ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ನುಡಿದಂತೆ ನಡೆಯಬೇಕು’ ಎಂಬುದು 12ನೇ ಶತಮಾನದ ಬಸವಾದಿ ಶರಣರ ನಿಶ್ಚಲ ನಿಲುವು. ನಮ್ಮ ಸರ್ಕಾರ ಈ ಧ್ಯೇಯ ವಾಕ್ಯದಲ್ಲಿ ನಂಬಿಕೆಯಿಟ್ಟು ರಾಜ್ಯವು ತನ್ನದೇ ಆದ ಅಭಿವೃದ್ಧಿ ಮಾದರಿಗಳನ್ನು ನಿರ್ಮಿಸಿದೆ. ಇದಕ್ಕೆ ‘ಕರ್ನಾಟಕ ಅಭಿವೃದ್ಧಿ ಮಾದರಿ’ ಎಂಬ ಹೆಸರಿನಲ್ಲಿ ಮನ್ನಣೆ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದೇಶದ ಪ್ರಮುಖ ಸಂಸ್ಥೆಗಳು ಮಾಡಿರುವ ಸಮೀಕ್ಷೆಗಳ ಪ್ರಕಾರ ಶೇ.10ರಷ್ಟಿರುವ ಶ್ರೀಮಂತರ ಬಳಿ ಶೇ.80ರಷ್ಟು ಸಂಪತ್ತು ಶೇಖರಣೆಯಾಗಿದೆ. ಆದರೆ ಶೇ.10 ರಷ್ಟು ಜನರು ಕೇವಲ ಶೇ.3ರಷ್ಟು ಮಾತ್ರ ಜಿಎಸ್‌ಟಿ ಪಾವತಿಸುತ್ತಿದ್ದಾರೆಂದು ಅಧ್ಯಯನಗಳು ಹೇಳುತ್ತಿವೆ. ಉಳಿದ ಶೇ.90ರಷ್ಟು ಜನ ಹೊಟ್ಟೆ-ಬಟ್ಟೆಗೆ ದುಡಿಯುವವರಾದ್ದರಿಂದ ಶೇ.97 ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಯಾವ ಆರ್ಥಿಕತೆ ಮುಂದುವರೆಯಲು ಸಾಧ್ಯ? ಸಂವಿಧಾನದ ಆಶಯಗಳನ್ನು ಈಡೇರಿಸುವುದು ಹೇಗೆ? ಬೃಹದಾಕಾರವಾಗಿ ಬೆಳೆಯುತ್ತಿರುವ ಅಸಮಾನತೆಯನ್ನು ತಗ್ಗಿಸುವುದು ಹೇಗೆ? ಎಂಬ ಪ್ರಶ್ನೆಗಳು ನಮ್ಮನ್ನು ಬಾಧಿಸಲಾರಂಭಿಸಿದವು.
ಈ ಬೃಹತ್ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳು ಹಾಗೂ ಇನ್ನಿತರೆ ಜನ ಕಲ್ಯಾಣದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.


