ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಜಾವಾಣಿ, ಮುಂಗಾರು, ಲಂಕೇಶ್ ಪತ್ರಿಕೆ ಸೇರಿದಂತೆ ನಾಡಿನ ಪ್ರಮುಖ ಮಾಧ್ಯಮಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಹಿರಿಯ ಕ್ರಿಯಾಶೀಲ ಪತ್ರಕರ್ತ ಹಾಗೂ 'ಉಲ್ಟಾ ಪಲ್ಟಾ' ಚಲನಚಿತ್ರ ಖ್ಯಾತಿಯ ನಿರ್ದೇಶಕ ಎನ್.ಎಸ್.ಶಂಕರ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಪತ್ರಿಕೋದ್ಯಮ ಮತ್ತು ಸಿನಿಮಾ ರಂಗ ಎರಡರಲ್ಲೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಎನ್.ಎಸ್.ಶಂಕರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
'ಮನೆಯಂಗಳದಲ್ಲಿ' ಗೌರವಿಸಿದ್ದು ಮರೆಯಲಾಗದು: ಶಿವಾನಂದ ತಗಡೂರು
ಎನ್.ಎಸ್.ಶಂಕರ್ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಶಂಕರ್ ಅವರೊಂದಿಗಿನ ಒಡನಾಟ ಹಾಗೂ ಅವರ ವೃತ್ತಿ ಬದುಕಿನ ಹಿರಿತನವನ್ನು ಸ್ಮರಿಸಿದ್ದಾರೆ.
"ಎನ್.ಎಸ್.ಶಂಕರ್ ಅವರ ಸುದೀರ್ಘ ಹಾಗೂ ಅಪಾರ ವೃತ್ತಿ ಸೇವೆಯನ್ನು ಗೌರವಿಸಿ, ಕೆಯುಡಬ್ಲ್ಯೂಜೆ ವತಿಯಿಂದ ಹಮ್ಮಿಕೊಳ್ಳಲಾಗುವ 'ಮನೆಯಂಗಳದಲ್ಲಿ' ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿದ್ದು ಇಂದಿಗೂ ಮರೆಯಲಾಗದ ಸಂಗತಿಯಾಗಿದೆ" ಎಂದು ಶಿವಾನಂದ ತಗಡೂರು ಭಾವನಾತ್ಮಕವಾಗಿ ನೆನಪಿಸಿಕೊಂಡಿದ್ದಾರೆ.
"ಎನ್.ಎಸ್.ಶಂಕರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ಕರುಣಿಸಲಿ."
ಶಿವಾನಂದ ತಗಡೂರು, ರಾಜ್ಯಾಧ್ಯಕ್ಷರು, ಕೆಯುಡಬ್ಲ್ಯೂಜೆ.
ಪತ್ರಿಕೋದ್ಯಮದ ಮೂಲಕ ಸಮಾಜದ ಮುಖವಾಡಗಳನ್ನು ಬಿಚ್ಚಿಡುತ್ತಲೇ, ಬೆಳ್ಳಿತೆರೆಯ ಮೇಲೂ 'ಉಲ್ಟಾ ಪಲ್ಟಾ'ದಂತಹ ಸದಭಿರುಚಿಯ ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದಿದ್ದ ವಿಶಿಷ್ಟ ಪ್ರತಿಭೆಯೊಂದನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಮಾಧ್ಯಮ ವಲಯ ಕಂಬನಿ ಮಿಡಿದಿದೆ.



