ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್, ಚಾರ್ಜರ್ ಹಾಗೂ ಪೆನ್‌ಡ್ರೈವ್ ಪತ್ತೆಯಾದ ಪ್ರಕರಣ ಸಂಬಂಧ ಕಾರಾಗೃಹ ಇಲಾಖೆಯ ಡಿಐಜಿ (DIG) ಜಿನೇಂದ್ರ ಖನಗಾವಿ ಅವರ ನೇತೃತ್ವದಲ್ಲಿ ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಎಂದು ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇದರ ಜೊತೆಗೆ, ಸಿಸಿಬಿ ದಾಳಿ ವೇಳೆ ಪ್ರಜ್ವಲ್ ರೇವಣ್ಣ ಕೈದಿಗಳ ನಿಯಮಾನುಸಾರ ಸಮವಸ್ತ್ರ ಧರಿಸದಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಜೈಲು ಸೂಪರಿಂಟೆಂಡೆಂಟ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಸಮವಸ್ತ್ರ ಧರಿಸದಿದ್ದಕ್ಕೆ ನೋಟಿಸ್: ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಸಮವಸ್ತ್ರ ಧರಿಸದಿರುವ ಕುರಿತು ಮೂರು ತಿಂಗಳ ಹಿಂದೆಯೇ ದೂರು ಬಂದಾಗ ಮೆಮೋ ನೀಡಲಾಗಿತ್ತು. ಕಡ್ಡಾಯ ಸೂಚನೆ ನೀಡಿದ ಹೊರತಾಗಿಯೂ ನಿಯಮ ಪಾಲನೆಯಾಗದಿರುವುದಕ್ಕೆ ಸ್ಪಷ್ಟನೆ ಕೋರಿ ಜೈಲು ಸೂಪರಿಂಟೆಂಡೆಂಟ್‌ಗೆ ನೋಟಿಸ್ ನೀಡಲಾಗಿದೆ.
ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಜೈಲಿನೊಳಗೆ ನಿರಂತರ ಪರಿಶೀಲನೆ ನಡೆಸುತ್ತಿದ್ದರೂ ನಿಷೇಧಿತ ವಸ್ತುಗಳು ಅಕ್ರಮವಾಗಿ ಸರಬರಾಜಾಗುತ್ತಿರುವುದು ಇಲಾಖೆಗೆ ಮುಜುಗರ ತಂದಿದೆ. ಜಪ್ತಿಯಾದ ಫೋನ್ ಮಾರ್ಚ್‌ನಿಂದಲೂ ಜೈಲಿನಲ್ಲಿದ್ದು, ಸಿಮ್ ಬಳಕೆಯಾಗಿರುವುದು ಪತ್ತೆಯಾಗಿದೆ. ಈ ಅಕ್ರಮಕ್ಕೆ ಸಾಥ್ ನೀಡಿದವರ ವಿರುದ್ಧ ದಾಕ್ಷಿಣ್ಯವಿಲ್ಲದೆ ಕ್ರಮ ಜರುಗಿಸಲಾಗುವುದು.
ಟೆಲಿಕಾಂ ಕಂಪನಿ ವಿರುದ್ಧವೂ ಕೇಸ್ ಎಚ್ಚರಿಕೆ: ಜೈಲಿನಲ್ಲಿರುವ ಹಳೆಯ ಜಾಮರ್‌ಗಳು 2G ಸಾಮರ್ಥ್ಯ ಹೊಂದಿದ್ದು, ಕೆಲವು ಬ್ಯಾರಕ್‌ಗಳಲ್ಲಿ 'ಬ್ಲಾಕ್ ಸ್ಪಾಟ್'ಗಳ ಲಾಭ ಪಡೆಯಲಾಗುತ್ತಿದೆ. ನಿರ್ದಿಷ್ಟವಾಗಿ ಆಂಧ್ರಪ್ರದೇಶ ಮೂಲದ ಸಿಮ್ ಕಾರ್ಡ್‌ಗಳು ಜೈಲಿನಲ್ಲಿ ನಿರಂತರವಾಗಿ ಬಳಕೆಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಂಬಂಧಿತ ಸರ್ವಿಸ್ ಪ್ರೊವೈಡರ್ ಕಂಪನಿಗಳ ವಿರುದ್ಧವೂ ಪ್ರಕರಣ ದಾಖಲಿಸುವುದಾಗಿ ಡಿಜಿಪಿ ಎಚ್ಚರಿಸಿದ್ದಾರೆ.



