ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಬಿಡದಿ ಟೌನ್‌ಶಿಪ್' ಯೋಜನೆಗೆ ವಿರೋಧ ವ್ಯಕ್ತಪಡಿಸುವ ವಿಚಾರದಲ್ಲಿ ಈಗ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಭಾರಿ 'ಕ್ರೆಡಿಟ್ ವಾರ್' ಶುರುವಾಗಿದೆ. ಯೋಜನೆ ವಿರೋಧಿಸಿ ಬೆಂಗಳೂರಿನಿಂದ ಬಿಡದಿಯವರೆಗೆ ಬೃಹತ್ ಪಾದಯಾತ್ರೆ ನಡೆಸುವುದಾಗಿ ಬಿಜೆಪಿ ಘೋಷಿಸಿದ ಬೆನ್ನಲ್ಲೇ, ಮಿತ್ರ ಪಕ್ಷ ಜೆಡಿಎಸ್ ಕೂಡ ತಾನು ಪ್ರತ್ಯೇಕವಾಗಿ ಪಾದಯಾತ್ರೆ ಮಾಡುವುದಾಗಿ ಘೋಷಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಜುಲೈ 30 ರಿಂದ ಜೆಡಿಎಸ್ ಪಾದಯಾತ್ರೆ:
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ, ಪಾದಯಾತ್ರೆಯ ದಿನಾಂಕ ಮತ್ತು ಅಧಿಕೃತ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಜುಲೈ 30, 31 ಮತ್ತು ಆಗಸ್ಟ್ 1 ರಂದು ಒಟ್ಟು ಮೂರು ದಿನಗಳ ಕಾಲ ಸುಮಾರು 38 ಕಿಲೋಮೀಟರ್‌ಗಳ ಬೃಹತ್ ಪಾದಯಾತ್ರೆಯನ್ನು ಜೆಡಿಎಸ್ ಹಮ್ಮಿಕೊಂಡಿದೆ.
ನಿಖಿಲ್ ಕುಮಾರಸ್ವಾಮಿ ನೇತೃತ್ವ:
ಜುಲೈ 30 (ಆರಂಭ): ಭೈರಮಂಗಲದಿಂದ ಪಾದಯಾತ್ರೆ ಆರಂಭವಾಗಲಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ. ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಈ ಪಾದಯಾತ್ರೆಯ ನೇತೃತ್ವ ವಹಿಸಲಿದ್ದಾರೆ.
ಜುಲೈ 31: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪಾದಯಾತ್ರೆಯಲ್ಲಿ ಭಾಗಿಯಾಗಿ ಜೆಡಿಎಸ್ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ.
ಆಗಸ್ಟ್ 1 (ಸಮಾವೇಶ): ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದ್ದು, ಅಂದು ಬೃಹತ್ ಸಮಾವೇಶ ನಡೆಸುವ ಮೂಲಕ ಬಿಡದಿ ಟೌನ್‌ಶಿಪ್ ಯೋಜನೆ ರದ್ದು ಮಾಡುವಂತೆ ಸರ್ಕಾರವನ್ನು ಜೆಡಿಎಸ್ ಆಗ್ರಹಿಸಲಿದೆ.
"ಬಿಜೆಪಿಗಿಂತ ಮೊದಲೇ ಪ್ಲಾನ್ ಮಾಡಿದ್ದೆವು!":
"ಬಿಡದಿ ಟೌನ್‌ಶಿಪ್ ಯೋಜನೆ ರದ್ದಾಗುವವರೆಗೂ ಜೆಡಿಎಸ್ ಹೋರಾಟ ನಿಲ್ಲಿಸುವುದಿಲ್ಲ. ಈ ಪಾದಯಾತ್ರೆಯ ನಂತರ 'ವಿಧಾನಸೌಧ ಚಲೋ' ಕೂಡ ಹಮ್ಮಿಕೊಳ್ಳಲಿದ್ದೇವೆ. ಬಿಜೆಪಿಗಿಂತ ಮೊದಲೇ ನಾವು ಪಾದಯಾತ್ರೆ ನಡೆಸಲು ನಿರ್ಧರಿಸಿದ್ದೆವು. ಅದರಂತೆಯೇ ಇಂದು ಅಧಿಕೃತವಾಗಿ ದಿನಾಂಕ ಪ್ರಕಟಿಸಿದ್ದೇವೆ" ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಅಖಾಡಕ್ಕಿಳಿದಿರುವ ಮೈತ್ರಿ ಪಕ್ಷಗಳು, ಸರ್ಕಾರದ ವಿರುದ್ಧ ಹೋರಾಡುವುದರ ಜೊತೆಗೆ ಪರಸ್ಪರ ಯಾರು ಮುಂಚೂಣಿ ನಾಯಕರು ಎಂಬುದನ್ನು ಸಾಬೀತುಪಡಿಸಲು ಪೈಪೋಟಿಗೆ ಬಿದ್ದಿರುವುದು ಈಗ ತೀವ್ರ ಕುತೂಹಲ ಕೆರಳಿಸಿದೆ.



