ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಕಾಲಕ್ಕೆ ಮಳೆ ಬಾರದೆ ಕೆರೆ ಕಟ್ಟೆಗಳೆಲ್ಲಾ ಬರಿದಾಗಿ ಕೊಳವೆ ಬಾವಿಗಳ ಹೆಚ್ಚಳದಿಂದಲೋ,ಏನೋ? ಅಂತರ್ಜಲ ಕೆಳ ಸರಿದೂ, ಸೇದೋ ಬಾವಿಗಳೆಲ್ಲಾ ಬತ್ತೋಗಿದ್ವು.
ಕಳೆದ ವರ್ಷ ಕುಡಿಯೋ ನೀರಿನ ಯೋಜನೆಯಡಿಯಲ್ಲಿ ಕೃಷ್ಣೇಗೌಡನ ರೆಕಮೆಂಡಿಗೆ,ಪಂಚಾಯ್ತಿಯವ್ರು ಕೊರೆಸಿದ್ದ ಕೊಳವೆ ಬಾವಿ ಮಾತ್ರ ಹಟ್ಟಿಯ ದಾಹ ಹಿಂಗಿಸುತ್ತಿತ್ತಾದ್ರೂ, ವಿದ್ಯುತ್ ಅಭಾವದಿಂದಾಗಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯ್ಸಿತ್ತು.
ಮುದ್ದಾಪುರದ ಗುಡ್ಡದ ಕಡೆಯಿಂದ ಹರಿಯೋ ಜಿನಗಿಹಳ್ಳದ ದಿಬ್ಬದ ಮಗ್ಗುಲಿಗೇ ಬಡಪ್ಪನ ಹೊಲ. ಗುಡ್ಡದ ತಪ್ಲಾಗಿನ ಮೂರು ಎಕ್ರೆಯಾಗೆ ಬಿತ್ತಿ ಬೆಳೆ ತೆಗೆದಿದ್ದೇ ಅಪರೂಪ. ವರ್ಷಕ್ಕಾಗುವಷ್ಟು ಉಣ್ಣೋ ಕಾಳು ಬಿತ್ಕಂಡು, ಇನ್ನೂ ಬದುಕೆಲ್ಲಾ ಕೂಲಿ ಕರೆದವರ ಹೊಲ್ದಲ್ಲೇ ಕಳೆದು ಹೋಗ್ತಿತ್ತು.
ಗಂಡ ಸಣ್ಣಿಂಗ ಇದ್ರೂವೇ ನೆರಿಕೆ ಹೋಟ್ಲಿಗೆ ಗೌರವ್ವನ ಹೆಸರು ಬಂದದ್ದು ಆ ಕೃಷ್ಣೇಗೌಡನ ಕೃಪೆಯಿಂದಲೇ. ಕಂಡೂ ಕಾಣ್ದವ್ನಂತೆ ಸಣ್ಣಿಂಗ ಮಾತ್ರ ಗಿರಾಕಿಗಳು ತಿಂದ ಪ್ಲೇಟು ಲೋಟ ತೆಗಿತ ಸಪ್ಲೈ ಮಾಡ್ಕಂಡು ಕಂಡವ್ರ ಮುಂದೆ ಓನರ್ ತರ, ಮೀಸೆ ತಿರುವಾಡ್ಕಂಡೇ ಇದ್ದ.
ಅಲ್ಲಿಗೆ ಗೌಡ ಹೊಕ್ಕಿ ಬರ್ತಿದ್ದುದು ಗೊತ್ತಾಗಿದ್ರುವೇ ಮಂದಿ ಮಾತ್ರ ನಮಿಗ್ಯಾಕೆ ಇದರ ಉಸಾಬರಿ ಅಂತ ಯಾರೂ ತುಟಿ ಬಿಚ್ತಿರಲಿಲ್ಲ, ಹಾಗಾಗಿ ನೆರಿಕೆ ಹೋಟ್ಲು ಡಿಮ್ಯಾಂಡಿಗೆ ಬಿದ್ದು ಗೌರವ್ವನ ಹೋಟ್ಲಾಗಿ ಬದ್ಲಾಗಿತ್ತು.
ಹೋಟ್ಲು ಮುಂದಕ್ಕ ಬಂದ ಭೀಮಣ್ಣ ಮತ್ತು ಕಂಚಪ್ಪ,ಬಡಪ್ಪನೂ ಅಲ್ಲೇ ಕುಳಿತಿದ್ದನ್ನ ಗಮನಿಸಿ, ಅವ್ನ ಪಕ್ಕಾನೇ ಬಂದ್ರು.
