ಚಂದ್ರವಳ್ಳಿ ನ್ಯೂಸ್, ಮೈಸೂರು:
"ಹೆಣ್ಣುಮಕ್ಕಳ ಸುರಕ್ಷತೆ ಕೇವಲ ಕಾನೂನಿನ ವಿಷಯವಲ್ಲ. ಅದು ಸಮಾಜದ ಮಾನವೀಯತೆ, ಆಡಳಿತದ ಜವಾಬ್ದಾರಿ ಮತ್ತು ನಾಗರಿಕತೆಯ ನಿಜವಾದ ಪರೀಕ್ಷೆಯಾಗಿದೆ. ನ್ಯಾಯ ತ್ವರಿತವಾಗಿ ದೊರೆತು, ಕಾನೂನು ಪರಿಣಾಮಕಾ ರಿಯಾಗಿ ಜಾರಿಯಾದಾಗ ಹಾಗೂ ಸಮಾಜ ತನ್ನ ಹೊಣೆಗಾರಿಕೆಯನ್ನು ಅರಿತಾಗ ಮಾತ್ರ ಹೆಣ್ಣಿನ ಕಣ್ಣೀರಿಗೆ ನಿಜವಾದ ಉತ್ತರ ಸಿಗುತ್ತದೆ."
ಕಣ್ಣೀರ ಹನಿಯಲಿ ಕರಗಿತೊ ಕನಸು
ಕಾಮಾಂಧತೆಯಲಿ ನಲುಗಿತು ಮನಸು.
ನ್ಯಾಯದ ಬೆಳಕಿಗೆ ಕಾದಿದೆ ಬದುಕು
ಹೆಣ್ಣಿನ ನಗುವಲಿ ಅರಳಲಿ ಹೊಸ ಯುಗವು.
ಹೆಣ್ಣು ದೇವತೆಯಲ್ಲ, ಜೀವಸೃಷ್ಟಿಯ ಮೂಲ. ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ ಮಾನವ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಅವಳ ಅಸ್ತಿತ್ವವಿದೆ. ಅಂತಹ ಹೆಣ್ಣಿನ ಮೇಲೆಯೇ ದೌರ್ಜನ್ಯ ಎಸಗುವ ಸಮಾಜಕ್ಕೆ ನಾಗರಿಕತೆ ಎಂಬ ಹೆಗ್ಗಳಿಕೆ ಸಲ್ಲದು. ರಾಜಸ್ಥಾನದಂತಹ ಅಮಾನವೀಯ ಘಟನೆಗಳು ಕೇವಲ ಒಬ್ಬ ಹೆಣ್ಣಿನ ಮೇಲಿನ ದಾಳಿ ಅಲ್ಲ, ಇಡೀ ಮಾನವೀಯತೆಯ ಮೇಲಿನ ಆಘಾತ. ಇಂತಹ ಕಾಮಾಂಧ ವಿಕೃತ ಮನಸ್ಥಿತಿಗೆ ಕಠಿಣ ಶಿಕ್ಷೆಯೇ ಸಮಾಜಕ್ಕೆ ನ್ಯಾಯ.
