ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಚಿಕ್ಕಬಳ್ಳಾಪುರ ಜಿಲ್ಲೆಯ ಜಂಗಮಕೋಟೆಯಲ್ಲಿ ಸುಮಾರು ಎರಡು ಸಾವಿರ ಎಕರೆ ಭೂ ಸ್ವಾದೀನ ವಿರೋಧಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಜೂನ್ 5 ರಂದು ನಡೆಯುತ್ತಿರುವ ರೈತರ ವಿಧಾನ ಸೌದ ಚಲೋ ಪ್ರತಿಭಟನೆಯನ್ನು ಬೆಂಬಲಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ರೈತ ಸಂಘ ಹೋರಾಟದಲ್ಲಿ ಭಾಗವಹಿಸಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಹೇಳಿದರು.
ನಗರದ ಎ . ಪಿ. ಎಂ. ಸಿ.ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆ ಹೆಸರಿನಲ್ಲಿ ಸರ್ಕಾರ ಭೂ ಸ್ವಾದೀನ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲ. ದೊಡ್ಡಬಳ್ಳಾಪುರ ತಾಲೂಕಿನ ಅಫೇರಲ್ ಪಾರ್ಕಿಗಾಗಿ ಸಾವಿರಾರು ಎಕರೆ ರೈತರ ಕೃಷಿ ಜಮೀನನ್ನು ವಶ ಪಡಿಸಿಕೊಂಡು ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರ ಮಾಡುತ್ತಿದೆ.
ಕೈಗಾರಿಕರಣದಿಂದ ದೇಶದಲ್ಲಿ ಆಹಾರ ಭದ್ರತೆಗೆ ದಕ್ಕೆಯಾಗುತ್ತಿದೆ. ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲಿ ಆದರೆ ಸೋಲಾರ್ ವಿದ್ಯುತ್ ಹೆಸರಿನಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಬೀದಿಗೆ ತಳ್ಳುವ ಸರ್ಕಾರದ ಕ್ರಮ ಖಂಡನೀಯ.
ನಿಜವಾಗಿಯೂ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ರೈತರಿಗೆ ವಿದ್ಯುತ್ ಉತ್ಪಾದಿಸಲು ಪ್ರೋತ್ಸಾಹ ಮಾಡಬೇಕು. ರಾಜ್ಯದಲ್ಲಿ ಭೂ ಸ್ವಾದೀನ ಪ್ರಕ್ರಿಯೆಗೆ ರಾಜ್ಯ ರೈತ ಸಂಘದ ಪ್ರಬಲ ವಿರೋಧವಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ಭೂ ಸ್ವಾದೀನ ಪ್ರಕ್ರಿಯೆಯನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಇಲ್ಲವಾದಲ್ಲಿ ರಾಜ್ಯದಾದ್ಯಂತ ತೀವ್ರತರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಸನ್ನ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಪ್ರದಾನ ಕಾರ್ಯದರ್ಶಿ ಸತೀಶ್, ತಾಲೂಕು ರೈತ ಸಂಘದ ಮುಖಂಡರಾದ ರವಿ ಶಿರವಾರ, ಮಹದೇವ್ ಉಪಸ್ಥಿತರಿದ್ದರು.



