ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸರ್ಕಾರ ಸಚಿವಾಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಡಿ 2024-25 ನೇ ಸಾಲಿಗೆ ಒಂದು ವರ್ಷದ ಅವಧಿಗೆ 5 ಅಪ್ರೆಂಟಿಸ್ ಟ್ರೈನಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸ ಬಯಸುವ ಅರ್ಹ ಅಭ್ಯರ್ಥಿಗಳು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಿಪ್ಲೊಮಾ ಪಡೆದಿರಬೇಕು. ನಿಗದಿತ ಶಿಕ್ಷಣಾರ್ಹತೆಯನ್ನು 2022ರ ಮೇ ತಿಂಗಳ ನಂತರ ಪಡೆದವರು ಮಾತ್ರ ಈ ತರಬೇತಿಗೆ ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳನ್ನು ಅವರು ಗಳಿಸಿದ ಅಂಕಗಳ (ಮೆರಿಟ್) ಹಾಗೂ ಮೀಸಲಾತಿಯ ಆಧಾರದ ಮೇಲೆ ನಿಯಮಾನುಸಾರ ಆಯ್ಕೆ ಮಾಡಲಾಗುವುದು.
ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರಾಗಿದ್ದರೆ ಅಂತಹವರು ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಆಯ್ಕೆಯಾದವರಿಗೆ ಮಾಹೆಯಾನ 8 ಸಾವಿರ (ರೂ. 4000/- ಗಳನ್ನು ರಾಜ್ಯಸರ್ಕಾರದಿಂದ ಹಾಗೂ ರೂ. 4000/-ಗಳನ್ನು ಅಪ್ರೆಂಟಿಸ್ ಬೋರ್ಡ್ ಅವರಿಂದ ನೇರವಾಗಿ ಅಪ್ರೆಂಟಿಸ್ ಟ್ರೈನಿಗಳ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಾಗುವುದು) ಗಳನ್ನು ಪಾವತಿಸಲಾಗುವುದು.
ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮುಂತಾದ ವಿವರಗಳೊಂದಿಗೆ ಪ್ರಧಾನ ಮುಖ್ಯ ಗ್ರಂಥಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ, ಸಚಿವಾಲಯ ಗ್ರಂಥಾಲಯ ಕೊಠಡಿ ಸಂಖ್ಯೆ 11, ನೆಲಮಹಡಿ, ವಿಧಾನಸೌಧ, ಬೆಂಗಳೂರು-560001 ಇವರಿಗೆ ಫೆಬ್ರವರಿ 12 ರ ಒಳಗಾಗಿ ಸಲ್ಲಿಸತಕ್ಕದ್ದು.
ಅರ್ಜಿಯೊಂದಿಗೆ ದೃಢೀಕರಿಸಲಾಗಿರುವ ಎಸ್ಎಸ್ಎಲ್ಸಿ. ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಿಪ್ಲೊಮಾ ಹೊಂದಿರುವ ಬಗ್ಗೆ ಪ್ರಮಾಣಪತ್ರ/ತಾತ್ಕಾಲಿಕ ಪ್ರಮಾಣಪತ್ರ (Provisional Certificate) ಗಳನ್ನು ಕಡ್ಡಾಯವಾಗಿ ಲಗತ್ತಿಸುವುದು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080-22033462/3011 ಅಥವಾ ಇ-ಮೇಲ್ ವಿಳಾಸ [email protected] ನ್ನು ಸಂಪರ್ಕಿಸಬಹುದು ಎಂದು ಸಚಿವಾಲಯ ಗ್ರಂಥಾಲಯದ ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ ಹಾಗೂ ಪ್ರಧಾನ ಮುಖ್ಯ ಗ್ರಂಥಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


