Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಡಪ್ಪನ ಕಟ್ಟೆ   ಕಥೆ ಭಾಗ-4 ಕುಮಾರ್ ಬಡಪ್ಪ

Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಮುದ್ದಾಪುರದ ಕಂಚೋಬಳಸ್ವಾಮಿ ಗುಡಿಯ ಬೆಳಗಿನ ಸುಪ್ರಭಾತ
, ತುಸು ಹಾದಿಯ ಮ್ಯಾಸರಟ್ಟಿ ತುಂಬೆಲ್ಲಾ ಸಣ್ಣಗೆ ಗುನುಗಿಕೊಂಡಿತ್ತು. ದುರ್ಗದಿಂದ ಬಸ್ಸಿಗಿಟ್ಟಿದ್ದ ದಿನಪತ್ರಿಕೆಗಳು ಹಾಕಿಸಿಕೊಳ್ಳುವರ ಮನೆಗಳಿಗೂ ತಲುಪಿ.

ಗೌರವ್ವನ ಹೋಟ್ಲನಲ್ಲೂ ಮಂದಿ ಕೈ ಸೇರಿ ಚಾ, ಬೀಡಿಯ ಜೊತೆ, ಓದೋರ ಬಾಯ್ಗೆ ಸುದ್ದಿಗಳು ಬಂದು ಚರ್ಚೆಯಲ್ಲಿ ಬಿದ್ದಿದ್ವು. ಸಣ್ಣಿಂಗನೂ ಗಿರಾಕಿಗಳಿಗೆ ಕೇಳ್ತಾ ಕೊಡ್ತಾ,ಪ್ಲೇಟು ಲೋಟ ತೆಗಿತಾ ತಾನೂ ಕೂಡ ಬಿಜಿಯಾಗಿದ್ದ.

ಕರುವಿನಕಟ್ಟೆ ಕೃಷ್ಣೇಗೌಡನೂ ಅಷ್ಟೇ, ದಿನಚರಿ ಮುಗ್ಸಿ ಪೇಪರ್ ಹಿಡ್ದು,ಮನೆ ಜಗಲಿಯ ಅರಾಮ ಕುರ್ಚಿಗೆ ವರಗಿದ್ದಾಗಿತ್ತು. ಕೆಲಸದಾಳು ತಿಮ್ಮ, ಹಾಲು ಹಿಂಡಿದ ದನಗಳನ್ನ ಹೊರಗಟ್ಟಿ, ಸಗಣಿ ಕಸ ತೆಗಿಯೋದ್ರಲ್ಲಿ ನಿರತನಾಗಿದ್ದ. ಮುದ್ದಾಪುರದ ಮುಖ್ಯರಸ್ತೆಗೆ ಹೊಂದ್ಕೊಡೇ ಗೌಡನ ಮನೆ. ಬಂಡಿ(ಚಕ್ಕಡಿ)ದಾರಿಯಾದ್ರೂ ಅಲ್ಲಿಗೆ ಅದೇ ರಾಜಮಾರ್ಗ. ಸೂರವ್ವ ಬಡಪ್ಪ ವರಾಂಡಕ್ಕೆ ಬಂದು ನಿಂತದ್ದು ಗೌಡನ ಗಮನಕ್ಕೆ ಬಂದಿದ್ರೂ ಗೊತ್ತಿಲ್ದವನಂತೆ ಪೇಪರ್ ಕಡೆಗೇ ಗಮನಹರಿಸಿದ್ದ.

ಗೌಡ್ರು ನೋಡ್ದೇ ಇರೋದನ್ನ ಕಂಡ, ಈ ಗಂಡ ಹೆಂಡ್ರು ಮುಖವನ್ನೊಮ್ಮೆ ನೋಡಿಕೊಂಡು ಸೂರವ್ವನೇ ಮಾತಿಗಿಳಿದಳು. ಬುದ್ದಿಯೋರ ನಿಮ್ತಾವೆ ಬಂದಿವಿ ಹೋ... ಹೋ.... ಏನ್ಲೇ ಬಡಕಯ್ಯ ಏನ್ ಬಂದಿದ್ದೂ.. ಎದ್ದೇಟಿಗೆ ಹೆಂಡ್ತಿ ಜೊತ್ಗೇ ನಮ್ತಾವ ಸವಾರಿ ಬೆಳೆಸಿದಿ. ಬುದ್ದೀ ನಿಮ್ತಾವ.....ವಸಿ ಮಾತಾಡಬೇಕಿತ್ತು.