ಒಂದು ಸಮಾಜದ ನಿಜವಾದ ಅಭಿವೃದ್ಧಿಯನ್ನು ಅದರ ಕಟ್ಟಡಗಳ ಎತ್ತರದಿಂದ ಅಳೆಯುವುದಿಲ್ಲ. ಆ ಸಮಾಜದಲ್ಲಿ ಹೆಣ್ಣುಮಕ್ಕಳು ಎಷ್ಟು ನಿರ್ಭಯವಾಗಿ ಬದುಕುತ್ತಿದ್ದಾರೆ ಎಂಬುದರಿಂದ ಅಳೆಯಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ನಾಗರಿಕತೆ, ಅಭಿವೃದ್ಧಿ ಮತ್ತು ಮಾನವೀಯತೆಯ ಬಗ್ಗೆ ನಾವು ಹೇಳಿಕೊಳ್ಳುವ ಹೆಮ್ಮೆಯೇ ಪ್ರಶ್ನಾರ್ಥಕವಾಗುತ್ತದೆ. ಪ್ರತಿ ಬಾರಿ ಮಹಿಳೆಯರ ಅಥವಾ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಸುದ್ದಿ ಹೊರಬಂದಾಗ ಇಡೀ ದೇಶ ಬೆಚ್ಚಿಬೀಳುತ್ತದೆ. ಪ್ರತಿಭಟನೆಗಳು ನಡೆಯುತ್ತವೆ. ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಅಲೆ ಎದ್ದೇಳುತ್ತದೆ. ಕಠಿಣ ಕ್ರಮದ ಭರವಸೆಗಳು ಕೇಳಿಬರುತ್ತವೆ. ಆದರೆ ಕೆಲವು ದಿನಗಳು ಕಳೆದ ನಂತರ ಎಲ್ಲವೂ ಸಹಜವಾಗಿಬಿಡುತ್ತದೆ. ಸುದ್ದಿಗಳು ಬದಲಾಗುತ್ತವೆ. ಚರ್ಚೆಗಳು ನಿಲ್ಲುತ್ತವೆ. ಆದರೆ ಸಂತ್ರಸ್ತೆಯ ಕಣ್ಣೀರು ಮಾತ್ರ ನಿಲ್ಲುವುದಿಲ್ಲ. ಅವಳ ನೋವು ಜೀವಮಾನವಿಡೀ ಅವಳನ್ನೂ ಅವಳ ಕುಟುಂಬವನ್ನೂ ಕಾಡುತ್ತಲೇ ಇರುತ್ತದೆ. ಇದೇ ನಮ್ಮ ಸಮಾಜದ ಅತ್ಯಂತ ನೋವಿನ ವಾಸ್ತವ.
ಇತ್ತೀಚಿನ ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಜನರ ಮನಸ್ಸನ್ನು ಮರುಮರು ತಲ್ಲಣಗೊಳಿಸಿವೆ. ಮೈಸೂರು, ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ ಸೇರಿದಂತೆ ಹಲವು ಕಡೆ ನಡೆದ ಘಟನೆಗಳು ಒಂದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿಸುತ್ತಿವೆ. ಹೆಣ್ಣಿನ ಕಣ್ಣೀರಿಗೆ ಉತ್ತರ ಯಾವಾಗ?
ನಾವು ಅಭಿವೃದ್ಧಿಯ ಬಗ್ಗೆ ಹೆಮ್ಮೆಪಡುತ್ತೇವೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ, ಡಿಜಿಟಲ್ ವ್ಯವಸ್ಥೆ, ಅಂತರಿಕ್ಷ ಸಾಧನೆಗಳ ಬಗ್ಗೆ ಜಗತ್ತಿನ ಮುಂದೆ ಎದೆತಟ್ಟಿಕೊಂಡು ಮಾತನಾಡುತ್ತೇವೆ. ಆದರೆ ಒಂದು ಹೆಣ್ಣುಮಗಳು ಶಾಲೆಗೆ, ಕಾಲೇಜಿಗೆ, ಉದ್ಯೋಗಕ್ಕೆ ಅಥವಾ ತನ್ನ ಮನೆಯ ಹೊರಗೆ ಭಯವಿಲ್ಲದೆ ಹೋಗಲು ಸಾಧ್ಯವಾಗದಿದ್ದರೆ ಆ ಅಭಿವೃದ್ಧಿಯ ಹೆಮ್ಮೆ ಅಪೂರ್ಣವಾಗುತ್ತದೆ. ಮಹಿಳೆಯರ ಸುರಕ್ಷತೆಯೇ ನಾಗರಿಕತೆಯ ನಿಜವಾದ ಮಾನದಂಡ.
