ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬುದ್ಧ ಈ ಲೋಕ ಕಂಡಂತಹ ಅಪರೂಪದ ದಾರ್ಶನಿಕ. ಸಕಲ ಜೀವಿಗಳಿಗೆ ಒಳಿತನ್ನೇ ಬಯಸುವ ಕಾರುಣ್ಯಮೂರ್ತಿ. ಸುಮಾರು ಎರಡುವರೆ ಸಾವಿರ ವರ್ಷಗಳ ಹಿಂದೆಯೇ ವೈಚಾರಿಕವಾಗಿ ಚಿಂತಿಸಿದ ಚಿಂತಕ. ಆತನು ಬೋಧಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಮುಂದೆಯೂ ಪ್ರಸ್ತುತವಾಗುತ್ತವೆ. ಆ ರೀತಿ ಕಾಲಾತೀತವಾಗಿ ನಿಲ್ಲಬಲ್ಲ ಮಾನವೀಯ ತತ್ವಗಳೆಂದರೆ ಬುದ್ಧನ ವಿಚಾರಗಳು. ದುಃಖಮಯವಾದ ಈ ಜಗತ್ತಿಗೆ ನಿಸರ್ಗದಷ್ಟು ನಿತ್ಯ ಸತ್ಯವಾದ ಮಾತುಗಳನ್ನು ಹೇಳುತ್ತಾ, ಜನರನ್ನು ನೋವಿನಿಂದ ಪಾರುಮಾಡಿದ ಮನುಕುಲದ ಮೊದಲ ಮಾನಸಿಕ ತಜ್ಞ.

ಬುದ್ಧನ ಮೊದಲ ಉಪದೇಶ ಕೇಳಿದ ಐದುಜನ ಪರಿವ್ರಾಜಕರಾದ; ಕೌಂಡಿನ್ಯ, ಅಶ್ವಜಿತ್, ಕಾಶ್ಯಪ, ಬಾದುಕ, ಮಹಾನಾಮ ಹೇಳಿದ ಮಾತುಗಳು ಧಮ್ಮದ ಜೀವಪರ ಚಿಂತನೆಯನ್ನು ತಿಳಿಸುತ್ತದೆ. “ಈ ಜಗತ್ತಿನ ಇತಿಹಾಸದಲ್ಲಿ ಇದುವರೆಗೂ ಯಾವೊಬ್ಬ ಧರ್ಮ ಸಂಸ್ಥಾಪಕನೂ ಮಾನವನ ದುಃಖವನ್ನು ಗುರುತಿಸುವುದು ಧರ್ಮದ ನಿಜವಾದ ತಳಹದಿ ಎಂದು ಹೇಳಿರಲಿಲ್ಲ. ಯಾವ ಧರ್ಮ ಸಂಸ್ಥಾಪಕನೂ ದುಃಖ ನಿವಾರಣೆಯೇ ಧರ್ಮದ ನಿಜವಾದ ಗುರಿ ಎಂದು ಬೋಧಿಸಿರಲಿಲ್ಲ. ಇಷ್ಟು ಸರಳವಾದ ಮತ್ತು ಸಹಜವಾದ ರೀತಿಯಲ್ಲಿ ಅತಿಮಾನುಷ ಶಕ್ತಿಗಳಿಂದ ಮುಕ್ತವಾದ ಸನ್ಮಾರ್ಗವನ್ನು ಯಾರೂ ತೋರಿರಲಿಲ್ಲ” ಎಂದು ಹೇಳಿದ ಮಾತುಗಳನ್ನು ಗಮನಿಸಿದಾಗ ಬುದ್ಧನ ವಿಚಾರಗಳ ಸ್ಪಷ್ಟತೆ ತಿಳಿಯುತ್ತದೆ.
