ಚಂದ್ರವಳ್ಳಿ ನ್ಯೂಸ್, ದೊಡ್ದಬಳ್ಳಾಪುರ:
ಬೆಂಗಳೂರು ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ವಕೀಲ ಎ. ಪಿ. ರಂಗನಾಥ್ ಸ್ಪರ್ಧಿಸುತ್ತಿದ್ದು, ಅವರ ಗೆಲುವಿಗೆ ಮೈತ್ರಿ ಕೂಟದ ಉಭಯ ಪಕ್ಷಗಳು ಶ್ರಮಿಸಬೇಕಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ಶಾಸಕರ ಧೀರಜ್ ಗೃಹ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿ ರಂಗನಾಥ್ ಅವರು ೩ನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಅವರ ಗೆಲುವಿಗೆ ಉತ್ತಮ ವಾತಾವರಣ ಇದೆ. ರಂಗನಾಥ್ ರವರು ಕಳೆದೆರಡು ಬಾರಿ ಕಡಿಮೆ ಅಂತರದಿಂದ ಪರಾಜಯ ಗೊಂಡರೂ ಕೂಡ ಶಿಕ್ಷಕರ ಪರ ಅಹರ್ನಿಷಿ ಕೆಲಸ ಮಾಡಿದ್ದಾರೆ. ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಶಿಕ್ಷಕರ ಕ್ಷೇತ್ರದ ಸುಮಾರು ೭೫೦ ಮತದಾರರಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮುಖಂಡರು ಸೇರಿ ಜವಾಬ್ದಾರಿ ತೆಗೆದುಕೊಂಡು ರಂಗನಾಥ್ ರವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವಾಗಿ ಎಲ್ಲಾ ತಂತ್ರಗಾರಿಕೆ ನಡೆಸಲು ಎನ್‌ಡಿಎ ಮೈತ್ರಿ ಕೂಟ ಸಿದ್ದವಿದೆ.ರಂಗನಾಥ್ ಅವರು ಶಿಕ್ಷಕರ ಪರ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯ ಎನ್‌ಡಿಎ ಸಭೆಯಲ್ಲಿ ಚುನಾವಣೆಯ ಬಗ್ಗೆ ಪಕ್ಷದ ಮುಖಂಡರು ಮಾತನಾಡಿ ಮಾರ್ಗದರ್ಶನ ನೀಡಿದ್ದಾರೆ. ನಾನು ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ನನಗೆ ಶಕ್ತಿ ತುಂಬಲು ಎ.ಪಿ. ರಂಗನಾಥ ಅವರನ್ನು ಆಯ್ಕೆಮಾಡಬೇಕಿದೆ. ಅ.೨೩ ರಂದು ನಡೆಯುವ ಚುನಾವಣೆಯಲ್ಲಿ ಮತದಾನಕ್ಕೆ ಎಲ್ಲಾ ಶಿಕ್ಷಕರು ಹಾಜರಾಗಬೇಕು. ಮತದಾನದ ಹಕ್ಕನ್ನು ತಪ್ಪಿಸಿಕೊಳ್ಳಬಾರದು ಎಂದರು.
ಎನ್‌ಡಿಎ ಅಭ್ಯರ್ಥಿ ಎ.ಪಿ ರಂಗನಾಥ ಮಾತನಾಡಿ, ಎನ್‌ಡಿಎ ಮೈತ್ರಿಕೂಟದ ಮುಖಂಡರೊಂದಿಗೆ ಚುನಾವಣೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು ೨೩೮೦೦ ಮತದಾರರು ಇದ್ದಾರೆ. ನನಗೆ ಒಂದು ಬಾರಿ ಅವಕಾಶ ನೀಡಿದರೆ ಶಿಕ್ಷಕರ ಪರವಾಗಿ ಕೆಲಸ ಮಾಡುವೆ. ಹಿಂದೆ ಸೋತರು ಕೂಡ ಶಿಕ್ಷಕರ ಸಮಸ್ಯೆಗಳಿಗೆ ಹೋರಾಟ ಮಾಡಿರುವೆ ಅದನ್ನು ಈಗಲೂ ಮುಂದುವರೆಸುತ್ತೇನೆ. ಅನುದಾನ ರಹಿತ ಶಿಕ್ಷಕರಿಗೆ ಪ್ಯಾಕೇಜ್ ನೀಡಲು ಈ ಹಿಂದೆ ಹೋರಾಟ ಮಾಡಿರುವೆ. ಅನುದಾನರಹಿತ ಶಿಕ್ಷಕರಿಗೆ ಆರೋಗ್ಯ ವಿಮೆ ಕೊಡಿಸಲು ಕೆಲಸ ಮಾಡುತ್ತಿದ್ದೇನೆ. ಎನ್‌ಡಿಎ ಮೈತ್ರಿ ಕೂಟ ಗಟ್ಟಿಯಾಗಿದೆ. ದೊಡ್ಡಳ್ಳಾಪುರ ಶಾಸಕರು ನನ್ನ ಜತೆ ನಿಲ್ಲುವ ವಿಶ್ವಾಸವಿದೆ ಎಂದರು.
“ಎಂ.ಎಲ್.ಸಿ. ಚುನಾವಣೆಯಲ್ಲಿ ಎರಡು ಪಕ್ಷ ಮುಖಂಡರು ಒಮ್ಮತದಿಂದ ಕೆಲಸ ಮಾಡುತ್ತೇವೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಕೂಡ ಅದನ್ನು ಮರೆತು ಕೆಲಸ ಮಾಡುತ್ತೇವೆ. ರಂಗನಾಥ್ ಅವರು ಕಳೆದೆರಡು ಬಾರಿ ಅಲ್ಪ ಮತದಾನದಿಂದ ಸೋಲು ಕಂಡಿದ್ದರು. ಈ ಬಾರಿ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇವೆ. ಎಂಎಲ್‌ಸಿ ಚುನಾವಣೆಯ ಫಲಿತಾಂಶವೂ ಮುಂದಿನ ಚುನಾವಣೆಗಳ ದಿಕ್ಸೂಚಿ ಆಗುತ್ತದೆ”. ಹರೀಶ್ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ.
ಈ ವೇಳೆ ಬಿಜೆಪಿ ಮುಖಂಡರಾದ ಬಂತಿ ವೆಂಕಟೇಶ್, ನಾಗೇಶ್, ಮುದ್ದಪ್ಪ, ಜೆಡಿಎಸ್ ಮುಖಂಡರಾದ ತ.ನ ಪ್ರಭುದೇವ್, ಕೆಂಪರಾಜು, ಜಿ. ಸತ್ಯನಾರಾಯಣ, ಅಂಜನ್ ಗೌಡ ಸೇರಿದಂತೆ ಉಭಯ ಪಕ್ಷಗಳ ಹಲವಾರು ಮುಖಂಡರು ಹಾಜರಿದ್ದರು.




