ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೇಡಿಕೆ ಇಲ್ಲದಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಔಷಧಗಳನ್ನು ಅಕ್ರಮವಾಗಿ ಖರೀದಿಸುವ ಮೂಲಕ ಸಚಿವ ಚಲುವರಾಯಸ್ವಾಮಿ ಮತ್ತು ಅವರ ಸಂಬಂಧಿಕರಾಗಿರುವ ಮಂಡ್ಯ ಡಿಹೆಚ್‌ಓ ಡಾ. ಕೆ. ಮೋಹನ್ ಲಕ್ಷಾಂತರ ರೂಪಾಯಿ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಭ್ರಷ್ಟ ಅಧಿಕಾರಿ ಡಾ.ಕೆ. ಮೋಹನ್ ಅವರನ್ನು ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡು, ಜಿಲ್ಲೆಯಲ್ಲಿ ಔಷಧಿಗಳು, ವೈದ್ಯಕೀಯ ಸಲಕರಣೆಗಳು ಹಾಗೂ ಪರಿಕರಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಎಸಗಲಾಗಿದೆ.
ಟೆಂಡರ್ ಕರೆಯದೆ ಬಿಡಿ ಬಿಡಿಯಾಗಿ ಕೆಲವೇ ದಿನಗಳ ಅಂತರದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಗಳು ಹಾಗೂ ಸರ್ಜಿಕಲ್ ಉಪಕರಣಗಳನ್ನು ಖರೀದಿಸಿ ಕೆಟಿಪಿಪಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಖರೀದಿಗೆ ಸಂಬಂಧಿಸಿದ ಕಡತಗಳಲ್ಲಿ ಮೂಲ ಬಿಲ್ ಕಾಣೆಯಾಗಿದೆ, ಖರೀದಿ ಪ್ರಕಟಣೆ ಹಾಗೂ ದರಪಟ್ಟಿಯಲ್ಲಿ ದಿನಾಂಕಗಳನ್ನು ತಿದ್ದುಪಡಿ ಮಾಡಿರುವುದು ಭ್ರಷ್ಟಾಚಾರಕ್ಕೆ ಸಾಕ್ಷಿ.
ಕೃಷಿ ಸಚಿವ ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆ ಬಿಟ್ಟು ಆಚೆ ಬರುತ್ತಿಲ್ಲ. ಪ್ರತಿಯೊಂದು ಯೋಜನೆಗಳಲ್ಲೂ ಇಂತಿಷ್ಟು % ವಸೂಲಿ ಮಾಡಿಕೊಂಡು ಮಂಡ್ಯದಲ್ಲೇ ಠಿಕಾಣಿ ಹೂಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಖದೀಮರ ವಿರುದ್ಧ ಕರ್ನಾಟಕ ಸರ್ಕಾರ ಸೂಕ್ತ ಕ್ರಮ ಕೈಗೊಂಡು, ದುರುಪಯೋಗವಾಗಿರುವ ಹಣವನ್ನು ವಸೂಲಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.