ನೈತಿಕತೆಯ ತಳಹದಿಯ ಮೇಲೆ ತನ್ನ ಗುರಿ ಸಾಧನೆಯ ಶಿಖರ ತಲುಪಿದ ಮಹಾಪುರುಷನಾದ ಬುದ್ದನು ತನ್ನ ಕಾಲದ ಅಸಂಬದ್ಧ ಆಚರಣೆಗಳನ್ನು, ಅಂಧಶ್ರದ್ಧೆಯ ಮೌಢ್ಯತೆಯನ್ನು ವಿರೋಧಿಸುವ ಅಪರೂಪದ ಬೌದ್ಧಿಕ ಪ್ರಜ್ಞೆಯನ್ನು ಪಡೆದಿದ್ದ. ಈ ಸೃಷ್ಟಿ ಯಾರಿಂದಲೂ ಉಗಮವಾಗಿಲ್ಲ, ವಿಕಾಸ ಹೊಂದಿದೆ. ಪ್ರತಿಯೊಂದು ಸಂಯುಕ್ತ ವಸ್ತವೂ ನಾಶ ಹೊಂದಲೇ ಬೇಕು. ಇದಕ್ಕೆ ಮನುಷ್ಯನೂ ಹೊರತಲ್ಲ. ಕಾರ್ಯ ಕಾರಣದ ಪರಿಣಾಮದಿಂದ ಜಗತ್ತು ಚಲನಶೀಲವಾಗಿದೆ. ಸಾವಿನಾಚೆಗೆ ಏನೂ ಇಲ್ಲ ಎಂದು ವೈಜ್ಞಾನಿಕವಾಗಿ ತಿಳಿಸುತ್ತಾ, ಅಲ್ಲಿಯ ತನಕ ಚಾಲ್ತಿಯಲ್ಲಿದ್ದ ಯಥಾಸ್ಥಿತಿ ವಾದವನ್ನು, ಊಹೆಗಳ ಮೇಲೆ ನಿಂತಿರುವ ಸಿದ್ಧಾಂತವನ್ನು ಅಲ್ಲಗಳೆಯುತ್ತಾ, ಸತ್ಯದ ಪ್ರತಿಪಾದನೆಯನ್ನು ತನ್ನ ಬೋಧನೆಗಳ ಮೂಲಕ ಜನತೆಗೆ ತಿಳಿಸಿದ. ಸ್ವ ಪ್ರಯತ್ನ ಮತ್ತು ಅನ್ವೇಷಣೆಯ ಮೂಲಕ ಮನುಷ್ಯ ಈ ಭೂಮಿಯ ಮೇಲೆ ಆನಂದವನ್ನು ಗಳಿಸಬಹುದೆಂದು ತೋರಿಸಿಕೊಟ್ಟ ಮಾರ್ಗದಾತ. ಮಾನವನ ಕೇಡುಗಳಿಗೆ, ದುಃಖಗಳಿಗೆ ಕಾರಣ ತಿಳಿದು ಅದನ್ನು ನಿವಾರಿಸುವ ನಿಟ್ಟಿನಲ್ಲಿ ತಥಾಗತನು ತಿಳಿಸಿಕೊಟ್ಟ ವಿಚಾರಗಳು ಎಲ್ಲಾ ಕಾಲಕ್ಕೂ ಸಲ್ಲುವಂತಹವು.
