ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಮುಖ್ಯಮಂತ್ರಿ ಆಗುವ ಸಾಮಾನ್ಯ ಯೋಗ ಇಲ್ಲ, ಆದರೆ ಸಿಜೇರಿಯನ್ ಮೂಲಕ ಸಿಎಂ ಆಗಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಡಿಕೆಶಿಗೆ ಭವಿಷ್ಯವನ್ನು ನಾನು ಹಿಂದೆ ವಿಧಾನಸೌಧದಲ್ಲೇ ಹೇಳಿದ್ದೆ. ಡಿಕೆಶಿಗೆ ಅಧಿಕಾರ ಹಾಗೇ ಸಿಗೋದಿಲ್ಲ. ಜಾತಕದಲ್ಲಿ ಗುರು, ಶುಕ್ರ, ಶನಿ ಯೋಗ ಇಲ್ಲ. ನೀನು ಒದ್ದು ಅಧಿಕಾರ ಕಿತ್ತುಕೊಳ್ಳಬೇಕು. ನಾರ್ಮಲ್ ಡೆಲಿವರಿ ಆಗಲ್ಲ, ಸಿಜೇರಿಯನ್ ಮೂಲಕವೇ ಆಗಬೇಕು ಎಂದು ಹೇಳಿದರು.
ಸೆಪ್ಟೆಂಬರ್ ಕ್ರಾಂತಿ ವಿಚಾರವಾಗಿ ಸಚಿವ ರಾಜಣ್ಣ ಹೇಳುವ ಮೊದಲೇ ನಾನು ಹೇಳಿದ್ದೆ. ಅಕ್ಟೋಬರ್ನಲ್ಲಿ ಕ್ರಾಂತಿ ಆಗುತ್ತೆ ಅಂತ. ಈಗ ಕಾಂಗ್ರೆಸ್ ಅವರು ಪೀಠಿಕೆ ಶುರು ಮಾಡಿದ್ದಾರೆ. ಕಾಂಗ್ರೆಸ್‌ನೊಳಗೆ ಕ್ಷಿಪ್ರ ಕ್ರಾಂತಿ ಆಗೋದು ಶತಸಿದ್ಧ ಎಂದು ಅಶೋಕ್ ತಿಳಿಸಿದರು.
ಜಾತ್ಯಾತೀತತೆ, ಸಮಾಜವಾದ ಕುರಿತು ಕಾಂಗ್ರೆಸ್ ನಾಯಕರು ಆಕಾಶವೇ ಬಿದ್ದಂತೆ ಆಡ್ತಿದ್ದಾರೆ. ಸಂವಿಧಾನ ಪುಸ್ತಕವನ್ನು ಎಳೆದು ತಂದಿದ್ದಾರೆ. ಸಿದ್ದರಾಮಯ್ಯ ಮನುವಾದ ಬಗ್ಗೆ ಮಾತಾಡ್ತಾರೆ. ನಾನು ಆರ್ಎಸ್ಎಸ್ನವನು, ನನಗೆ ಮನು ಯಾರು ಅನ್ನೋದು ಗೊತ್ತಿಲ್ಲ.
ಇವರ ಬೇಳೆ ಬೇಯಿಸಿಕೊಳ್ಳಲು ಮನುವಾದ ಅಂತಿದ್ದಾರೆ. ಅಂಬೇಡ್ಕರ್ರ ಮೂಲ ಸಂವಿಧಾನದಲ್ಲಿ ಈ ಜಾತ್ಯಾತೀತ, ಸಮಾಜವಾದ ಪದ ಎಲ್ಲಿದೆ?. ಕಾಂಗ್ರೆಸ್‌ನವರು ಸುಖಾಸುಮ್ಮನೆ ಅಂಬೇಡ್ಕರ್ ಎಳೆದು ತರ್ತಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಅವರ ಕರಡು ಪ್ರತಿಯಲ್ಲಿ ಜಾತ್ಯಾತೀತ ಪದ ಯಾವ ಪೇಜಲ್ಲಿದೆ, ಹುಡುಕಿ ಕೊಡಲಿ. ಜಾತ್ಯತೀತ ಅಂತಾರೆ, ಜಾತ್ಯತೀತ ಎಲ್ಲಿದೆ ತೋರಿಸಿ?. ಸಿದ್ದರಾಮಯ್ಯ ಅವರೇ ಹೇಳ್ತಾರೆ ಜಾತಿ ಸಮೀಕ್ಷೆ ಆಗಬೇಕು ಅಂತ. ಇನ್ನೊಂದು ಕಡೆ ಜಾತ್ಯತೀತತೆ ಅಂತಾರೆ, ಜಾತಿ ಅಂತಲೂ ಹೇಳ್ತಾರೆ. ಸಂವಿಧಾನದಲ್ಲಿ ಜಾತ್ಯತೀತತೆ ಪದ ಯಾವಾಗ ಸೇರಿಸಿದ್ರಿ?. ಸಂವಿಧಾನದ ಬಗ್ಗೆ ಮಾತಾಡ್ತೀರಲ್ಲ, ಅದು ಅಂಬೇಡ್ಕರ್ ಅವರಿಗೆ ಮಾಡಿದ ದ್ರೋಹ ಎಂದು ಟೀಕಿಸಿದರು.


