ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಲ್ಯ ವಿವಾಹವು ಮಕ್ಕಳ ಭವಿಷ್ಯವನ್ನು ಹಾಳುಮಾಡುವ ಒಂದು ಸಾಮಾಜಿಕ ಪಿಡುಗು. ಭಾರತದಲ್ಲಿ ಬಾಲ್ಯ ವಿವಾಹವು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣೆ ಸಮಾಜ ಕಾರ್ಯಕರ್ತೆ ಅನಿತಾಲಕ್ಷ್ಮಿ ತಿಳಿಸಿದರು.
ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜಿನಲ್ಲಿ ಪ್ಯೂಚರ್ ವಿಜನ್ ಪೌಂಡೇಶನ್ ಸೊಸೈಟಿ ವತಿಯಿಂದ ಪೋಕ್ಸೋ ಕಾಯಿದೆ, ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ದತಿ ಕುರಿತು ವಿದ್ಯಾರ್ಥಿಗಳಿಗೆ ಅರಿವು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಾಲ್ಯವಿವಾಹ ನಿಯಂತ್ರಣಕ್ಕೆ ಕಾನೂನು ಜಾರಿಯಲಿದೆ. ಬಾಲ್ಯ ವಿವಾಹ ಮಾಡಿಸುವ, ನಡೆಸಿಕೊಡುವ ಅಥವಾ ಪ್ರೋತ್ಸಾಹಿಸುವ ಪೋಷಕರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತಿದೆ.
ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದಿವೆ. ಪ್ರತಿಯೊಂದು ಮಗುವಿನ ಉಜ್ವಲ ಭವಿಷ್ಯ ಮತ್ತು ದೇಶದ ಪ್ರಗತಿಗೆ ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಂದು ಮಗುವಿಗೂ ಸುರಕ್ಷಿತ ಮತ್ತು ಪ್ರೀತಿಯ ವಾತಾವರಣದಲ್ಲಿ ಬೆಳೆಯುವ ಹಕ್ಕಿದೆ. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂದರು.
ಪೋಕ್ಸೋ ಕಾಯಿದೆ ಕುರಿತು ಪ್ಯೂಚರ್ ವಿಜನ್ ಪೌಂಡೇಶನ್ ಸೊಸೈಟಿಯ ಕಾನೂನು ಸಲಹೆಗಾರ ಮಧುಸೂದನ್ ಮಾತನಾಡಿ, ಪೋಕ್ಸೊ ಕಾಯಿದೆಯು 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯಾಗಿದೆ.
18 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಕಿರುಕುಳದಿಂದ ರಕ್ಷಿಸಲು ಭಾರತದಲ್ಲಿ ಜಾರಿಗೆ ತರಲಾದ ಅತ್ಯಂತ ಕಟ್ ಅವಕಾಶವಿದೆ.ಮಗುವಿನ ಮೇಲೆ ದೌರ್ಜನ್ಯ ನಡೆದಿದೆ ಎಂದು ಗೊತ್ತಿದ್ದರೂ ಪೊಲೀಸರಿಗೆ ಮಾಹಿತಿ ನೀಡದ ಶಿಕ್ಷಕರು, ವೈದ್ಯರು ಅಥವಾ ಇತರ ಸಂಸ್ಥೆಗಳ ಮೇಲೂ ಸಹ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.
ಕಾರ್ಯಕ್ರಮದಲ್ಲಿ ಲೋಕಸೇವಾ ನಿರತ ಡಿ.ಕೊಂಗಾಡಿಯಪ್ಪ ಸ್ಮಾರಕ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಶ್ರೀ ಕೊಂಗಾಡಿಯಪ್ಪ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಶ್ರೀನಿವಾಸ್, ಪ್ಯೂಚರ್ ವಿಜನ್ ಪೌಂಡೇಶನ್ ಸೊಸೈಟಿ ಅಧ್ಯಕ್ಷ ಜಿ.ಎನ್. ಸುನೀಲ್ ಕುಮಾರ್, ಸಂಯೋಜಕರುಗಳಾದ ವಿಕಾಸ್ ಮತ್ತು ಮೂರ್ತಿ, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.



