ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವ್ಯಾಪ್ತಿಯ ಕೆಎಸ್‌ಡಿಸಿ ಹಾಗೂ ಕೆಎಸ್‌ಡಬ್ಲ್ಯುಎನ್ ಯೋಜನೆಗಳಲ್ಲಿ ಬರೋಬ್ಬರಿ 444 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಅವರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ದಾಖಲಿಸಿದ್ದಾರೆ.
ಟೆಂಡರ್ ಅಕ್ರಮದ ಗಂಭೀರ ಆರೋಪ: 2025ರಲ್ಲಿ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ಅರ್ಹತೆ ಇಲ್ಲದ ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದಕ್ಕೆ ನಿಯಮಬಾಹಿರವಾಗಿ ಟೆಂಡರ್ ನೀಡಲಾಗಿದೆ ಎಂದು ದೂರಲಾಗಿದೆ.
ಸಚಿವ ಯತೀಂದ್ರ ಪಾತ್ರದ ಬಗ್ಗೆ ಶಂಕೆ: ಈ ಟೆಂಡರ್ ಪ್ರಕ್ರಿಯೆ ನಡೆದ ಅವಧಿಯಲ್ಲಿ ಮುಖ್ಯಮಂತ್ರಿಗಳೇ ಡಿಪಿಎಆರ್ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅಂದಿನ ಮುಖ್ಯಮಂತ್ರಿಗಳ ಮಗ ಹಾಗೂ ಪ್ರಭಾವಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಅಣತಿಯ ಮೇರೆಗೆಯೇ ಈ ಅಕ್ರಮ ಟೆಂಡರ್ ಕಲ್ಪಿಸಲಾಗಿದೆ ಎಂಬುದು ದೂರಿನ ಮುಖ್ಯ ಪ್ರಮುಖ ಆರೋಪವಾಗಿದೆ. ಐಎಎಸ್ ಅಧಿಕಾರಿಗಳ ಮೇಲೆ ದೂರು: ಇ-ಆಡಳಿತ ವಿಭಾಗದ ಸಿಇಒ ಹಾಗೂ ಐಎಎಸ್ ಅಧಿಕಾರಿ ಭೂಬಾಲನ್ ಸೇರಿದಂತೆ ಪ್ರಮುಖ ಮೂವರು ಅಧಿಕಾರಿಗಳ ವಿರುದ್ಧವೂ ದೂರಿನಲ್ಲಿ ಹೆಸರಿಸಲಾಗಿದ್ದು, ಈ ಇಲಾಖೆಯ ಉನ್ನತ ಹುದ್ದೆಯಲ್ಲಿರುವವರ ಶಾಮೀಲಾತಿ ಬಗ್ಗೆಯೂ ಸಮಗ್ರ ತನಿಖೆ ನಡೆಸುವಂತೆ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ತನಿಖೆಗೆ ಒತ್ತಾಯ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಸಂಬಂಧಿತ ಹಿರಿಯ ಅಧಿಕಾರಿಗಳ ವಿರುದ್ಧ ಕೂಡಲೇ ಉನ್ನತ ಮಟ್ಟದ ತನಿಖೆ ಕೈಗೊಂಡು, ಸತ್ಯಾಸತ್ಯತೆಯನ್ನು ಹೊರಹಾಕಬೇಕೆಂದು ಲೋಕಾಯುಕ್ತರಿಗೆ ಮನವಿ ಮಾಡಲಾಗಿದೆ.