ಅತ್ಯಾಚಾರವೆಂಬುದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ಅಪರಾಧವಲ್ಲ. ಅದು ಇಡೀ ಸಮಾಜದ ಮೌಲ್ಯಗಳ ಮೇಲಿನ ದಾಳಿ. ಅದು ಮಾನವೀಯತೆಯ ಸೋಲು. ಒಬ್ಬ ಬಾಲಕಿಯ ಬಾಲ್ಯವನ್ನು, ಒಬ್ಬ ಮಹಿಳೆಯ ಆತ್ಮವಿಶ್ವಾಸವನ್ನು ಮತ್ತು ಒಂದು ಕುಟುಂಬದ ನೆಮ್ಮದಿಯನ್ನು ಕಸಿದುಕೊಳ್ಳುವ ಕ್ರೂರ ಕೃತ್ಯ. ಇಂತಹ ಘಟನೆಗಳು ನಡೆದಾಗ ನೋವಾಗುವುದು ಕೇವಲ ಸಂತ್ರಸ್ತೆಯ ಕುಟುಂಬಕ್ಕಲ್ಲ. ಮನುಷ್ಯತ್ವವನ್ನು ನಂಬುವ ಪ್ರತಿಯೊಬ್ಬ ನಾಗರಿಕನಿಗೂ.
ಕಾನೂನುಗಳ ಕೊರತೆಯೇ ಇಂದಿನ ಸಮಸ್ಯೆಯಲ್ಲ. ಅವುಗಳ ಪರಿಣಾಮಕಾರಿ ಜಾರಿ ಮತ್ತು ಸಮಯೋಚಿತ ನ್ಯಾಯವೇ ದೊಡ್ಡ ಸವಾಲಾಗಿದೆ. ತನಿಖೆಯಲ್ಲಿ ವಿಳಂಬ, ವಿಚಾರಣೆಯಲ್ಲಿ ಅನಗತ್ಯ ಕಾಲಹರಣ, ಸಾಕ್ಷ್ಯಗಳ ದುರ್ಬಲ ನಿರ್ವಹಣೆ ಮತ್ತು ಸಂತ್ರಸ್ತೆಯ ಮೇಲಿನ ಸಾಮಾಜಿಕ ಒತ್ತಡ ಇವೆಲ್ಲವೂ ನ್ಯಾಯದ ಮೇಲಿನ ವಿಶ್ವಾಸವನ್ನು ಕುಗ್ಗಿಸುತ್ತವೆ. ಅಪರಾಧ ಮಾಡಿ ತಪ್ಪಿಸಿಕೊಳ್ಳಬಹುದು ಎಂಬ ಭಾವನೆ ಸಮಾಜದಲ್ಲಿ ಉಳಿದಿರುವವರೆಗೆ ಇಂತಹ ಅಪರಾಧಗಳನ್ನು ಸಂಪೂರ್ಣವಾಗಿ ತಡೆಯುವುದು ಕಷ್ಟ.
ಇತ್ತೀಚಿನ ದಿನಗಳಲ್ಲಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ನಡೆಯುವ ಮೋಸಗಳು, ಅನೈತಿಕ ಸಂಬಂಧಗಳಿಂದ ಉಂಟಾಗುವ ಹಿಂಸೆ, ಸಣ್ಣಪುಟ್ಟ ಕಲಹಗಳಿಂದ ನಡೆಯುವ ಕೊಲೆಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಪ್ರೀತಿಯ ಹೆಸರಿನಲ್ಲಿ ವಂಚನೆ, ಸ್ವಾರ್ಥ ಮತ್ತು ಸೇಡಿನ ಮನೋಭಾವಕ್ಕೆ ಅವಕಾಶ ನೀಡುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಸಂಬಂಧಗಳ ಹೆಸರಿನಲ್ಲಿ ನಡೆಯುವ ಹಿಂಸೆ ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಯಾವುದೇ ಸಮಸ್ಯೆಗೆ ಹಿಂಸೆ ಪರಿಹಾರವಲ್ಲ ಎಂಬ ಅರಿವು ಸಮಾಜದಲ್ಲಿ ಗಟ್ಟಿಯಾಗಬೇಕು.