ಬಡಪ್ಪ ತಲೆ ಎತ್ತದೆ ಉಸುರಿದ ನನ್ತಾವ ಏನ್ ಮಾತಲೇ ನಿನ್ದು, ಹೆಬ್ಬೆಟ್ಟು ಒತ್ತಿದ್ದು ಆಗ್ಲೇ ಮುಗಿದಿರಬೇಕಲ್ಲ. ಕಂಚೋಬಳನ ಆಣೇ ಅದ್ರ ಬಗ್ಗೆ ಅಲ್ಲ ದ್ಯಾವ್ರೇ ನಾನು ಹೇಳಿದ್ರೆ ನೀವು ಏನಂದ್ಕೋತಿರೋ ಏನೋ.. ದುರ್ಗದ ಕ್ವಾಟೆ ಏನಾರ ಕೊಂಡ್ಕೊಳ್ಳೋ ವಿಷ್ಯ ಮಾತಾಡ್ಬೇಕಿತ್ತೇನೋ...

ಅದೇನ್ ಬೊಗಳಿ ಹೋಗ್ಲೇ ಬೋಳಿಮಗ್ನೇ ಮಾತಿಗೆ ಮಾತುಗಳು ಅಡ್ಡ ಬಂದು ಗೌಡ ತುಸು ಕೋಪಗೊಂಡಿದ್ದ. ನಡಬಗ್ಗಿಸಿದ ಬಡಪ್ಪ ತಲೆಗೆ ಸುತ್ತಿದ್ದ ವಸ್ತ್ರ ಬಗಲಿಗಿಟ್ಟವನೇ ನೆಲ ದಿಟ್ಟಿಸಿದ.
ಮಾತಿಗೆ ಮತ್ತೇ ಅಡ್ಡ ಹೋದದ್ದು ಸೂರವ್ವನೇ. ಬುದ್ಧಿ ನಾನಾರ ಏನ್ ಹೇಳ್ಲಿ
, ಇವ್ನ ಮೈಯಾಗೆ ಯಾವ್ದೋ ದೆವ್ವ ಹೊಕ್ಕೈತೆ! ಈಗ ಮೂರು ನಾಲ್ಕು ದಿನದಿಂದ ಸರಿಯಾಗಿ ಉಣ್ತಾ ಇಲ್ಲ, ಅದೇನೋ ಕಟ್ಟೆ ಅಂತವ್ನೇ! ಹಾಳಾದ್ದು ಕಟ್ಬೇಕೂ ಅಂತವ್ನೆ? ಓಬಳದೇವ್ರಗುಡ್ಡ, ಜಿನಿಗೆಹಳ್ಳ, ನೀರು, ನಮ್ಮೂರ ಗುಡ್ಡಗಳು, ಏನೇನೋ ಮಾತಾಡ್ತವ್ನೇ  ಅದ್ಕ ಇಲ್ಲಿಗೆ ಕರ್ಕಂಬಂದೆ.
ಅಂದ್ರೇ
?ನನ್ಮನೆ ಏನ್ ಆಸ್ಪತ್ರೆನಾ ನಿಮ್ಗೇ, ಇವ್ನು ಹುಚ್ಚಾ ಅಂತ ಈಗ ನನ್ ತಲೀ ತಿನ್ನಾಕ್ ಬಂದೀ  ಗುಡಿಯಾಗೆ ಹೋಗಿ ನೀರಾಕ್ಸಿ, ನಾಕು ನಿಂಬೆಹಣ್ಣು ಕೊಯ್ಸು ಸರಿ ಹೋದೀತು.

