ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯ ಪ್ರಕರಣಗಳ ವಿಚಾರಣೆಯನ್ನು ವರ್ಷಗಟ್ಟಲೆ ನನೆಗುದಿಗೆ ಬೀಳಿಸುವ ಧೋರಣೆಯನ್ನು ಒಪ್ಪಲಾಗುವುದಿಲ್ಲ. ಇಂತಹ ಸೂಕ್ಷ್ಮ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಪ್ರತ್ಯೇಕ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಖಡಕ್ ನಿರ್ದೇಶನ ನೀಡಿದೆ.
ಪಿಎಫ್‌ಐ ಪಿತೂರಿ ಪ್ರಕರಣದ ಆರೋಪಿ ಶಾಹಿದ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನ್ ಅವರಿದ್ದ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ನಿರ್ದೇಶನಗಳು:
2 ವಾರಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಗಡುವು: ಕರ್ನಾಟಕ ಉನ್ನತ ನ್ಯಾಯಾಂಗ ಸೇವೆಯಲ್ಲಿ ಹೆಚ್ಚುವರಿ ಹುದ್ದೆ ಸೃಷ್ಟಿ, ಅಗತ್ಯ ಸಿಬ್ಬಂದಿ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಎರಡು ವಾರಗಳ ಒಳಗಾಗಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.
ದೈನಂದಿನ ವಿಚಾರಣೆಗೆ ಪ್ರತ್ಯೇಕ ನ್ಯಾಯಾಧೀಶರ ನೇಮಕ: ಸರ್ಕಾರ ಸೌಲಭ್ಯ ಕಲ್ಪಿಸಿದ ತಕ್ಷಣವೇ ಯುಎಪಿಎ ಪ್ರಕರಣಗಳ ದೈನಂದಿನ ವಿಚಾರಣೆಗಾಗಿ ಪ್ರತ್ಯೇಕ ನ್ಯಾಯಾಧೀಶರನ್ನು ನಿಯೋಜಿಸುವಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕೋರ್ಟ್ ತಿಳಿಸಿದೆ.
3 ತಿಂಗಳಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆ: ಈ ಪ್ರಕರಣದಲ್ಲಿ 707 ಸಾಕ್ಷಿಗಳ ವಿಚಾರಣೆ ಬಾಕಿಯಿದೆ. ಹೊಸ ವಿಶೇಷ ನ್ಯಾಯಾಲಯವು ಮೊದಲು 3 ಸಂರಕ್ಷಿತ ಸಾಕ್ಷಿಗಳನ್ನು ಹಾಗೂ ನಂತರ ಇತರೆ ಪ್ರಮುಖ ಸಾಕ್ಷಿಗಳನ್ನು ಗರಿಷ್ಠ 3 ತಿಂಗಳೊಳಗೆ ವಿಚಾರಣೆ ನಡೆಸಬೇಕು. ಅದಾದ ಬಳಿಕ ಆರೋಪಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಿಚಾರಣೆ ವಿಳಂಬ ಹಾಗೂ ಸುದೀರ್ಘ ಆದೇಶಗಳಿಗೆ ಜಡ್ಜ್‌ಗಳ ಅಸಮಾಧಾನ:
ಪ್ರಕರಣಗಳ ವಿಚಾರಣೆ ತೀವ್ರ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, "ವರ್ಷಗಟ್ಟಲೆ ವಿಚಾರಣೆ ಎಳೆದರೆ ಯಾವುದೇ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದಿಲ್ಲ" ಎಂದಿತು. ಅಲ್ಲದೆ, ಜಾಮೀನು ಅರ್ಜಿ ತಿರಸ್ಕರಿಸಲು ವಿಚಾರಣಾ ನ್ಯಾಯಾಲಯಗಳು 12 ಪುಟಗಳ ಸುದೀರ್ಘ ಆದೇಶ ಬರೆಯುವುದನ್ನು ಟೀಕಿಸಿದ ಕೋರ್ಟ್, "ಒಂದು ಪುಟದಲ್ಲಿ ಮುಗಿಯಬೇಕಾದ ಆದೇಶಕ್ಕೆ ಅರ್ಧ ದಿನ ವ್ಯಯಿಸುವುದು ಸರಿಯಲ್ಲ" ಎಂದು ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ವ್ಯಕ್ತವಾದ ವಾದ-ಪ್ರತಿವಾದ:
ರಾಜ್ಯ ಸರ್ಕಾರದ ವಾದ: ಹಾಲಿ ಇರುವ ವಿಶೇಷ ನ್ಯಾಯಾಲಯದಲ್ಲಿ 97 ಪ್ರಕರಣಗಳು ಬಾಕಿಯಿದ್ದು, ಆರೋಪಿಗಳು ಪದೇ ಪದೇ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸುತ್ತಿರುವುದರಿಂದ ನ್ಯಾಯಾಂಗದ ಸಮಯ ಪೋಲಾಗುತ್ತಿದೆ ಎಂದು ಸರ್ಕಾರಿ ಅಭ್ಯರ್ಥಿಗಳು ತಿಳಿಸಿದರು.
ಅರ್ಜಿದಾರರ ಪರ ವಾದ: ಆರೋಪಿ ಶಾಹಿದ್ ಖಾನ್ ಪರ ಹಾಜರಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ, "ತಮ್ಮ ಕಕ್ಷಿದಾರರು ಕಳೆದ 4 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಇತರೆ 9 ಆರೋಪಿಗಳಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಸಂವಿಧಾನದ ಆರ್ಟಿಕಲ್ 21ರ ಅಡಿಯಲ್ಲಿ ತ್ವರಿತ ವಿಚಾರಣೆ ಪಡೆಯುವುದು ಪ್ರತಿಯೊಬ್ಬನ ಹಕ್ಕು" ಎಂದು ಕೋರ್ಟ್ ಗಮನಕ್ಕೆ ತಂದರು.



