ವಿಶೇಷ ವರದಿ: ಚಂದ್ರವಳ್ಳಿ ನ್ಯೂಸ್ ಶಿವಮೊಗ್ಗ ಬಯಲುಸೀಮೆ ಹಾಗೂ ಸದಾ ವರುಣನ ಕೃಪೆಗೆ ಕಾಯುವ ಕಷ್ಟಪ್ರದೇಶವಾದ ಚಿತ್ರದುರ್ಗ ಜಿಲ್ಲೆಯ ದಶಕಗಳ ಕನಸು ಕೊನೆಗೂ ನನಸಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ (Trial run) ನೀರು ಹರಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರೆಯಿತು.
ಯೋಜನೆಯ 'ಇನ್‌ಟೇಕ್ ಪಾಯಿಂಟ್' ಬಳಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರು ಭದ್ರಾ ಮಾತೆಗೆ ವಿಶೇಷ ಪೂಜೆ ನೆರವೇರಿಸಿ, ಕಾಲುವೆಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಜನಪ್ರತಿನಿಧಿಗಳ ಉಪಸ್ಥಿತಿ: ಈ ಐತಿಹಾಸಿಕ ಕ್ಷಣಕ್ಕೆ ಹಲವು ಕ್ಷೇತ್ರದ ಜನಪ್ರತಿನಿಧಿಗಳು ಸಾಕ್ಷಿಯಾದರು. ಹೊಸದುರ್ಗ ಶಾಸಕ ಬಿ. ಜಿ. ಗೋವಿಂದಪ್ಪ, ಹೊಸದುರ್ಗ ಶಾಸಕ ಡಾ. ಎಂ. ಚಂದ್ರಪ್ಪ, ಚಿತ್ರದುರ್ಗ ಶಾಸಕ ಕೆ. ಸಿ. ವೀರೇಂದ್ರ (ಪಪ್ಪಿ), ತರೀಕೆರೆ ಶಾಸಕ ಶ್ರೀನಿವಾಸ ಹಾಗೂ ಶಿರಾ ಶಾಸಕ ಟಿ. ಬಿ. ಜಯಚಂದ್ರ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ರೈತರ ಮೊಗದಲ್ಲಿ ಮಂದಹಾಸ: ಕಡಿಮೆ ಮಳೆಯಾಗುವ ಬಯಲುಸೀಮೆ ಭಾಗಕ್ಕೆ ಕುಡಿಯುವ ನೀರು ಪೂರೈಸುವುದು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರಾಯೋಗಿಕವಾಗಿ ನೀರು ಹರಿಯುತ್ತಿರುವುದು ಚಿತ್ರದುರ್ಗ, ತುಮಕೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ರೈತರು ಮತ್ತು ಸಾರ್ವಜನಿಕರಲ್ಲಿ ಹೊಸ ಆಶಾವಾದ ಹಾಗೂ ಸಂತಸವನ್ನು ಮೂಡಿಸಿದೆ.