ಈ ಜಗತ್ತಿನಲ್ಲಿ ಪ್ರಶ್ನಾತೀತವಾದದ್ದು ಯಾವುದೂ ಇಲ್ಲ. ನನ್ನನ್ನೂ ನನ್ನ ವಿಚಾರಗಳನ್ನು ಒಳಗೊಂಡಂತೆ ಎಂದು ಹೇಳಿದ ದಾರ್ಶನಿಕ ಬಹುಶಃ ಬುದ್ಧನೇ ಮೊದಲಿಗ ಎನಿಸುತ್ತದೆ. ಬುದ್ಧನ ಸಮಕಾಲೀನ ಸಂದರ್ಭದಲ್ಲಿ ವೇದಗಳು, ದೇವರು, ಧರ್ಮದ ವಿಚಾರಗಳು ಪ್ರಶ್ನಾತೀತವಾಗಿದ್ದವು. ಅದರ ನೆಪದಲ್ಲಿ ವಿಧಿಸಿದ ಸಂಕೋಲೆಗಳಿಂದ ಜನರನ್ನು ಬಂಧಮುಕ್ತಗೊಳಿಸಿದ ಬುದ್ಧ; “ನನ್ನ ಧಮ್ಮದಲ್ಲಿ ಪರಮಾತ್ಮನಿಗಾಗಲಿ, ಆತ್ಮಕ್ಕಾಗಲಿ ಸ್ಥಾನವಿಲ್ಲ. ವ್ಯಕ್ತಿಯ ಮರಣಾನಂತರದ ಬದುಕಿಗೂ ನನ್ನ ಧಮ್ಮಕ್ಕು ಯಾವುದೇ ಸಂಬಂಧವಿಲ್ಲ. ಧಾರ್ಮಿಕ ವಿಧಿಗಳಾದ ಯಜ್ಞ ಯಾಗಗಳಗೂ ನನ್ನ ಧಮ್ಮಕ್ಕು ಸಂಬಂಧವಿಲ್ಲ. ಮನುಷ್ಯನೇ ನನ್ನ ಧಮ್ಮದ ಕೇಂದ್ರ. ಹಾಗೂ ಈ ಭೂಮಿಯ ಮೇಲೆ ಮನುಷ್ಯರು ಪರಸ್ಪರ ಹೊಂದಿರುವ ಸಂಬಂಧ ಮಾತ್ರ ಮುಖ್ಯವಾಗುತ್ತದೆ” ಎಂದು ಹೇಳುತ್ತಾನೆ. ಅಲ್ಲಿಯ ತನಕ ಯಾವ ಧರ್ಮವಾಗಲಿ, ತತ್ವ ಸಿದ್ಧಾಂತವಾಗಲಿ ಮನುಷ್ಯ ಕೇಂದ್ರಿತ ವಿಚಾರಗಳನ್ನು ಹೇಳಿರಲಿಲ್ಲ ಎನ್ನುವುದು ಬಹಳ ಮುಖ್ಯವಾದ ವಿಚಾರ.
ಬುದ್ಧನು ತಿಳಿಸಿದ ಧಮ್ಮದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಪರಿಶುದ್ಧತೆಯ ಮಾರ್ಗ, ಸಚ್ಚಾರಿತ್ರ್ಯದ ಮಾರ್ಗ ಮತ್ತು ಸದ್ಗುಣಗಳ ಮಾರ್ಗ ಅನುಸರಿಸಿದರೆ ಈ ಜಗದ ದುಃಖ ತನಗೆ ತಾನೇ ನಿವಾರಣೆಯಾಗುತ್ತದೆ. ಪರಿಶುದ್ಧತೆಯ ಮಾರ್ಗದಲ್ಲಿರುವ ಐದು ಅಂಶಗಳಾದ; ಯಾವ ಜೀವಿಯನ್ನೂ ಕೊಲ್ಲಬಾರದು ಅಥವಾ ಹಿಂಸಿಸಬಾರದು, ಕಳ್ಳತನ ಮಾಡಬಾರದು ಅಥವಾ ಬೇರೆಯವರಿಗೆ ಸೇರಿದ ಯಾವ ವಸ್ತುಗಳಿಗೂ ಆಸೆ ಪಡಬಾರದು, ಸುಳ್ಳು ಹೇಳಬಾರದು, ಯಾವಾಗಲೂ ಕಾಮಾತುರನಾಗಿರಬಾರದು ಅಥವಾ ಹಾದರತನ ಮಾಡಬಾರದು, ಮದ್ಯಪಾನ ಅಥವಾ ಮಾದಕ ದ್ರವ್ಯಗಳ ಸೇವನೆ ಮಾಡಬಾರದು ಎಂದು ತಿಳಿಸುತ್ತಾನೆ. ಇವುಗಳನ್ನೇ ಪಂಚಶೀಲ ತತ್ವಗಳು ಎನ್ನುತ್ತೇವೆ. ಇಷ್ಟು ಸರಳವಾದ ಮಾರ್ಗದ ಮೂಲಕ ಮನುಷ್ಯನ ಔನ್ನತ್ಯವನ್ನು ಬಯಸುವ ತತ್ವಗಳನ್ನು ಅನುಸರಿಸದೆ; ಬದುಕುವ ಕಕ್ಕುಲಾತಿಗಾಗಿ, ಅಧಿಕಾರದ ದುರಾಸೆಗಾಗಿ ನಾವು ಯಾವ ಮಟ್ಟಕ್ಕೆ ಇಳಿಜಾರಿಗೆ ಜಾರಿದ್ದೇವೆ ಎನ್ನುವುದು ನಮ್ಮ ಸಮಾಜದ ಚಿತ್ರಣ ನಮ್ಮೆಲ್ಲರ ಕಣ್ಣಮುಂದೆ ಸುಳಿದಾಡಬಹುದು.
