ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಒಳ ಮೀಸಲಾತಿ ಜಾರಿಗಾಗಿ ಸ್ವಾಭಿಮಾನಿ ಮಾದಿಗ ಮಹಾಸಭಾದವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಒನಕೆ ಓಬವ್ವ ವೃತ್ತದಲ್ಲಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ಬಹಿರಂಗ ಸಭೆ ನಡೆಸಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಜಿಲ್ಲಾಧಿಕಾರಿ ಆವರಣಕ್ಕೆ ನುಗ್ಗಿ ಧಿಕ್ಕಾರಗಳನ್ನು ಕೂಗಿದರೆ ಕೆಲವರು ಕಚೇರಿಯ ಮೆಟ್ಟಿಲುಗಳನ್ನು ಹತ್ತಿಕೊಂಡು ಚೇಂಬರ್‌ವರೆಗೂ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದು ಪರಿಸ್ಥಿತಿ ನಿಯಂತ್ರಿಸಿದರು.
ಸೂರನಹಳ್ಳಿ ಶ್ರೀನಿವಾಸ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಎಪ್ಪತ್ತು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷ ಮಾದಿಗರ ಮತಗಳನ್ನು ಪಡೆದು ವಂಚಿಸಿಕೊಂಡು ಬರುತ್ತಿದೆ. ಸುಪ್ರೀಂಕೋರ್ಟ್ ತೀರ್ಪು ನೀಡಿ ಆ.೧ ಕ್ಕೆ ಒಂದು ವರ್ಷಗಳು ಮುಗಿದಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ಇನ್ನು ಕಾಲಹರಣ ಮಾಡುತ್ತಿದ್ದಾರೆ. ಆ.೧೫ ರೊಳಗೆ ಒಳ ಮೀಸಲಾತಿ ಕೊಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಿ ಜೈಲಿಗೆ ಹೋಗಲು ಸಿದ್ದರಿದ್ದೇವೆಂದು ಎಚ್ಚರಿಸಿದರು.
ಸದಾಶಿವ ಆಯೋಗದ ವರದಿಯನ್ನು ನಾಮಕಾವಸ್ಥೆ ಜಾರಿಗೊಳಿಸಿದ್ದು, ಈಗ ದತ್ತಾಂಶ ಸಂಗ್ರಹಕ್ಕಾಗಿ ರಾಜ್ಯ ಸರ್ಕಾರ ನಾಗಮೋಹನ್‌ದಾಸ್ ಆಯೋಗ ರಚಿಸಿ ವರದಿಗಾಗಿ ಕಾಯುತ್ತಿದೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಕ್ಯಾಬಿನೆಟ್‌ನಲ್ಲೇ ಚರ್ಚಿಸಿ ಒಳ ಮೀಸಲಾತಿ ಜಾರಿಗೊಳಿಸುತ್ತೇವೆಂದು ಈಗಿನ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದರು. ಇದುವರೆವಿಗೂ ಈಡೇರಿಲ್ಲ. ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಎಚ್ಚರಿಸಿದರು.
ದಲಿತ ಮುಖಂಡ ಜಿ.ಹೆಚ್.ಮೋಹನ್ ಕುಮಾರ್ ಮಾತನಾಡಿ ಒಳ ಮೀಸಲಾತಿಗಾಗಿ ಮೂರುವರೆ ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದೇವೆ. ಕಾನೂನು ತೊಡಕೊ ಇಲ್ಲ ರಾಜಕಾರಣಿಗಳ ಒಳ ಹೊಡೆತವೋ ಗೊತ್ತಾಗುತ್ತಿಲ್ಲ. ಇದರ ಬಗ್ಗೆ ಮಾದಿಗರು ಚಿಂತಿಸಬೇಕಿದೆ. ಹಿಂದಿನಿಂದಲೂ ಮಾದಿಗರ ಮತಗಳನ್ನು ಪಡೆಯುತ್ತಿರುವ ಕಾಂಗ್ರೆಸ್ ಮಾದಿಗರ ಪರವಾಗಿಲ್ಲ. ದಲಿತರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆಂದರು.
ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಒಳ ಮೀಸಲಾತಿ ಬಗ್ಗೆ ಧ್ವನಿ ಎತ್ತಲಿಲ್ಲ. ಈ ಸಾರಿ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಉಗ್ರ ರೂಪಕ್ಕೆ ಕೊಂಡೊಯ್ಯಲಾಗುವುದೆಂದು ಕಾಂಗ್ರೆಸ್ ಸರ್ಕಾರಕ್ಕೆ ಬೆದರಿಕೆ ಹಾಕಿದರು.