ಅಲ್ಲಿವರೆಗೂ ಮೌನವಹಿಸಿದ್ದ ಬಡಪ್ಪನಿಗೆ ಮಿಂಚು ಸಂಚಾರವಾದಂತಾಗಿ ಬಗಲಾಗಿದ್ದ ವಸ್ತ್ರವನ್ನ ಕೊಡ್ವಿ ಹೆಗ್ಲಿಗೇ ಹಾಕ್ಕೊಳ್ತಲೇ, ಗುಡಿಯಾಗೇ ನಿಂಬೆಣ್ಣು ಕೊಯಿಸ್ಕೊಳ್ಳೋ ಅಂತದ್ದು ನನ್ಗೇನು ಆಗಿಲ್ರೀ ಬುದ್ದಿಯೋರ, ಇವ್ಳು ಹೇಳ್ದಂಗೆ ನನ್ಗೆ ಯಾವ ದೆವ್ವಾನೂ ಹೊಕ್ಕಿಲ್ಲ. ಎರಡು ವರ್ಸದಿಂದ ಕಣ್ಣಿಗೆ ಕಟ್ಟಿದಂಗೈತೆ ನಮ್ ಕಷ್ಟ, ದನ ಕರುಗಳಿಗೆ ಮೇವು ನೀರಿಲ್ದೇ, ಸರತೀ ಸಾಲ್ನಾಗೇ ಕಟುಗರ ಮನೆ ತುಂಬ್ಕಂಡಿದಾವೆ, ಜನ ಹಟ್ಟಿ ಮರೆತು ಗುಳೇವು ಹೊರಟವ್ರೇ

ಅದ್ಕೇ....ನನ್ನೇ ಹೋಗೀ ಅಡ್ಡ ನಿಲ್ಲು ಅಂತಿಯೇನು? ಕೃಷ್ಣೇಗೌಡ ಥಟ್ಟನೆ ಬಡಬಡಿಸಿದ. ಹಾಗಲ್ಲ ಬುದ್ಧಿ, ನೀವು ಮನಸ್ಸು ಮಾಡಿ ಸಾಲ ಕೊಡೋದಾದ್ರೆ, ಊರಿಗೊಂದಿಷ್ಟು ನೆರವಾಗಿ ನಮಗೂ ಒಂದಿಷ್ಟು ಬದುಕು ಆದೀತು......

ಥಟ್ಟನೆ ಗೌಡನಿಗೆ ಏನೂ ತಿಳಿಯದಂತಾಗಿ, ಸೂರವ್ವಾ ಅದೇನ್ ಹೇಳ್ಬೇಕನ್ತಿದಾನೋ ಅದನ್ನ ನೇರವಾಗಿ ಹೇಳು ಅನ್ನು ನಿನ್ ಗಂಡನಿಗೆ, ಸುತ್ತಿ ಬಳಸಿ ಮಾತಾಡೋದು ಬೇಡ.
ಮನೆ ಒಳಗಿಂದ ಗೌಡ್ತಿ ರತ್ನವ್ವ ಚಾ ತಂದವ್ಳೇ ಗೌಡ್ರ ಕೈಗಿಡ್ತಾ
, ಏನೇ ಸೂರವ್ವಾ.. ಎಷ್ಟು ದಿನಾ ಆಯ್ತು ನಿನ್ನೋಡಿ, ಮೊನ್ನೆ ರಾಗಿ ಹಸ್ನು ಮಾಡ್ಸನಾಂತ ತಿಮ್ಮನ್ತಾವ ಹೇಳಿ ಕಳಿಸಿದ್ದೆ, ಸಿಗ್ಲಿಲ್ಲ ಕಣ್ರವ ಅಂತ ಬಂದು ಹೇಳ್ದ, ಇವತ್ತೇನು ಇತ್ತಕಡೆ ಬೆಳ್ಬೆಳಿಗ್ಗೆನೇ...

ಏನಂತೇ ಬಡಕಣ್ಣಂದು. ಅದೇನೋ ಗೌಡ್ರು ತವಾ ಮಾತಾಡ್ಬೇಕು ಅಂದ,ಕಣ್ರವ್ವ ಕರ್ಕಂಬಂದೆ. ಇತ್ತಿತ್ಲಾಗೆ ಕೂಲಿನೂ ಸಿಕ್ಕಾಕಿಲ್ಲ,ಅಲ್ಲೋ ಇಲ್ಲೋ ಹುಡುಕ್ಕೊಂಡು ಹೋಗಿ ಮಾಡ್ತೀವ್ನೀ. ನೀವೇಳ್ಕಳಿಸಿದ್ರೇ ಬರ್ದಂಗ್ ಇರ್ತೀನ. ಈ ಜಾಗ ನಮ್ಗೇ ನಮ್ಮಟ್ಟಿಗೆ ದೇವ್ರ ಮನೆಯಿದ್ದಂಗ ಕಣ್ರವ್ವ, ನಾಳೇನೇ ಬಂದೋಗ್ತೀನಿ, ನೀವು ಚೆಂದಕಿದೀರೇನ್ರವ್ವ.

