ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಈ ಬಾರಿ ಬಂದ ಮಳೆಯಿಂದ ಬರಗಾಲದ ಹಣೆಪಟ್ಟಿಯಿಂದ ನಮ್ಮ ಕ್ಷೇತ್ರ ದೂರವಾಗಿದೆ. ಸಮೃದ್ದಿ ಮಳೆಯಿಂದ ಜನರು, ಜಾನುವಾರುಗಳಿಗೆ ಮೇವು ನೀರಿನ ಕೊರತೆ ನೀಗಿದೆ ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಅಜ್ಜಯ್ಯನಗುಡಿ ಕೆರೆ ತುಂಬಿಕೋಡಿಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು. ನಗರ ಪ್ರದೇಶ ವ್ಯಾಪ್ತಿಯ ಅಜ್ಜಯ್ಯಗುಡಿಕೆರೆಗೂ ಸಹ ಬಾಗಿನ ಅರ್ಪಿಸುವ ಪುಣ್ಯದೊರಕಿದ್ದು ನನಗೆ ಹೆಚ್ಚು ಸಂತಸ ತಂದಿದೆ.
ಪ್ರಸ್ತುತ ವರ್ಷ ತಾಲ್ಲೂಕಿನಾದ್ಯಂತ ಗ್ರಾಮ ದೇವತೆ ಚಳ್ಳಕೆರೆಯಮ್ಮ, ಶ್ರೀಜಗಲೂರಜ್ಜಸ್ವಾಮಿ, ವೀರಭದ್ರಸ್ವಾಮಿ, ಉಡಲಸಮ್ಮ ಸೇರಿದಂತೆ ಎಲ್ಲಾ ದೇವರುಗಳ ಕೃಪೆಯಿಂದ ನಿರೀಕ್ಷೆಗೂ ಮೀರಿ ಉತ್ತಮ ಹದ ಮಳೆಯಾಗಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಎಂ.ಎಂ.ಮಳೆಯಾಗಿದ್ದು, ಎಲ್ಲೆಡೆ ಕೆರೆಗಳು ತುಂಬಿ ಕೋಡಿಬಿದ್ದಿವೆ.
ತಾಲ್ಲೂಕಿನಾದ್ಯಂತ ಗಂಗಾದೇವತೆ ದರ್ಶನವಾಗುತ್ತಿದೆ. ಅಜ್ಜಯ್ಯನಗುಡಿ ಕೆರೆಯೂ ಸಹ ಕೋಡಬಿದ್ದಿದ್ದು, ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿ ಮುಂದಿನ ದಿನಗಳಲ್ಲೂ ಇದೇ ರೀತಿ ಕರುಣೆ ತೋರುವಂತೆ ದೇವರನ್ನು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಕೆ.ವೀರಭದ್ರಪ್ಪ, ಬಿ.ಟಿ.ರಮೇಶ್‌ಗೌಡ, ಎಂ.ಜೆ.ರಾಘವೇಂದ್ರ, ಸುಮಭರಮಣ್ಣ, ಕವಿತಾಬೋರಯ್ಯ, ಮಲ್ಲಿಕಾರ್ಜುನ್, ನಾಮಿನಿ ಸದಸ್ಯರಾದ ಅನ್ವರ್‌ಮಾಸ್ಟರ್, ಬಡಗಿಪಾಪಣ್ಣ, ಆರ್.ವೀರಭದ್ರಿ, ಕೆಡಿಪಿ ಸದಸ್ಯ ಸುರೇಶ್, ಮುಖಂಡರಾದ ಸಿ.ಟಿ.ಶ್ರೀನಿವಾಸ್, ಬೋರಯ್ಯ, ಭರಮಣ್ಣ, ವ್ಯವಸ್ಥಾಪಕ ಲಿಂಗರಾಜು, ಹಿರಿಯ ಆರೋಗ್ಯ ನಿರೀಕ್ಷಕರಾದ ಗಣೇಶ್, ಗೀತಾಕುಮಾರಿ ಮುಂತಾದವರು ಉಪಸ್ಥಿತರಿದ್ದರು.