ಅಹಿಂದ ನಾಯಕರೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಎಂದೂ ಒಳ ಮೀಸಲಾತಿ ಜಾರಿಗೆ ಮನಸ್ಸು ಮಾಡಲಿಲ್ಲ. ಇಂದು ಕಾಂಗ್ರೆಸ್ ಗೆದ್ದು ಅವರು ಮುಖ್ಯಮಂತ್ರಿ ಆಗಿದ್ದಾರೆಂದರೆ ಅದಕ್ಕೆ ಮಾದಿಗ ಸಮಾಜದ ಮತಗಳೇ ಕಾರಣ. ಮಾದಿಗ ಸಮಾಜಕ್ಕೆ ಕಾಂಗ್ರೆಸ್ ತವರು ಮನೆ ಇದ್ದಂತೆ ನಮ್ಮ ಹೆಣ್ಣು ಮಕ್ಕಳು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿ ಹೆಬ್ಬೆಟ್ಟು ಸವೆದಿವೆ ಎಂದು ಮೋಹನ್ ನೋವು ತೋಡಿಕೊಂಡರು.
ವಿಶ್ರಾಂತ ಕೆಎಎಸ್ ಅಧಿಕಾರಿ ಪುರುಷೋತ್ತಮ್ ಮಾತನಾಡಿ, ದತ್ತಾಂಶದ ನೆಪವೊಡ್ಡಿ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಕಾಂಗ್ರೆಸ್ ಸಂಪೂರ್ಣ ಸೋತಿದೆ. ಇದು ಮಾದಿಗ ಸಮಾಜಕ್ಕೆ ಮಾಡಿರುವ ಪರಮ ಅನ್ಯಾಯ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ದಲಿತರನ್ನು ಎಂದೂ ಮತದಾರರು ಎಂದು ಪರಿಗಣಿಸಲಿಲ್ಲ, ಜೊತೆಗೆ ದಲಿತರು ಎಂದರೆ ಮತಯಂತ್ರಗಳು ಎಂದು ಭಾವಿಸಿ ಶೋಷಣೆ ಮಾಡಿದ್ದಾರೆ. ಡಾ.ಅಂಬೇಡ್ಕರ್ ಅವರನ್ನ ಕಾಂಗ್ರೆಸ್ ಸೋಲಿಸುವ ಮೂಲಕ ದಲಿತ ಸಮುದಾಯಕ್ಕೆ ಘೋರ ಅನ್ಯಾಯ ಎಸಗಿದೆ. ನಾವು ಕಾಂಗ್ರೆಸ್ ನಂಬಿ ಕೂತರೆ ಖಂಡಿತ ನ್ಯಾಯ ಸಿಗಲ್ಲ. ಬದಲಿಗೆ ಹೋರಾಟ ಚುರುಕುಗೊಳಿಸಬೇಕು ಎಂದು ಅವರು ಕರೆ ನೀಡಿದರು.
ದಲಿತ ಮುಖಂಡ ಮಹಾಂತೇಶ್ ಮಾತನಾಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದಾ ನಾಯಕ ಅಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲು ಮಾದಿಗರು ಕಾರಣ ಎನ್ನುವುದನ್ನು ನಾಯಕರುಗಳು ಮರೆತಿದ್ದಾರೆ. ಒಳ ಮೀಸಲಾತಿ ಜಾರಿಯಾಗದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಕರಿಬಸಪ್ಪ ಮಾತನಾಡಿ ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಒಂದು ವರ್ಷವಾಗಿದೆ. ನೆರೆಯ ಆಂಧ್ರ, ಹರಿಯಾಣ, ತಮಿಳುನಾಡು, ಪಂಜಾಬ್‌ನಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ನಮ್ಮ ರಾಜ್ಯದಲ್ಲಿ ಇನ್ನು ಅನುಷ್ಟಾನಕ್ಕೆ ತರಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇದರ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆಂದರು.
ದಲಿತ ಮುಖಂಡರಾದ ಮುರಾರ್ಜಿ, ಭೀಮನಕೆರೆ ಶಿವಮೂರ್ತಿ, ಹನುಮಂತರಾಯಪ್ಪ, ಶಿವಣ್ಣ, ಬಸಮ್ಮ, ಕೃಷ್ಣಮೂರ್ತಿ ಸೇರಿದಂತೆ ನೂರಾರು ಮಾದಿಗರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