ಬಡಪ್ಪನಂತೂ ಯಾವುದೋ ಒಂದು ಮಹತ್ತರವಾದ ಯೋಜನೆಯನ್ನ ಮೈಗೂಡಿಸ್ಕೊಂಡವ್ನ ಹಾಗೆ,ಇವ್ರು ಬಂದದ್ದೂ ಗಮನಿಸ್ದೇ, ಯಾವ್ದೋ ದ್ಯಾಸದಲ್ಲಿ ಕಳೆದ್ಹೊಗಿದ್ದ.
ಇವ್ನು ಮೈಮರೆತು ಕುಂತಿದ್ದನ್ನ ಕಂಡು ಅವ್ರೇ ಮಾತ್ನಾಡಿಸಿದ್ರು. ಅಲ್ಲೋ ಬಡಕಯ್ಯ ಅದ್ಯಾಕಂಗೆ ಕುಂತಿದೀ, ಗುಳೇವು ಹೊರಡಾಕೆ ಚಿಂತೆ ಮಾಡ್ತಿದಿಯೇನು? ಅಂದ ಕೆಂಚಪ್ಪನ ಮಾತಿಗೆ, ಹಟ್ಟಿನೇ ಬರಿದಾಗ ಹೊತ್ತು ಬಂದೈತೆ ಪಾಪ ಅವ್ನಾರ ಏನು ಮಾಡಿಯಾನು, ಭೀಮಣ್ಣನೂ ಸಹ ಮಾತಿಗೆ ಹಿಮ್ಮೇಳ ಸೇರಿಸಿದ.
ಕರುವಿನಕಟ್ಟೆ ಗೌಡ್ನತ್ರ ಹೆಬ್ಬಟ್ಟು ಒತ್ತಿ, ದುಡ್ಡು ಕಿತ್ಕೊಂಡ್ ಬಂದ್ ಕುನ್ತಂಗಿದೆ. ಭೀಮಣ್ಣ ಕಂಚಪ್ಪನ ಮಾತಿನ ಸವಾರಿ ಹಾಗೆಯೇ ಮುಂದುವರೆದಿದ್ವು.
ಗೌರವ್ವನ ಕೈಯಿಂದ ಹಿಟ್ಟು ಹಚ್ಕಿಸ್ಕೊಂಡ ಮೆಣಸಿನಕಾಯಿಗಳು,ಕಾದ ಎಣ್ಣೆ ಬಾಣ್ಲಿಗೆ ಇಳಿಯುತ್ತಾ ಚುರ್ ಚುರ್ ಸದ್ದು ಮಾಡತೊಡಗಿದ್ವು. ಮಂಡಕ್ಕಿ ಒಗ್ಗರಣೆ, ಬಿಸಿ ಮೆಣಸಿನ ಕಾಯಿಯ ಘಮ ಹೋಟ್ಲು ತುಂಬೆಲ್ಲ ಸುತ್ಕೊಂಡು ಓಣಿಯಾಗಿನ ಜನಕ್ಕೆ ಕೈ ಬಿಸಿ ಕರೆದಂತಿದ್ವು.
ಸಣ್ಣಿಂಗ ಮೂರು ಕಪ್ ನೀರು ಇವ್ರ ಎದುರುಗಿಟ್ಟವನೇ, ಹೇಳ್ರೋ ಮಾರಾಯ್ರ ಏನ್ ಕೊಡ್ಲಿ ನಿಮ್ಗ? ಎಲ್ಲೈತೋ ಸಣ್ಣಿಂಗಣ್ಣ ಏನಾರಾ ತಿನ್ನಕೆ, ಇರೋ ಆಟೀಟು ಹೊಲನ ಆ ಗೌಡಗೇ ಅಡ ಇಟ್ಟು ಮುದ್ದಿಗೆ ಕಾಳು ತಂದೀವಿ, ಇನ್ನು ಹೆಂಡ್ರು ಒಂದ್ಕಡೆ ನಾವು ಒಂದ್ಕಡೆ ದುಡದ್ರೆನೇ ಬದ್ಕು.
