ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದಾವಣಗೆರೆ & ಚಿತ್ರದುರ್ಗ ಹಿಂದೂಸ್ತಾನ್ ಪಾಕಿಸ್ತಾನ್ ಸಮಸ್ಯೆ ಅಲ್ಲ. ದಾಣಗೆರೆ ಪ್ರತ್ಯೇಕ ಜಿಲ್ಲೆಯಾಗಿದೆ. ಮೊದಲು ಚಿತ್ರದುರ್ಗ ಜಿಲ್ಲೆಯೊಳಗೆ ಇತ್ತು ಎನ್ನುವುದು ಬಹಳ ಮುಖ್ಯ ಎಂದು ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಭದ್ರಾ ನೀರು ಹಂಚಿಕೆ ಮಾಡಿದ್ದು ಅದು ವಿವಾದವಾಗಿದೆ. ಈ ವಿಚಾರಕ್ಕೆ ದಾವಣಗೆರೆಯಲ್ಲಿ ಕೆಲ ಮುಖಂಡರು ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು ಕೊಡಲ್ಲ ಎಂದು ಹೇಳುತ್ತಿದ್ದಾರೆ ಎಂದು ಕಾರಜೋಳ ಹೇಳಿದರು.
ತಿನ್ನುವ ಅನ್ನಕ್ಕೆ ,ಕುಡಿಯುವ ನೀರಿಗೆ ರಾಜಕೀಯ ಮಾಡುವುದು ಅಕ್ಷ್ಯಮ್ಯ ಅಪರಾಧ. ಸುಪ್ರೀಂ ಕೋರ್ಟ್ ನಲ್ಲಿ ಅನೇಕ ಆದೇಶಗಳಿವೆ, ದೇಶದ ಸಂವಿಧಾನ ಅನ್ನಕ್ಕೆ ನೀರಿಗೆ ಬೇಲಿ ಹಾಕಿಲ್ಲ. ಪೂರ್ಣಗೊಂಡಿರುವ ಈ ಯೋಜನೆಗೆ ವಿರೋಧ ಬೇಡ ಎಂದು ಸಂಸದರು ಕಿವಿ ಮಾತು ಹೇಳಿದರು.
ಹೊಸದುರ್ಗ ಮತ್ತು ತರೀಕೆರೆ ತಾಲ್ಲೂಕಿಗೆ 800 ಕೋಟಿ ಯೋಜನೆ ನಮ್ಮ ಸರ್ಕಾರ ಮಂಜೂರು ಮಾಡಿದೆ. 800 ಕೋಟಿ ಕಾಮಗಾರಿ ಪೂರ್ಣವಾಗಿದೆ. ಅಡ್ಡಿ ಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರು ತಾಕೀತು ಮಾಡಿದರು.
ಕುಡಿಯುವ ನೀರಿಗೆ ಯಾವುದೇ ಸೀಮೆಯ ನಿರ್ಬಂಧ ಇಲ್ಲ. 50 ವರ್ಷದಿಂದ ಮಹಾರಾಷ್ಟ್ರದ ಜಥ್ ತಾಲ್ಲೂಕಿಗೆ ಕೃಷ್ಣನದಿಯಿಂದ ಕುಡಿಯುವ ನೀರು ಕೊಟ್ಟಿದ್ದೇವೆ ಕೃಷ್ಣ & ಭೀಮ ನದಿ ಒಣಗಿದ್ರೆ ಮಹಾರಾಷ್ಟ್ರ ಸರ್ಕಾರ ನಮಗೆ ನೀರು ಬಿಡುತ್ತದೆ. ದಾವಣಗೆರೆ ಮತ್ತು ಚಿತ್ರದುರ್ಗದ್ದು ಹಿಂದೂಸ್ತಾನ್ ಪಾಕಿಸ್ತಾನ್ ಸಮಸ್ಯೆ ಅಲ್ಲ ಟ್ರೈಯಲ್ ರನ್ ಮುಗಿದ ಬಳಿಕ ಕೂಡಲೇ ನೀರು ಬಿಡುತ್ತಾರೆ. ಸಿಎಂ ಸಿದ್ದರಾಮಯ್ಯ ಅವರೇ ಕೂಡಲೇ ಬಂದು ಈ ಯೋಜನೆಗೆ ಚಾಲನೆ ನೀಡಬೇಕು ಎಂದು ಸಂಸದರು ಆಗ್ರಹ ಮಾಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು 800 ಕೋಟಿ ರೂ.ಬಿಡುಗಡೆ ಮಾಡಿತ್ತು. ಬಿಜೆಪಿ ಅವರೇ ವಿರೋಧ ಮಾಡುತ್ತಿರುವುದು ವಿಪರ್ಯಾಸ, ಎಸ್ಸಿ, ಎಸ್ಟಿ, ಒಬಿಸಿ ವರ್ಗಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಕುಡಿಯುವ ನೀರು ಮತ್ತು ಅನ್ನಕ್ಕೆ ಯಾರೂ ಕನ್ನ ಹಾಕಬಾರದು, ದಾವಣಗೆರೆ ಜಿಲ್ಲೆಯ ಬಿಜೆಪಿ ಮುಖಂಡರು ಮತ್ತು ರೈತಾಪಿ ವರ್ಗ ಈ ಯೋಜನೆಗೆ ಸಹಕಾರ ನೀಡಬೇಕು ಎಂದು ನವೀನ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಕೆ ಬಸವರಾಜನ್, ಜಿಲ್ಲಾಧ್ಯಕ್ಷ ಕೆ.ಟಿ ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಮುರುಳಿ, ಜಿಲ್ಲಾ ಖಚಾಂಚಿ ಮಾಧುರಿ ಗಿರೀಶ್, ಜಿಪಂ ಮಾಜಿ ಸದಸ್ಯ ಗುರುಸ್ವಾಮಿ, ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ, ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ್ ಬೇದ್ರೆ, ಪ್ರಧಾನ ಕಾರ್ಯದರ್ಶಿ ಸಂಪತ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಸುದ್ದಿಗೋಷ್ಟಿಯಲ್ಲಿ ಇದ್ದರು.