“ಒಂದು ಜೀವಿಗೆ ಜೀವ ನೀಡುವ ಶಕ್ತಿ ನಿನಗಿಲ್ಲ ಎಂದ ಮೇಲೆ ಪ್ರಾಣ ತೆಗೆಯುವ ಹಕ್ಕು ನಿನಗಿಲ್ಲ” ಎನ್ನುವ ಬುದ್ದನ ಜೀವಪರವಾದ ಮಾತು ನಮಗೆ ನಾವೇ ಕೇಳಿಕೊಳ್ಳಬೇಕಾದ ತುರ್ತು ಮತ್ತು ಅನಿವಾರ್ಯತೆಯ ಅಗತ್ಯವಿದೆ. ಆ ರೀತಿ ಆತ್ಮಾಲೋಕನ ಮಾಡಿಕೊಳ್ಳದರ ಫಲವಾಗಿಯೇ ಇತಿಹಾಸದಲ್ಲಿ ನಡೆದ ಯುದ್ಧಗಳು, ನಡೆಸಿದ ಮಾರಣಹೋಮಗಳು ರಕ್ತದ ರುಜುವಿನಲ್ಲಿ ತನ್ನ ಇರುವಿಕೆಯನ್ನು ರಜುವಾತು ಪಡಿಸುತ್ತಿವೆ. ನಮ್ಮ ಸ್ಮೃತಿಪಟಲದಿಂದ ಮಾಸಿಹೋಗದ ಖೈರ್ಲಾಂಜಿ, ಕಾರಂಚೇಡು, ಕಂಬಾಲಪಲ್ಲಿಯ ದಾರುಣ ಹತ್ಯೆಗಳನ್ನು ಮಾಡಿದವರಿಗೆ, ಇತ್ತೀಚೆಗೆ ಪಹಲ್ಗಾಮ್ನಲ್ಲಿ ಅಮಾಯಕ ಜನರನ್ನು ಅಮಾನುಷವಾಗಿ ಹತ್ಯೆಮಾಡಿದ ಉಗ್ರರಿಗೆ ಅಂತಹ ಕ್ರೌರ್ಯದ ಮನಸ್ಥಿತಿ ಆ ಕೊಲೆಗಡುಕರಿಗೆ ಹುಟ್ಟುತ್ತಿರಲಿಲ್ಲ ಎನಿಸುತ್ತದೆ. ದ್ವೇಷ, ಅಸೂಯೆಗಳಿಂದ ತಹತಹಿಸುತ್ತಾ ಈ ಸಮಾಜವನ್ನು ತಲ್ಲಣಗೊಳಿಸುತ್ತಿರುವ ಕ್ರೂರ ಮನಸ್ಸುಗಳಿಗೆ ಬುದ್ಧನ ವಿಚಾರಗಳೇ ದಾರಿದೀಪ. ಪಂಚಶೀಲ ತತ್ವಗಳ ಜೊತೆಗೆ ಸಚ್ಚಾರಿತ್ರ್ಯದ ಮಾರ್ಗ ಅಥವಾ ಅಷ್ಟಾಂಗ ಮಾರ್ಗದ ಮಹತ್ವವನ್ನು ನಾವಿಂದು ಮನಗಾಣಬೇಕಿದೆ.
