ.ಮಲಿಯಪ್ಪ ಮಾತನಾಡಿ ತಾವೆ ಒಪ್ಪಿಕೊಂಡಿರುವ ಪ್ರಕಾರ ಎಲ್ಲಾ ನೌಕರರಿಗೆ ಐದು ಸಾವಿರ ರೂ.ವೇತನ ಹೆಚ್ಚಿಸಿ ಇಲಾಖೆಯಿಂದ ಆದೇಶ ಹೊರಡಿಸಬೇಕು. ನೌಕರರು ನಿವೃತ್ತಿಯಾದರೆ, ನಿಧನ ಹೊಂದಿದರೆ ಇಡಿಗಂಟು ಆರು ಲಕ್ಷ ರೂ.ಗಳನ್ನು ಕೊಡಬೇಕು. ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು. ಸ್ವಚ್ಚವಾಹಿನಿ ನೌಕರರ ಸಭೆ ಕರೆದು ಅವರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು.
ಪ್ರತಿಯೊಂದು ಪಂಚಾಯಿತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಬೇಕು. ಕಳೆದ ೧೮-೨೦ ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್ಗಳಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅನುಮೋದನೆ ಕೊಡಬೇಕು. ೨ ನೇ ಡಾಟಾ ಎಂಟ್ರಿ ಆಪರೇಟರ್ ನೇಮಕಾತಿಯಾಗಬೇಕು. ಈಗಾಗಲೆ ಆರೋಗ್ಯದ ಕುರಿತು ಸಿಬ್ಬಂದಿಗಳ ಮಾಹಿತಿಗಾಗಿ ಫಾರ್ಮೆಟ್ ಕಳಿಸಿದ್ದೀರ. ಅದರಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವ ಧನ, ಕಾರ್ಮಿಕರ ಮಾಹಿತಿ ನೀಡಲು ಸೂಚಿಸಿದ್ದು, ಆದರೆ ಈ ಫಾರ್ಮೆಟ್ನಲ್ಲಿ ಪಂಚಾಯಿತಿ ನೌಕರರೆಂದು ಮಾಹಿತಿ ಇಲ್ಲದಿರುವುದನ್ನು ಸರಿಪಡಿಸಿ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ವಿ.ರಂಗನಾಥ್, ಜಯಲಕ್ಷ್ಮಿ, ಶಶಿ, ವೆಂಕಟೇಶ್, ಸೀನಪ್ಪ, ಮಾರಪ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