ಲೇ ನಿಮ್ ಕಥೆ ಕೇಳಕ್ ನಾನ್ ನಿಂತಿಲ್ಲ ಏನ್ ಬೇಕು ಹೇಳ್ರಲೇ ಬಡ ಬಡ. ಕಂಚಪ್ಪ ಬಡಪ್ಪನ ಹೆಗಲಿಗೆ ಕೈಯಿಟ್ಟು, ಬಡಕಯ್ಯ ನಿನ್ನೇ ನೋಡಿ ಬಂದ್ ಕುಂತ್ವಿ ಗೌರವ್ವನ ಹಳೆ ಬಾಕಿನೇ ಇನ್ನೂ ಕೊಟ್ಟಿಲ್ಲ, ನೆನ್ನೆ ಇದ್ಕೇನೇ ಆ ಗೌಡ ಸಿಟ್ಟಾಗಿ, ತಿಂದ ದುಡ್ಗುಳ್ನ ಕೊಡ್ರಲೇ ಅಂತ ಗದರಿಸಿದ, ಗೌರವ್ವ ಸುಮ್ನಿದ್ರೂ ಅವ್ನು ಸುಮ್ನಿರಾಕಿಲ್ಲ.
ಮಾತು ಸಣ್ಣ ದನಿಯಲ್ಲಿದ್ದದ್ದನ್ನ ಕೇಳಿಸ್ಕಂಡ ಸಣ್ಣಿಂಗ ಅವ್ರಿವ್ರೂ ಕೇಳಿಸ್ಕಂಡ್ರೆನೋ ಅನ್ನೋ ಸಿಟ್ಟಿನಿಂದ ಬಿಟ್ಟಿ ಮಾತ್ ಬಿಟ್ಟು ಏನ್ ಬೇಕು ಹೇಳ್ರಲೇ ಬೇವರ್ಸಿಗಳ ಅಂದ. ಬಾಕಿ ಕೊಡೋದ್ನ ಮಾತಾಡಿದ್ರೆ ನೀನ್ಯಾಕ್ ಸಿಟ್ಟಾಗ್ತೀ, ಭೀಮಣ್ಣನ ಸಿಡುಕಿನ ಮಾತುಗಳು ಸಹ ಅಷ್ಟೇ ಖಡಕ್ಕಾಗಿಯೇ ಬಂದಿದ್ವು.
ಲೇ ಬಡಕಯ್ಯ ಇಲ್ಲಿ ಗ್ವಾಡೆ ಗ್ವಾಡೆಗೂ ಕಿವಿಗಳು, ಯಾಕ್ಬೇಕು ನಮ್ಗೆ ದೊಡ್ಡವ್ರ ಸುದ್ದಿ, ನೀನೇ ಚಾ ಹೇಳ್ಬಿಡು ಅಷ್ಟೇ ಸಾಕು ಅಂದ ಕೆಂಚಪ್ಪ. ಎಲ್ಲೋ ಹರಿದಾಡ್ತಿದ್ದ ಮನಸ್ಸಿಗೆ ಇವ್ರು ಹೇಳ್ತಿದ್ದುದು ಕೇಳಿಸಿದಂತಾಗಿ ಎಚ್ಚೆತ್ತವನಂತೆ ಬಡಪ್ಪ ಏನಂದ್ರೀ ಏನಾರ ತಿಂಡಿ ತಿನ್ರಲೇ ರೊಕ್ಕ ನಾನು ಕೊಡ್ತೀನಿ. ನಮ್ಗೇನು ಬೇಡ್ವೊ ಮಾರಾಯ ಚಾ ಕುಡಿಸಿದ್ರೆ ಸಾಕು, ಬೀಡಿ ಬಾಯಿಗಿಡ್ತ ಕಂಚಪ್ಪ ದನಿಗೂಡಿಸಿದ ಸಣ್ಣಿಂಗಪ್ಪ ಮೂರು ಕಪ್ ಚಾ ಕೊಡು ಹತ್ರುಪಾಯಿ ಗಿರಾಕಿಗಳು ಈಟೊತ್ತು ನಿಲ್ಲಿಸ್ತೀರಲ್ಲೋ ಈ ಹೋಟ್ಲಾಗೆ ಚಾಕ್ರಿ ಮಾಡಾಕೆ ಸಾಕಾಗ್ತದೆ ಅಂತ ಬೇಸರದಿಂದ, ಲೇ ಗೌರಾ ಮೂರ್ ಕಪ್ ಚಾ ಹಾಕೆ,ಹೆಂಡ್ತಿಗೆ ಕೂಗಿ ಹೇಳಿ ಸಿಡುಕಿನಿಂದಲೇ ಸಣ್ಣಿಂಗ ಚಾ ತರಲು ಹೋದ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ.......


