ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಪರಿಶಿಷ್ಟರ ‘ನಿಧಿ’(ಅನುದಾನ)ಗೆ ಮತ್ತೆ ಕಾಂಗ್ರೆಸ್ ಕನ್ನ” ಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತರಾಟೆ ತೆಗೆದುಕೊಂಡಿದ್ದಾರೆ. ಶೋಷಿತ ಸಮುದಾಯಗಳನ್ನು ನಿರಂತರ ವಂಚಿಸಿ ಅಧಿಕಾರ ಕಬಳಿಸುತ್ತಾ ಬಂದಿರುವ ಕಾಂಗ್ರೆಸ್ ಸರ್ಕಾರ
ಈ ಬಾರಿಯೂ ತನ್ನ ಆಡಳಿತದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ನಿಧಿಯಲ್ಲಿ ಈ ವರ್ಷದ (2025–26) ಒದಗಿಸಿದ್ದ 11,896.84 ಕೋಟಿ ರೂಗಳನ್ನು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಂಚಿಕೆ ಮಾಡುವ ಮೂಲಕ ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಳ್ಳಲು ಮುಂದಾಗಿದೆ, ಇದು ಸಾಮಾಜಿಕ ನ್ಯಾಯ ವ್ಯವಸ್ಥೆಯ ಉದ್ದೇಶದ ಅಸ್ತಿತ್ವವನ್ನೇ ಅಲುಗಾಡಿಸಲು ಹೊರಟ ದಲಿತ ದ್ರೋಹಿ ಕ್ರಮವಾಗಿದೆ ಎಂದು ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಮಾತೆತ್ತಿದರೆ ತಾವು ಅಹಿಂದ ನಾಯಕರು, ದಲಿತರ ಉದ್ಧಾರಕರು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರ ಉದ್ಧಾರಕ್ಕೋಸ್ಕರ ಮೀಸಲಿರುವ ಈ ವರ್ಷದ ಹಣವನ್ನೂ ಸಹ ಗ್ಯಾರಂಟಿಗೆ ವರ್ಗಾವಣೆ ಮಾಡಿ ದಲಿತರಿಗೆ ಮತ್ತೆ ಅನ್ಯಾಯ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ನಡೆಯಾಗಿದೆ.
ಸದ್ಯ ಕಳೆದ ವರ್ಷದ ಅನುದಾನವನ್ನೆಲ್ಲ ಗ್ಯಾರಂಟಿಗಳಿಗೆ ಬಳಸಿ, ST ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿಹೊಡೆದಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಇದೀಗ ದಲಿತರ ಶ್ರೇಯೋಭಿವೃದ್ಧಿಗೆ ಇದ್ದ ಹಣವನ್ನೆಲ್ಲ
ಗ್ಯಾರಂಟಿಗಳಿಗೆ ಬಳಸಿ ರಾಜ್ಯದ ಪರಿಶಿಷ್ಟ ಸಮುದಾಯದ ಕಲ್ಯಾಣ ಕಾರ್ಯಗಳಿಗೆ ‘ಇತಿ ಶ್ರೀ’ ಹಾಡಲು ಹೊರಟಿರುವ ಕ್ರಮವನ್ನು ಕರ್ನಾಟಕ ಬಿಜೆಪಿ ಸಹಿಸುವ ಮಾತೇ ಇಲ್ಲ, ಈ ನಿರ್ಧಾರದಿಂದ ರಾಜ್ಯ ಸರ್ಕಾರ ಈ ಕೂಡಲೇ ಹಿಂದೆ ಸರಿಯದಿದ್ದರೆ ಪರಿಷ್ಠರ ಪರ ದನಿ ಎತ್ತಿ ಸದನದ ಒಳಗೆ ಹೊರಗೆ ಹೋರಾಟ ನಡೆಸಲಿದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.


