ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರವನ್ನು ಪ್ರತಿನಿತ್ಯ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸ್ವಚ್ಛತೆಯ ಕೊರತೆ ಉಂಟಾಗಿದೆ. ತಾವು ಪ್ರತಿನಿತ್ಯ ಓಡಾಡುವ ರಸ್ತೆಯಲ್ಲಿ ಶೌಚಾಲಯದ ನೀರು ಹರಿಯುತ್ತಿದೆ. ಈ ಕುರಿತು ಸ್ಥಳೀಯ ನಗರಸಭೆಗೆ ಎಷ್ಟು ಬಾರಿ ಮನವಿ ಮಾಡಿದರು ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಾರ್ವಜನಿಕ ಶೌಚಾಲಯವನ್ನು ತೆರವುಗೊಳಿಸಿ ಪೌರಕಾರ್ಮಿಕರ ಕಾಲೋನಿಯಲ್ಲಿ ಜೀವನ ಸವೆಸುತ್ತಿರುವ ಜನತೆಗೆ ಅನುಕೂಲ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕುರಿತು ಸ್ಥಳೀಯ ಮುಖಂಡ ಮಂಜುನಾಥ್ ಮಾತನಾಡಿ ನಗರದ ಹಳೆ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯವು ಸೂಕ್ತ ನಿರ್ವಹಣೆ ಇಲ್ಲದೆ ಮೂತ್ರ ವಿಸರ್ಜನೆ ಹಾಗೂ ಬಳಕೆ ನೀರು ಬಿರುಕು ಬಿಟ್ಟಿರುವ ಗೋಡೆಗಳ ಮೂಲಕ ರಸ್ತೆಯಲ್ಲಿ ಹರಿಯುತ್ತಿದ್ದು ಪೌರಕಾರ್ಮಿಕರ ಕಾಲೋನಿಯ ನಿವಾಸಿಗಳ ಮನೆ ಬಾಗಿಲು ತಲುಪುತ್ತಿದೆ. ಪ್ರತಿನಿತ್ಯ ವಾಸನೆ ಹಾಗೂ ಈ ಕೊಳಚೆ ನೀರಿನಲ್ಲಿ ನಡೆಯುವುದು ಕಷ್ಟ ಸಾಧ್ಯವೇ ಸರಿ. ಈ ಕುರಿತು ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಗೆ ಮನವಿ ಸಲ್ಲಿಸಿದ್ದೇವೆ ಆದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯದ ವಾಸನೆಯಿಂದಾಗಿ ಇಲ್ಲ ಸಲ್ಲದ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರ ಮೂತ್ರವು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ.ಅಧಿಕಾರಿಗಳು ಕೂಡಲೇ ಎಚ್ಚೆತ್ತು ಈ ಸಾರ್ವಜನಿಕ ಶೌಚಾಲಯವನ್ನು ತೆರವುಗೊಳಿಸಬೇಕೆಂದು ತಿಳಿಸಿದರು.
ಸಾರ್ವಜನಿಕ ಶೌಚಾಲಯಕ್ಕೆ ನಿರ್ವಹಣೆಯ ಕೊರತೆ :
ಇನ್ನೇನು ಬಿದ್ದು ಹೋಗುತ್ತವೆ ಎಂಬ ಬಾಗಿಲು ಒಡೆದ ಟೈಲ್ಸ್ ಗಳು. ಸ್ವಚ್ಛತೆ ಇಲ್ಲದ ಪ್ರಾಂಗಣ.ಸೂಕ್ತ ಗಾಳಿ ಬೆಳಕಿನ ಕೊರತೆಯೊಂದಿಗೆ ದೊಡ್ಡಬಳ್ಳಾಪುರ ಹಳೆ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಶೌಚಾಲಯ ಸೂಕ್ತ ನಿರ್ವಹಣೆಯ ನಿರೀಕ್ಷೆಯಲ್ಲಿ ಕಾದು ಕೂತಿದೆ. ಪ್ರತಿನಿತ್ಯ ಸಾವಿರಾರು ಜನ ಬಳಸುವ ಶೌಚಾಲಯವು ಶುಭ್ರತೆ ಕಾಣದೆ ಇರುವುದು ಅಧಿಕಾರಿಗಳ ಗಮನಕ್ಕೆ ಬಹುಶಃ ಕಂಡಿಲ್ಲ ಎಂದು ಕಾಣುತ್ತದೆ. ಅಧಿಕಾರಿಗಳೇ ಒಮ್ಮೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ.
ಪೌರಕಾರ್ಮಿಕರ ಕಾಲೋನಿಗೆ ಬರಲು ಎರಡು ಮಾರ್ಗಗಳಿದ್ದು, ಅದರಲ್ಲಿ ಬಸ್ ನಿಲ್ದಾಣದ ಮೂಲಕ ಹಾದು ಹೋಗುವ ಮಾರ್ಗವು ಪ್ರಮುಖವಾಗಿದೆ. ಆದರೆ ಈ ಮಾರ್ಗದಲ್ಲಿ ಸಾರ್ವಜನಿಕ ಶೌಚಾಲಯದಿಂದ ಉಂಟಾಗುವ ತೊಂದರೆಯಿಂದಾಗಿ ಪ್ರಯಾಣಿಸುವುದೇ ಕಷ್ಟ ಸಾಧ್ಯವಾಗಿದೆ.ಕೂಡಲೇ ಈ ಶೌಚಾಲಯವನ್ನು ತೆರವುಗೊಳಿಸಿ ಪೌರಕಾರ್ಮಿಕರ ಕಾಲೋನಿಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.