ಕಾನೂನು ಕೇವಲ ಪುಸ್ತಕಗಳಲ್ಲಿ ಉಳಿಯಬಾರದು. ಅದು ಜನರ ಬದುಕಿನಲ್ಲಿ ನ್ಯಾಯದ ರೂಪದಲ್ಲಿ ಕಾಣಿಸಬೇಕು. ಪ್ರತಿಯೊಂದು ಪ್ರಕರಣದ ತನಿಖೆ ತ್ವರಿತವಾಗಿ ನಡೆಯಬೇಕು. ನ್ಯಾಯಾಲಯಗಳಲ್ಲಿ ಸಮಯಬದ್ಧ ವಿಚಾರಣೆ ನಡೆಯಬೇಕು. ಅಪರಾಧದ ಗಂಭೀರತೆಗೆ ಅನುಗುಣವಾಗಿ ಕಾನೂನಿನಲ್ಲಿ ನಿಗದಿಪಡಿಸಿರುವ ಶಿಕ್ಷೆಗಳು ವಿಳಂಬವಿಲ್ಲದೆ ಜಾರಿಯಾಗಬೇಕು. ಅಪರಾಧ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ದೃಢ ಸಂದೇಶ ಸಮಾಜಕ್ಕೆ ತಲುಪಬೇಕು. ಅದೇ ಅಪರಾಧಗಳನ್ನು ತಡೆಯುವ ಮೊದಲ ಹೆಜ್ಜೆ.
ಡಿಜಿಟಲ್ ಯುಗದ ಪ್ರಬುದ್ಧ ಬೆಳವಣಿಗೆಯ ಬಗ್ಗೆ ಹೆಮ್ಮೆಪಡುವ ನಾವು, ಹೆಣ್ಣುಮಕ್ಕಳ ಮೇಲಿನ ಪೈಶಾಚಿಕ ಕೃತ್ಯಗಳನ್ನು ತಡೆಯಲು ಇನ್ನೂ ಏಕೆ ವಿಫಲರಾಗುತ್ತಿದ್ದೇವೆ ಎಂಬ ಪ್ರಶ್ನೆ ಕಾಡುತ್ತದೆ. ದೂರದೃಷ್ಟಿಯ ನಾಯಕತ್ವವನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ದೇಶದಲ್ಲಿ ಕ್ಷಣಕ್ಷಣಕ್ಕೂ ವಿಕೃತ ಮನಸ್ಸಿನ ದುರುಳರು ಹೆಣ್ಣಿನ ಮಾನವನ್ನು ತುಳಿಯುತ್ತಿರುವುದು ನಾಗರಿಕ ಸಮಾಜಕ್ಕೆ ಕಳಂಕ. ಎಳೆಯ ವಯಸ್ಸಿನ ಬಾಲಕಿಯರ ಮೇಲೆಯೂ ಅಮಾನವೀಯ ದೌರ್ಜನ್ಯ ಎಸಗುವ ಮನೋವಿಕೃತ ಅಪರಾಧಿಗಳ ವಿರುದ್ಧ ಕಾನೂನು ಯಾವುದೇ ರೀತಿಯ ಸಡಿಲಿಕೆ ತೋರದೆ ಅತ್ಯಂತ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಇತ್ತೀಚೆಗೆ ಹದಿಮೂರು ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯದಂತಹ ಘಟನೆಗಳು ಇಡೀ ಸಮಾಜದ ಮನಸ್ಸನ್ನು ತಲ್ಲಣಗೊಳಿಸಿವೆ. ಇಂತಹ ಅಪರಾಧಗಳಿಗೆ ಕಾನೂನಿನಲ್ಲಿ ನಿಗದಿಪಡಿಸಿರುವ ಗರಿಷ್ಠ ಶಿಕ್ಷೆ ತ್ವರಿತವಾಗಿ ಜಾರಿಯಾಗಬೇಕು ಎಂಬ ವಿಶ್ವಾಸವನ್ನು ಆಡಳಿತ ಮೂಡಿಸಬೇಕು. ನಿರಪರಾಧ ಹೆಣ್ಣುಮಕ್ಕಳ ರಕ್ಷಣೆ ಸರ್ಕಾರದ ಮೊದಲ ಕರ್ತವ್ಯ. ಅದನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾದರೆ ಜನರ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕ ಹೊಣೆಗಾರಿಕೆ ಆಡಳಿತದ ಮೇಲಿದೆ. ಹೆಣ್ಣುಮಕ್ಕಳು ಭಯವಿಲ್ಲದೆ ಬದುಕುವ ವಾತಾವರಣ ನಿರ್ಮಾಣವಾಗುವವರೆಗೆ ಸಮಾಜ, ಸರ್ಕಾರ ಮತ್ತು ನ್ಯಾಯ ವ್ಯವಸ್ಥೆ ತಮ್ಮ ಪ್ರಯತ್ನವನ್ನು ನಿಲ್ಲಿಸಬಾರದು.
