ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದಿಂದ ಲೋಕಾಯುಕ್ತದಲ್ಲಿ ಜಾಗೃತ ದಳದ ರಚನೆ ಮಾಡಲು ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ, ಭ್ರಷ್ಟಾಚಾರ ನಿಗ್ರಹ ದಳವು ತನ್ನದೇ ಆದ ಸಂಸ್ಥೆಯೊಳಗಿನ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಹೋರಾಡಲು ಒಂದು ವಿಭಾಗ ಸ್ಥಾಪಿಸಲು ಮುಂದಾಗಿದೆ.
ರಾಜ್ಯ ಸರ್ಕಾರಕ್ಕೆ ಒಬ್ಬ ಹಾಲಿ ಜಿಲ್ಲಾ ನ್ಯಾಯಾಧೀಶರು, ಒಬ್ಬ ಎಸ್‌ಪಿ, ಒಬ್ಬ ಡಿವೈಎಸ್‌ಪಿ, ಇಬ್ಬರು ಇನ್ಸ್‌ಪೆಕ್ಟರ್‌ಗಳು ಮತ್ತು ಇತರರು ಸೇರಿದಂತೆ 24 ಮಂದಿಯನ್ನೊಳಗೊಂಡ ಜಾಗೃತ ದಳ ರಚಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮನವಿ ಮಾಡಿದ್ದರು.
ಇದಲ್ಲದೆ 339 ಹುದ್ದೆಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ, ನಾವು ರಿಜಿಸ್ಟ್ರಾರ್ ನೇತೃತ್ವದಲ್ಲಿ ಜಾಗೃತ ದಳವನ್ನು ರಚಿಸಿದ್ದೇವೆ ಎಂದು ನ್ಯಾಯಮೂರ್ತಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತವು 25,000 ಪ್ರಕರಣಗಳನ್ನು ನಿರ್ವಹಿಸುತ್ತಿದೆ. ಲೋಕಾಯುಕ್ತ ಸಂಸ್ಥೆಗೆ ಒಟ್ಟು1,929 ಸಿಬ್ಬಂದಿ ಅಗತ್ಯವಿದೆ, ಆದರೆ ಸದ್ಯ 1,309 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ (ACB)ದಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರ 120 ಸಿಬ್ಬಂದಿಯೊಂದಿಗೆ ವರ್ಗಾಯಿಸಿತು. ACB ರಚನೆಯ ನಂತರ ರದ್ದುಗೊಂಡ ಜಾಗೃತ ದಳವನ್ನು ಸ್ಥಾಪಿಸಲು ಅಸ್ತಿತ್ವದಲ್ಲಿರುವ ಸಿಬ್ಬಂದಿ ಬಳಸಿಕೊಳ್ಳುವಂತೆ ಕೇಳಲಾಯಿತು.
ಲೋಕಾಯುಕ್ತದ ಪ್ರಧಾನ ಕಚೇರಿ ಮತ್ತು ಜಿಲ್ಲಾ ಕಚೇರಿಗಳಿಗೆ ACB ಸಿಬ್ಬಂದಿಯನ್ನು ಪುನರ್ವಿತರಣೆ ಮಾಡಲಾಗಿದ್ದು ಮತ್ತು ಅನೇಕ ಹುದ್ದೆಗಳು ಖಾಲಿಯಿರುವುದರಿಂದ ಜಾಗೃತ ದಳ ರಚಿಸಲಾಗಲಿಲ್ಲ. ಕಳೆದ ವಾರ ಐಪಿಎಸ್ ಅಧಿಕಾರಿ, ಮಾಜಿ ಎಸ್ಪಿ ಶ್ರೀನಾಥ್ ಎಂ ಜೋಶಿ ಅವರು ಸರ್ಕಾರಿ ಅಧಿಕಾರಿಗಳನ್ನು ಸುಲಿಗೆ ಮಾಡುವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಪ್ರಾಥಮಿಕವಾಗಿ ಬೆಳಕಿಗೆ ಬಂದ ನಂತರ, ನಾನು ಪೊಲೀಸ್ ಅಧಿಕಾರಿಗಳೊಂದಿಗೆ ವ್ಯವಹರಿಸುವುದನ್ನು ನಿಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.
ADGP ಮತ್ತು IGP ಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪೊಲೀಸ್ ವಿಭಾಗವನ್ನು ಸುಗಮಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ನ್ಯಾಯಮೂರ್ತಿ ಪಾಟೀಲ್ ತಿಳಿಸಿದರು.
ಚಿಕ್ಕಮಗಳೂರು, ಗದಗ, ಹಾವೇರಿ, ವಿಜಯನಗರ, ಮಡಿಕೇರಿ, ಬೀದರ್, ಚಾಮರಾಜನಗರ, ಕೊಪ್ಪಳ ಮತ್ತು ಉಡುಪಿಯಂತಹ ಒಂಬತ್ತು ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಎಸ್‌ಪಿ ಹುದ್ದೆಗಳನ್ನು ಮಂಜೂರು ಮಾಡಿಲ್ಲ. 38 ಪೊಲೀಸ್ ಅಧಿಕಾರಿಗಳಿಗೆ 44 ವಾಹನಗಳನ್ನು ಖರೀದಿಸಲು 4.44 ಕೋಟಿ ರೂ.ಗಳ ಮಂಜೂರಾತಿಗೆ ಲೋಕಾಯುಕ್ತರು ಸಲ್ಲಿಸಿದ ಮನವಿಯೂ ಬಾಕಿ ಉಳಿದಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.