ಮಾನವರಿಗೆ ಆವರಿಸಿರುವ ಅಜ್ಞಾನದ ಕತ್ತಲು ಕಳೆಯಲು ಸಮ್ಯಕ್ ದೃಷ್ಟಿ, ನಮ್ಮ ಚಿಂತನೆಗಳು ಶ್ರೇಷ್ಠಮಟ್ಟದ್ದಾಗಿರ ಬೇಕೆಂದು ತಿಳಿಸುವ ಸಮ್ಯಕ್ ಸಂಕಲ್ಪ, ಸತ್ಯ ಮಾತ್ರ ನುಡಿಯ ಬೇಕು, ಇತರರ ಬಗ್ಗೆ ಕೆಟ್ಟದ್ದನ್ನು ಆಡಬಾರದೆಂದು ತಿಳಿಸುವ ಸಮ್ಯಕ್ ವಾಚ, ನಮ್ಮ ವರ್ತನೆ ಸಾಮರಸ್ಯದಿಂದ ಕೂಡಿರಬೇಕೆಂದು ತಿಳಿಸುವ ಸಮ್ಯಕ್ ಕರ್ಮ, ನ್ಯಾಯ ಮಾರ್ಗದಲ್ಲಿ ದುಡಿದು ತಿನ್ನ ಬೇಕೆಂದು ತಿಳಿಸುವ ಸಮ್ಯಕ್ ಆಜೀವೋ, ನಮ್ಮ ಮನೋ ವಿಕಾರಗಳನ್ನು ತಡೆಯುವ ಸಮ್ಯಕ್ ವ್ಯಾಯಾಮ, ಸಮಾಧಾನ ಮತ್ತು ವಿಚಾರಶೀಲತೆಯನ್ನು ಮೂಡಿಸುವ ಸಮ್ಯಕ್ ಸತ್ತಿ, ಇವುಗಳನ್ನು ಸಾಧಿಸುವಾಗ ಎದುರಾಗುವ ಐದು ಅಡ್ಡಿ ಆತಂಕಗಳಾದ; ದುರಾಸೆ, ಕೆಟ್ಟ ಸಂಕಲ್ಪ, ಸೋಮಾರಿತನ, ಸಂಶಯ ಮತ್ತು ಅನಿಶ್ಚಿತತೆ ಇವುಗಳನ್ನು ಮೀರಬೇಕೆಂದರೆ ಮನಸ್ಸಿನ ಏಕಾಗ್ರತೆ ಉಂಟುಮಾಡುವ ಸಮ್ಯಕ್ ಸಮಾಧಿ. ಇದರ ಜೊತೆಗೆ ಸದ್ಗುಣಗಳ ಮಾರ್ಗಗಳಾದ; ಶೀಲ, ದಾನ, ಉಪೇಕ್ಖಾ, ವೀರ್ಯ, ಕಾಂತಿ, ಸಚ್ಚ, ಅಧಿಥಾನ, ಕರುಣ, ಮೈತ್ರಿ ಈ ಸದ್ಗುಣಗಳನ್ನು ವ್ಯಕ್ತಿಗಳು ತಮ್ಮ ಶಕ್ತ್ಯಾನುಸಾರ ಬಳಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕೆಂದು ಬುದ್ಧ ಹೇಳುತ್ತಾನೆ. ಇವುಗಳನ್ನೇ ದಶಪರಾಮಿತ ಅಂದರೆ ಪರಿಪೂರ್ಣಸ್ಥಿತಿ ಎಂದು ಕರೆಯಲಾಗುತ್ತದೆ.
