ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದರ ಜೊತೆಗೆ ಚಿತ್ರದುರ್ಗ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಯುವರಾಜ್‌ನಾಯ್ಕರವರ ಭ್ರಷ್ಟಾಚಾರದ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜೈಹಿಂದ್ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಮೆಡಿಕಲ್ ಕಾಲೇಜಿಗೆ ಜಿಲ್ಲಾಸ್ಪತ್ರೆಯನ್ನು ಸೇರ್ಪಡೆಗೊಳಿಸಿದಾಗಿನಿಂದಲೂ ಅಲ್ಲಿನ ವ್ಯವಸ್ಥೆ ಹದಗೆಟ್ಟು ಹೋಗಿದೆ. ಒಂದೆ ಬೆಡ್‌ನಲ್ಲಿ ಇಬ್ಬರು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ಕೊಡುವಂತ ವಾತಾವರಣ ನಿರ್ಮಾಣವಾಗಿದೆ. ಮುಖ್ಯವಾಗಿ ಬೇಕಾಗಿರುವ ಔಷಧಿಗಳ ಕೊರತೆಯಿರುವುದರಿಂದ ಹೊರಗಿನಿಂದ ಔಷಧಿಗಳನ್ನು ತರುವಂತೆ ವೈದ್ಯರುಗಳು ಚೀಟಿ ಬರೆದು ಕೊಡುತ್ತಿದ್ದಾರೆ. ಸಿಟಿ ಸ್ಕ್ಯಾನ್ ಕೆಟ್ಟು ಎಂಟು ತಿಂಗಳಾಗಿದ್ದರೂ ಇನ್ನು ದುರಸ್ಥಿಯಾಗಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸ್ಕ್ಯಾನ್ ಮಾಡಿಸಿಕೊಂಡು ಬರಬೇಕಾದರೆ ಸಾವಿರಾರು ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದು ಬಡವರಿಗೆ ಹೊರೆಯಾಗಿದೆ ಎಂದು ಧರಣಿಯ ನೇತೃತ್ವ ವಹಿಸಿರುವ ಜೈಹಿಂದ್ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಯದ್ ಅಖ್ತರ್ ದೂರಿದರು.
ಹೆಸರಿಗೆ ಮಾತ್ರ ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಿದೆ. ಬಡ ರೋಗಿಗಳಿಗೆ ಯಾವುದೇ ಪ್ರಯೋಜನವಿಲ್ಲ. ಮೆಡಿಕಲ್ ಕಾಲೇಜಿನ ಡೀನ್
ಡಾ.ಯುವರಾಜ್‌ನಾಯ್ಕನ ಅಕ್ರಮಗಳ ವಿರುದ್ದ ಹಲವು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಗುಡ್ಡದರಂಗವ್ವನಹಳ್ಳಿಯ ಜ್ಞಾನ ಗಂಗೋತ್ರಿ ಕಟ್ಟಡದಲ್ಲಿ
ಡೀನ್‌ಗೆ ಸುಸಜ್ಜಿತವಾದ ಕೊಠಡಿಯಿದ್ದರೂ ೭೫ ಲಕ್ಷ ರೂ.ವೆಚ್ಚದಲ್ಲಿ ಹೊಸ ಕೊಠಡಿಯನ್ನು ನಿಯಮ ಬಾಹಿರವಾಗಿ ನಿರ್ಮಿಸಿಕೊಳ್ಳಲು ಹೊರಟಿವುದರಿಂದ ಲಕ್ಷಾಂತರ ರೂ.ದುರುಪಯೋಗವಾಗುವ ಸಾಧ್ಯತೆಗಳಿವೆ. ಮೆಡಿಕಲ್ ಕಾಲೇಜಿಗೆ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಮೊದಲ ನೇಮಕಾತಿ ಪ್ರಕ್ರಿಯೆಯು ನ್ಯಾಯಾಲಯದಲ್ಲಿದ್ದು, ಬಹಳಷ್ಟು ಅನುಮಾನಗಳಿಗೆ ಎಡೆಮಾಡಿದೆ. ಹೀಗಿರುವಾಗ ಇನ್ನು ೫೯ ಹುದ್ದೆಗಳಿಗೆ ನೇಮಕಾತಿ ಹೊರಡಿಸಿರುವುದು ಏತಕ್ಕಾಗಿ ಎಂದು ಪ್ರತಿಭಟನಾಕಾರರು ಭ್ರಷ್ಟಾಚಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಜೈಹಿಂದ್ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಸೈಯದ್ ಅಶ್ವಕ್ ಅಹಮದ್, ಚಂದ್ರಪ್ಪ, ರಮೇಶ್, ಹುಸೇನ್‌ಪೀರ್, ಅಸ್ಲಾಂಭಾಷಾ, ಇರ್ಫಾನ್ ಇನ್ನು ಅನೇಕರು ಧರಣಿಯಲ್ಲಿ ಭಾಗವಹಿಸಿದ್ದರು.



