ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯ ಸರ್ಕಾರ ಗುಡಿಸಲು ಮುಕ್ತ ರಾಜ್ಯ ಮಾಡಬೇಕು ಎಂದು ಆಶ್ರಯ ಯೋಜನೆಯಲ್ಲಿ ಕೋಟಿ ಕೋಟಿ ಹಣ ಬಡಜನರಿಗೆ ಮನೆ ನಿರ್ಮಾಣ ಮಾಡಲು ಹಂಚುತ್ತಿದೆ. ಆದರೆ ಬೆಂಗಳೂರಿಗೆ ಕೂಗಳತೆ ದೂರದಲ್ಲೇಇರುವ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗ್ರಾಮವೊಂದರಲ್ಲಿ ಇಂದಿಗೂ ಜನ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ರಾತ್ರಿ ಆದರೆ ಮಕ್ಕಳು ಬೀದಿ ದೀಪದಲ್ಲಿ ವಿಧ್ಯಾಭ್ಯಾಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ರಾಜ್ಯದ ಹೆದ್ದಾರಿಯ ಪಕ್ಕದಲ್ಲೇ ಇರುವ ಗುಡಿಸಲುಗಳು, ನಮಗೆ ಯಾವುದೇ ದಾಖಲೆಗಳಿಲ್ಲ ಎಂದು ಆಕ್ರೋಶ ಹೊರ ಹಾಕುತ್ತಿರುವ ಜನರು, ನಾವು ಸಾಯೋದರ ಒಳಗೆ ಒಂದು ಮನೆ ಕಟ್ಟಿಕೊಡಿ ಎಂದು ಅಸಹಾಯಕ ಮಾತುಗಳನ್ನ ಆಡುತ್ತಿರುವ ವೃದ್ಧರು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಡಿಪಾಳ್ಯ ಗ್ರಾಮದಲ್ಲಿ.
ಚನ್ನದೇವಿಅಗ್ರಹಾರ ಪಂಚಾಯತಿಯಿಂದ ಕೇವಲ ನೂರು ಮೀಟರ್ ದೂರದಲ್ಲಿಯೇ ಇಂದಿಗೂ ನಲವತ್ತಕ್ಕೂ ಹೆಚ್ಚು ಗುಡಿಸಲುಗಳಿವೆ. ಇಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ವಾಸವಿದ್ದಾರೆ. ಆದರೆ ಇವರು ಸುಮಾರು ಐದು ದಶಕಗಳಿಂದ ಇಲ್ಲಿಯೇ ವಾಸವಿದ್ದಾರೆ. ಸರ್ಕಾರಿ ಗುಂಡುತೋಪಿನಲ್ಲಿ ವಾಸವಿರುವ ಇವರಿಗೆ ಇದುವರೆಗೂ ಯಾವುದೇ ಸರ್ಕಾರಿ ಯೋಜನೆ ಸಿಕ್ಕಿಲ್ಲ. ಕೆಲವರಿಗೆ ಇನ್ನೂ ಪಿಂಚಣಿ ಬರುತ್ತಿಲ್ಲ, ಇನ್ನೂ ಕೆಲವರಿಗೆ ಆಧಾರ್ ಕಾರ್ಡ್ ಇಲ್ಲ, ಇಲ್ಲಿ ಹುಟ್ಟಿರುವ ಬಹುತೇಕ ಮಕ್ಕಳಿಗೆ ಜನನ ಪ್ರಮಾಣ ಪತ್ರವೇ ಇಲ್ಲ.
ಈ ಗುಡಿಸಲುಗಳು ತಾಲೂಕಿನ ಅತೀ ದೊಡ್ಡ ಕೆರೆಯಾದ ಮದುರೆ ಕೆರೆಯ ಅಂಚಿನಲ್ಲೇ ಇವೆ. ಮಳೆಗಾಲದಲ್ಲಿ ಮಳೆ ಬಂದರೆ ನೀರು ಮನೆಗೆ ನುಗ್ಗುವ ಆತಂಕದ ಜೊತೆಯಲ್ಲಿ, ಕೆರೆ ಕೋಡಿ ಹೊಡೆದರೆ ಗುಡಿಸಲುಗಳು ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗುವ ಆತಂಕದಲ್ಲಿ ಇಲ್ಲಿನ ನಿವಾಸಿಗಳು ಭಯದಲ್ಲಿ ಇದ್ದಾರೆ.ಇನ್ನೂ ರಾತ್ರಿಯಾದರೆ ಮಕ್ಕಳಿಗೆ ಓದಲು ಬೆಳಕಿಲ್ಲ. ಬೀದಿ ದೀಪದಲ್ಲಿ ಓದಬೇಕಾದ ಅನಿವಾರ್ಯತೆಯಿದೆ.

ಜನಪ್ರತಿನಿಧಿ ಗಳು ಓಟ್ ಬ್ಯಾಂಕ್ ಗಾಗಿ ಬರೀ ಓಟರ್ ಐಡಿ ಮಾಡಿಸಿಕೊಟ್ಟಿದ್ದಾರೆ ಹೊರತು ಬೇರೆ ಯಾವುದೇ ದಾಖಲೆಗಳನ್ನು ಮಾಡಿಸಿಕೊಟ್ಟಿಲ್ಲ. ಇನ್ನೂ ಗುಡಿಸಲಿನಲ್ಲಿ ವಾಸ ಮಾಡುತ್ತಿರುವವರುಬಹುತೇಕ ಹಕ್ಕಿಪಿಕ್ಕಿ ಜನಾಂಗದವರು. ಹಾಗಾಗಿ ಪಂಚಾಯಿತಿಯ ಬಹುತೇಕ ಉಳಿದ ಸದಸ್ಯರು ಇವರಿಗೆ ಜಾಗ ನೀಡಲು ನಿರಾಕರಿಸುತ್ತಿದ್ದಾರೆ.
ಗುಡಿಸಲಿನಲ್ಲಿ ವಾಸ ಮಾಡುತ್ತಿರುವವರು ಸಾವನಪ್ಪಿದರೆ ಅವರನ್ನ ಅಂತ್ಯಸಂಸ್ಕಾರ ಮಾಡಲು ಕೂಡ ಜಾಗವಿಲ್ಲ ಎಂದು ಅಳಲನ್ನ ತೋಡಿಕೊಂಡಿದ್ದಾರೆ. ಇಲ್ಲಿ ಸಣ್ಣ ವಯಸ್ಸಿನಿಂದ ಹಿಡಿದು ಮೊಮ್ಮಕ್ಕಳ ಮಕ್ಕನ್ನು ನೋಡಿರುವ ವಯೋವೃದ್ದರು ನಾವು ಸಾಯುವುದರ ಒಳಗೆ ನಮಗೊಂದು ಮನೆ ಕೊಡಿ ಎಂದು ಬೇಡಿಕೊಳ್ಳುತ್ತಿರುವುದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ.