ಗೌಡ್ತಿ ತಲೆಯಾಡುಸ್ತಿದ್ದ ಹಾಗೆನೇ  ಚಾ ಕುಡಿತಿದ್ದ ಕೃಷ್ಣೇಗೌಡ ಮದ್ಯದಾಗ ಮಾತು ಬಿಟ್ಟ ಅವ್ಳಿಗೇನಾಗೈತೆ, ಮೂರೊತ್ತು ಬಿಸಿ ಬಿಸಿದು ಮಾಡ್ಕಂತವ್ಳೇ, ಅವ್ಳು ಸುಖ ನನಿಗೆಲ್ಲೈತೆ ಸೂರವ್ವಾ, ಪಡ್ಕಂದು ಬಂದಾಳ ನನ್ನ ಮನಿಗೆ.

ಗೌಡನ ಮಾತು ರತ್ನವ್ವಗೆ ಅಷ್ಟಾಗಿ ಹಿಡಿಸಲಿಲ್ವೇನೋ ರೇಗಿದಂಗಿತ್ತು, ದುರುಗುಟ್ತಲೇ ಬರಕ್ಕನೆ ಕೈಯಾಗಿನ ಚಾ ಕಪ್ಪು ಕಿತ್ಕೊಂಡು, ಸಿಟ್ಟಿನಿಂದ ಸರಕ್ಕನೆ ಒಳ ನಡೆದಳು.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ.        ನಾಳೆಗೆ.........

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್. ಎಸ್. ಎಲ್. ಸಿ.ಪರೀಕ್ಷೆಯಲ್ಲಿ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸಹನಾಗೆ 625ಕ್ಕೆ 622 ಅಂಕ.ಬಡಪ್ಪನ ಕಟ್ಟೆ   ಕಥೆ ಭಾಗ-4 ಕುಮಾರ್ ಬಡಪ್ಪಬಡಪ್ಪನ ಕಟ್ಟೆ   ಕಥೆ ಭಾಗ-3   ಕುಮಾರ್ ಬಡಪ್ಪಬಡಪ್ಪನ ಕಟ್ಟೆ, ಕಥೆ ಭಾಗ- 2  ಕುಮಾರ್ ಬಡಪ್ಪಬಡಪ್ಪನ ಕಟ್ಟೆ..   ಕಥೆ ಭಾಗ-1  ಕುಮಾರ್ ಬಡಪ್ಪಪುಸ್ತಕಗಳೇ ಜಗತ್ತಿನ ಅತ್ಯುತ್ತಮ ಸ್ನೇಹಿತ- ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿಕನ್ನಡ ಪರೀಕ್ಷೆಯಲ್ಲಿ 19 ಸಾವಿರ ವಿದ್ಯಾರ್ಥಿಗಳು ಫೇಲ್: ಸಿ.ಟಿ. ರವಿ ಆಕ್ರೋಶಪ.ಜಾ. ಒಳಮೀಸಲಾತಿ: ಕಾಂಗ್ರೆಸ್ ವಿರುದ್ಧ ಗುಡುಗಿದ ಬಿ.ವೈ. ವಿಜಯೇಂದ್ರ​ಜನಿವಾರ ತೆಗೆಸಿದ್ದು ಖಂಡನೀಯ: ನಿಖಿಲ್ ಕುಮಾರಸ್ವಾಮಿ ಆಕ್ರೋಶ​ಜೆಡಿಎಸ್ ಜಿಲ್ಲಾ ಅಧ್ಯಕ್ಷರ ಸಭೆ: ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ತಂತ್ರ ರೂಪಿಸಿದ ಎಂ. ಕೃಷ್ಣಾರೆಡ್ಡಿ