ನಮ್ಮ ಸಮಾಜದಲ್ಲಿ ನಿತ್ಯ ನಡೆಯುವ; ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರಗಳಿಂದ ಕ್ಷೋಭೆಗೊಂಡು ಗಾಯಗೊಂಡು ನರಳುತ್ತಿರುವ ಸಮಾಜಕ್ಕೆ, ವರ್ತಮಾನದ ಸಂಕಟಗಳಿಗೆ ಬುದ್ಧನ ಪಂಚಶೀಲ ತತ್ವಗಳು, ಅಷ್ಟಾಂಗ ಮಾರ್ಗ, ಸದ್ಗುಣಗಳ ಮಾರ್ಗ ದಿವ್ಯ ಔಷಧಿಯಾಗಬಲ್ಲವು. ಬುದ್ಧ ಹೇಳಿದ ಒಂದೊಂದು ತತ್ವಗಳೂ ಮನುಷ್ಯನ ಬಿಡುಗಡೆಯ ದಾರಿಗೆ ಬೆಳಕಾಗಿ ಕಾಣುತ್ತವೆ. ಅವುಗಳನ್ನು ಅರ್ಥೈಸಿಕೊಳ್ಳದೆ, ಅನುಷ್ಠಾನಕ್ಕೆ ತರದೆ ನಾವಿನ್ನು; ಜಾತಿ, ಧರ್ಮ, ದೇವರು, ಆತ್ಮ-ಪರಮಾತ್ಮ ಎನ್ನುವ ಜಂಜಾಟದಲ್ಲೇ ಸಿಲುಕಿಕೊಂಡಿದ್ದೇವೆ. ಒಮ್ಮೆ ಬುದ್ಧ ತೋರಿದ ದಾರಿಯಲ್ಲಿ ನಡೆದು ನೋಡಿದರೆ ತಿಳಿಯುತ್ತದೆ; ಆ ದಾರಿ ಎಷ್ಟೊಂದು ಸರಳವಾದದ್ದು, ಸ್ವಚ್ಚವಾದದ್ದು, ಸ್ಪಷ್ಟವಾದದ್ದು ಎಂದು.
ಆದರೆ ವಿಚಾರಗಳು ಸರಳವಾದಷ್ಟು ಅವುಗಳನ್ನು ಅನುಸರಿಸುವುದು ಕಷ್ಟ ಎಂದು ಭಾವಿಸಿಕೊಂಡು ಬದುಕುತ್ತಿರುವ ಕಾಲಘಟ್ಟದಲ್ಲಿ ಬುದ್ಧ ತೋರಿದ ದಾರಿಯಲ್ಲಿ ನಡೆಯಲಾಗದಷ್ಟು ನಮ್ಮ ಮನಸುಗಳು ಜಡಗೊಂಡಿವೆ. ಹಳೆಯ ಜಾಡಿಗೆ ಒಗ್ಗಿಕೊಂಡಿವೆ. ಅದರ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯಿಲ್ಲದೆ; ಹಿಂಸೆ, ಕ್ರೌರ್ಯ, ರಕ್ತಪಾತವನ್ನೇ ವಿಜೃಂಭಿಸುವಂತೆ ಢಾಳಾಗಿ ತೋರಿಸುತ್ತಿರುವ ಸಿನಿಮಾ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಾವು ಮಾಡಿದ ತಪ್ಪುಗಳಿಗೆ ಸ್ವಲ್ಪವೂ ಪಶ್ಚತ್ತಾಪ ಪಡದೆ ಸಲೀಸಾಗಿ ಬದುಕುವ ನಿರ್ದಯತೆಯ ಗುಣ ವಿಸ್ತಾರ ಪಡೆಯುತ್ತಿದೆ.
ಇಂತಹ ನಿರ್ಭಾವುಕ ವಾತಾವರಣದಲ್ಲಿ; “ತನಗೂ ಒಂದು ದಿನ ಸಾವಿದೆ ಎಂದು ತಿಳಿದ ಮನುಷ್ಯ ಇನ್ನೊಬ್ಬರಿಗೆ ಕೇಡು ಬಯಸಲಾರ” ಎನ್ನುವ ಬುದ್ಧನ ಮಾತು ನಮ್ಮೊಳಗಿನ ಕಾರುಣ್ಯವನ್ನು ಎಚ್ಚರಗೊಳಿಸುತ್ತದೆ. ಸರಿಯಾದ ದಾರಿಯಲ್ಲಿ ನಡೆಯುವಂತೆ ನಮ್ಮನ್ನು ಕಾಪಿಡುತ್ತದೆ. ಆದ್ದರಿಂದ ಬುದ್ಧ ಎಂದರೇನೇ ಜಗದ ಬೆಳಕು.
ಲೇಖನ-ಮೋದೂರು ತೇಜ, ಸಮಾಜ ಚಿಂತಕರು.


