ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಜಗಜ್ಯೋತಿ ಬಸವಣ್ಣ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶ್ರೀ ದೇವರಾಜ್‌ಅರಸ್‌ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ತಳಸಮುದಾಯಗಳ ದನಿಯಾಗಿ, ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣನವರು ಮಹತ್ತರವಾದ ವಚನಗಳ ಮೂಲಕ ಸಮಾಜದ ದನಿಯಾಗಿದ್ದಾರೆ. ಎಲ್ಲ ಕಾಲಕ್ಕೂ ಸಲ್ಲುವ ಮೌಲ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸಮಸಮಾಜ ನಿರ್ಮಾಣದ ಆಶಯವನ್ನು 12ನೇ ಶತಮಾನದಲ್ಲೇ ಪ್ರತಿಪಾದಿಸಿದರು. ಆದರೆ ಇಂದಿಗೂ ಮರ್ಯಾದಾ ಹತ್ಯೆಯಂತಹ ಪ್ರಕರಣಗಳು ಸಮಾಜದಲ್ಲಿ ನಡೆಯುತ್ತಿರುವುದು ವಿಷಾದನೀಯ ಎಂದರು.
ಸಾಮಾಜಿಕ ನ್ಯಾಯದ ಹೋರಾಟಗಾರ:
ಬಸವಣ್ಣನವರ ವೈಚಾರಿಕ ನಿಲುವುಗಳ ಕುರಿತು ಉಪನ್ಯಾಸ ನೀಡಿದ ಲಯನ್ಸ್‌ಕ್ಲಬ್‌ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಬಸವಣ್ಣನವರು ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಾಯಕ, ವಿಶ್ವಗುರು ಮತ್ತು ಈ ನೆಲದ ಮೊದಲ ಸಾಮಾಜಿಕ ನ್ಯಾಯದ ಹೋರಾಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ವಂಚಿತ ಸಮುದಾಯಗಳನ್ನು ತಬ್ಬಿಕೊಂಡು ನಡೆದದ್ದು ಬಸವ ಚಳುವಳಿ. ಸರ್ವಕಾಯಕಗಳಿಗೆ ವೃತ್ತಿ ಘನತೆಯನ್ನು ತಂದು ಕೊಟ್ಟು ಅವುಗಳನ್ನು ಸತ್ಯಶುದ್ಧ ಕಾಯಕವೆಂದು ಗೌರವಿಸಿದವರು ಬಸವಣ್ಣನವರು.ಕನ್ನಡ ನೆಲದ ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ನಾಯಕ ಅವರು ಎಂದು ತಿಳಿಸಿದರು.
ಮನುಧರ್ಮ ಪ್ರತಿಪಾದಿಸುವ ಚಾತುರ್ ವರ್ಣ ವ್ಯವಸ್ಥೆಯನ್ನು ಬಸವಣ್ಣನವರು ಧಿಕ್ಕರಿಸಿದ್ದರು. ಕೋಮುವಾದ, ಜಾತಿ ತಾರತಮ್ಯ, ಮೂಢನಂಬಿಕೆ, ಕಂದಾಚಾರ ಮೊದಲಾದ ಸಾಮಾಜಿಕ ಪಿಡುಗುಗಳೆಲ್ಲ ಮತ್ತೆ ತಲೆ ಎತ್ತಲು ಪ್ರಯತ್ನಿಸುತ್ತಿರುವ ಈ ಹೊತ್ತಿನಲ್ಲಿ, ಅದರ ವಿರುದ್ಧದ ಹೋರಾಟಕ್ಕೆ ನಮಗಿರುವ ಅಸ್ತ್ರಗಳೆಂದರೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದವರ ತತ್ವ-ಸಿದ್ಧಾಂತಗಳು. ಇದರ ಮೂಲಕವಷ್ಟೇ ಸಂವಿಧಾನದ ಮೂಲ ಆಶಯವಾದ ಸಮಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಪಿ.ವಿಜಯಕಾರ್ತಿಕ್‌ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ.ಆರ್.ಎಂ.ಸುನಿಲ್‌ಕುಮಾರ್, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಡಾ.ನರಸಿಂಹರೆಡ್ಡಿ, ವಿಭಾಗಗಳ ಮುಖ್ಯಸ್ಥರಾದ ಡಾ.ಬಸವರಾಜ ಪಾಲ್, ಡಾ.ಪ್ರಚಲಿತ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವ್ಯವಸ್ಥಾಪಕ ಎಸ್.ಯತಿನ್, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


