ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ, ವಿನೂತನ ಶೈಲಿ ಹಾಗೂ ಹಿರಿಯೂರು-ಚಳ್ಳಕೆರೆ ಭಾಗದ ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ (65) ಅವರು ಮೇ 10 ರಂದು ಶನಿವಾರ ಮುಂಜಾನೆ 03:45 ಗಂಟೆಗೆ ವಿಧಿವಶರಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ಶ್ವಾಸಕೋಶದ ಸೋಂಕಿನಿಂದಾಗಿ ಕೋಮಾದಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಆಯಿಲ್ ನಗರಿಯಿಂದ ಹಿರಿಯೂರಿನವರೆಗೆ ತಮ್ಮದೇ ರಾಜಕೀಯ ಸಾಮ್ರಾಜ್ಯ ಕಟ್ಟಿದ್ದ ನಾಯಕನ ಅಗಲಿಕೆಯಿಂದ ಜಿಲ್ಲೆಯಾದ್ಯಂತ ಶೋಕ ಮಡುಗಟ್ಟಿದೆ.
ವಿಶಿಷ್ಟ ಶೈಲಿಯ ಜನನಾಯಕ:
ಡಿ. ಸುಧಾಕರ್ ಎಂದರೆ ನೆನಪಾಗುವುದೇ ಅವರ ಆ ರಾಜ ಗಾಂಭೀರ್ಯ. ಕಾರಿನಿಂದ ಇಳಿಯುವಾಗ ಹಾರುವ ತಲೆಗೂದಲುಗಳನ್ನು ಸರಿಪಡಿಸಿಕೊಳ್ಳುವ ಶೈಲಿ, ಬೆರಳ ಸಂಧಿಯಲ್ಲಿನ ಸಿಗರೇಟು ಮತ್ತು ಜನರ ಹೆಗಲ ಮೇಲೆ ಕೈಹಾಕಿ ನಡೆಯುತ್ತಿದ್ದ ಆ ಆತ್ಮೀಯತೆ ಅಪಾರ.
ಅಭಿಮಾನಿಗಳ ಆರಾಧ್ಯ ದೈವ: ಎಷ್ಟೇ ಅವಸರವಿದ್ದರೂ ಪಕ್ಕದಲ್ಲಿ ಉನ್ನತ ಅಧಿಕಾರಿಗಳಿದ್ದರೂ ಜನ ಸಾಮಾನ್ಯರನ್ನು ಕಂಡರೆ ಗಾಡಿ ನಿಲ್ಲಿಸಿ ಕುಶಲೋಪರಿ ವಿಚಾರಿಸುತ್ತಿದ್ದ ಗುಣ ಅವರದು. ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು, ವೇದಿಕೆ ಏರಿದರೆ ಸಾಕು ಗಂಟೆಗಟ್ಟಲೆ ಅಭಿಮಾನಿಗಳ ಜಯಕಾರ ಮೊಳಗುತ್ತಿತ್ತು.
ರಾಜಕೀಯ ಪಯಣ ಮತ್ತು ಸಾಧನೆ-
ಜೈನ ಸಮುದಾಯದ ಪ್ರಬಲ ನಾಯಕರಾಗಿದ್ದ ಸುಧಾಕರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ಸೆವೆನ್ ಹಿಲ್ಸ್ ಕಂಪನಿ ಆರಂಭಿಸಿ ಮದ್ಯ(ಸಾರಾಯಿ) ಉದ್ಯಮದಲ್ಲಿದ್ದ ಇವರು, ನಂತರ ಹಿರಿಯೂರು ಮತ್ತು ಚಳ್ಳಕೆರೆ ಭಾಗದ ಮುಂಚೂಣಿ ನಾಯಕರಾಗಿ ಬೆಳೆದರು.
2003: ಚಳ್ಳಕೆರೆ ಕ್ಷೇತ್ರದಿಂದ ಪ್ರಥಮ ಬಾರಿಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆ.2008: ಕ್ಷೇತ್ರ ಮರುವಿಂಗಡಣೆಯ ನಂತರ ಹಿರಿಯೂರು ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದು ತಮ್ಮ ಶಕ್ತಿ ಪ್ರದರ್ಶಿಸಿದರು. 2018-2013ರ ಅವರ ಅವಧಿಯಲ್ಲೇ ಬಿಜೆಪಿಗೆ ಬೆಂಬಲ ಕೊಟ್ಟು ಸಮಾಜ ಕಲ್ಯಾಣ ಸಚಿವರೂ ಆಗಿ ಕೆಲಸ ಮಾಡಿದ್ದಾರೆ.
ನಂತರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಹಿರಿಯೂರಿನಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. 2023ರಲ್ಲಿ 3ನೇ ಸಲ ಶಾಸಕರಾಗಿ ಆಯ್ಕೆಯಾದ ನಂತರ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದರು.