ಆದರೆ ಕಾನೂನು ಮಾತ್ರ ಸಾಕಾಗುವುದಿಲ್ಲ. ಮನೆಗಳಲ್ಲಿ ಮಕ್ಕಳಿಗೆ ಮಹಿಳೆಯರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸಬೇಕು. ಶಾಲೆಗಳಲ್ಲಿ ಮೌಲ್ಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಹಿಳೆಯನ್ನು ವ್ಯಕ್ತಿಯಾಗಿ ಗೌರವಿಸುವ ಮನೋಭಾವ ಸಮಾಜದ ಪ್ರತಿಯೊಂದು ಹಂತದಲ್ಲೂ ಬೆಳೆಯಬೇಕು. ಸಂತ್ರಸ್ತೆಯನ್ನು ಪ್ರಶ್ನಿಸುವ ಮನಸ್ಥಿತಿಯನ್ನು ತೊರೆದು, ಅಪರಾಧಿಯನ್ನು ಪ್ರಶ್ನಿಸುವ ಸಂಸ್ಕೃತಿ ರೂಪುಗೊಳ್ಳಬೇಕು.
ಸರ್ಕಾರ, ನ್ಯಾಯಾಂಗ, ಪೊಲೀಸ್ ಇಲಾಖೆ, ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳು ಮತ್ತು ಸಮಾಜ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಬದಲಾವಣೆ ಸಾಧ್ಯ. ಹೆಣ್ಣುಮಕ್ಕಳ ಸುರಕ್ಷತೆ ಕೇವಲ ಮಹಿಳೆಯರ ಸಮಸ್ಯೆಯಲ್ಲ. ಅದು ರಾಷ್ಟ್ರದ ಗೌರವದ ಪ್ರಶ್ನೆ. ಹೆಣ್ಣಿನ ಕಣ್ಣೀರಿಗೆ ಉತ್ತರ ಭಾಷಣಗಳಲ್ಲಿ ಸಿಗುವುದಿಲ್ಲ. ಸಂತಾಪದ ಹೇಳಿಕೆಗಳಲ್ಲೂ ಸಿಗುವುದಿಲ್ಲ. ಆ ಉತ್ತರ ನ್ಯಾಯದಲ್ಲಿ ಸಿಗಬೇಕು. ಕಾನೂನಿನ ಕಟ್ಟುನಿಟ್ಟಿನ ಜಾರಿಯಲ್ಲಿ ಸಿಗಬೇಕು. ಸಮಾಜದ ಜಾಗೃತಿಯಲ್ಲಿ ಸಿಗಬೇಕು. ಪ್ರತಿಯೊಬ್ಬ ಹೆಣ್ಣುಮಗಳು ನಿರ್ಭಯವಾಗಿ ಬದುಕುವ ದಿನವೇ "ಹೆಣ್ಣಿನ ಕಣ್ಣೀರಿಗೆ ಉತ್ತರ ಸಿಕ್ಕ ದಿನ" ಎಂದು ಇತಿಹಾಸ ಹೇಳಲಿದೆ.
ಲೇಖನ: ಕಾಶಿಗೌ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರು , ಮೈಸೂರು.



