ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರ್ತರಪೇಟೆ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಸ್ಥಳಕ್ಕೆ ಭಾನುವಾರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅಧಿಕಾರಿಗಳೊಂದಿಗೆ ತೆರಳಿ, ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾನೂನು ಪಾಲನೆ ಮಾಡದೇ ಚಿಕ್ಕ ಜಾಗದಲ್ಲಿ ಬಿಲ್ಡಿಂಗ್ ಕಟ್ಟಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸದಕ್ಕೆ ಮನೆ ಮಾಲೀಕರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಹೇಳಿದರು.
ಈ ಘಟನೆಯಲ್ಲಿ ಬಡವರು ಜೀವ ಕಳೆದುಕೊಂಡಿದ್ದಾರೆ. ಕಟ್ಟಡ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇದ್ದರೇ ಬಿಲ್ಡಿಂಗ್‌ಗಳನ್ನ ಹೊಡೆದು ಹಾಕುತ್ತೇವೆ. ಬಾಂಬೆನಲ್ಲೂ ಕೂಡ ಇದೆ ಪರಿಸ್ಥಿತಿ ಇದೆ. ಅಗ್ನಿಶಾಮಕ ವಾಹನಗಳು ಬರೋದಕ್ಕೆ ಆಗೋದಿಲ್ಲ. ಹಾಗಾಗಿ ಬಿಲ್ಡಿಂಗ್‌ಗಳನ್ನ ಸರಿ ಮಾಡಿಕೊಳ್ಳಬೇಕೆಂದು ಮನೆ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಹಾಗೂ ದುರ್ಬಲಗೊಂಡಿರುವ ಕಟ್ಟಡಗಳನ್ನು ಮೊದಲು ಭದ್ರಗೊಳಿಸುವ ಕೆಲಸವಾಗಬೇಕು. ಇಂತಹ ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.
ಎರಡು, ಮೂರು ಮಹಡಿಗಳನ್ನು ಕಟ್ಟುವ ಕಡೆಗಳಲ್ಲಿ ಎಂಟತ್ತು ಮಹಡಿಗಳನ್ನು ನಿರ್ಮಾಣ ಮಾಡಲಾಗಿದೆ. ಹಲವಾರು ಕಟ್ಟಡಗಳು ವಾಸಕ್ಕೆ ಯೋಗ್ಯವಿಲ್ಲದಂತಾಗಿವೆ. ಇಂತಹ ಕಟ್ಟಡಗಳನ್ನು ಹೊಡೆದು ಹಾಕುವುದು ನಂತರದ ವಿಚಾರ. ಇದರ ಬಗ್ಗೆ ಮೊದಲು ಸಮೀಕ್ಷೆ ನಡೆಸಲಾಗುವುದು.ಇದು ಒಂದೇ ದಿನಕ್ಕೆ ಮುಗಿಯುವ ಕೆಲಸವಲ್ಲ. ವರ್ಷಗಟ್ಟಲೆ ಹಿಡಿಯುತ್ತದೆ. ದೆಹಲಿ, ಮುಂಬೈನಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಒಳಗೆ ಬಂದು ನೋಡಿದಾಗ ನನಗೆ ಗಾಬರಿಯಾಯಿತು. ಇಂತಹ ಇಕ್ಕಟ್ಟಿನ ಜಾಗದಲ್ಲಿ ಬೆಂಕಿ ಅವಘಡ ನಡೆದರೆ ಜನ ಓಡಿ ಹೋಗುತ್ತಾರೆ, ಆಗ ಕಾಲ್ತುಳಿತ ಉಂಟಾಗಿಯೇ ಜನ ಸಾಯುತ್ತಾರೆ ಎಂದು ಡಿಸಿಎಂ ತಿಳಿಸಿದರು.
ತಲಾ 5 ಲಕ್ಷ ಪರಿಹಾರ:
ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವಘಡ ನಡೆದ ಕಟ್ಟಡದ ಮಾಲೀಕರನ್ನೂ ಬಂಧಿಸಲಾಗಿದೆ. ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅವಘಡದಲ್ಲಿ ಮೃತಪಟ್ಟ ಪ್ರತಿ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.

ಕೂಡಲೇ ದುರ್ಬಲ ಕಟ್ಟಡಗಳನ್ನು ಕೆಡವಲು ಹೋಗುವುದಿಲ್ಲ. ಮಾಲೀಕರು ಕೂಡಲೇ ದುರಸ್ಥಿಗೆ ಒಳಪಡಿಸಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಏಕೆಂದರೆ ದುರ್ಬಲಗೊಂಡಿರುವ ಕಟ್ಟಡಗಳು ಕುಸಿತವಾಗಿ ದೊಡ್ಡ ಸಮಸ್ಯೆ ಎದುರಾಗುವುದು ಬೇಡ. ಭವಿಷ್ಯದಲ್ಲಿ ಈ ರೀತಿಯಾಗಿ ಕಟ್ಟಡಗಳ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದರು.
ಶೇ.70ರಷ್ಟು ಅಕ್ರಮ ಕಟ್ಟಡ:
ಬೆಂಗಳೂರು ನಗರದಲ್ಲಿ ಶೇ.70ರಷ್ಟು ಕಟ್ಟಡ ನಿರ್ಮಾಣ ಅಕ್ರಮವಾಗಿದೆ. ನೂತನ ಬಿಡಿಎ ಲೇಔಟ್‌ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಹಡಿ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ಈಗ ಸುಪ್ರೀಂ ಕೋರ್ಟ್ ತೀರ್ಪು ವಾಸ ಯೋಗ್ಯ ಪ್ರಮಾಣಪತ್ರವಿಲ್ಲದೇ ನೀರು, ವಿದ್ಯುತ್ ಸಂಪರ್ಕ ನೀಡಬಾರದು ಎಂದು ಮಾರ್ಗದರ್ಶನ ನೀಡಿದೆ.
ಈ ಕಾರಣಕ್ಕೆ 4 ಲಕ್ಷ ಸಂಪರ್ಕಗಳನ್ನು ನಿಲ್ಲಿಸಲಾಗಿದೆ. 30*40 ಅಳತೆಯ ಎರಡು ಮಹಡಿಯ ಕಟ್ಟಡಗಳಿಗೆ ವಿನಾಯಿತಿ ನೀಡಬೇಕು ಎನ್ನುವ ವಿಚಾರವನ್ನು ಕ್ಯಾಬಿನೆಟ್ ಮುಂದೆ ತರಲಾಗುವುದು. ಸಂಪುಟ ಸಹೋದ್ಯೋಗಿಗಳು ಏನು ಹೇಳುತ್ತಾರೋ ನೋಡೋಣ ಎಂದು ಶಿವಕುಮಾರ್ ತಿಳಿಸಿದರು.
ಜನರ ಬಡತನದ ಬದುಕು. ಅಗ್ನಿಶಾಮಕ ನಿಯಮದ ಪ್ರಕಾರ ಹೋದರೆ ಎಲ್ಲಾ ಕಟ್ಟಡಗಳನ್ನು ಒಡೆದು ಹಾಕಬೇಕಾಗುತ್ತದೆ. ಅನೇಕ ಕಟ್ಟಡಗಳ ಮೇಲ್ಬಾಗಕ್ಕೆ ಹತ್ತಲು ಸಹ ಆಗುತ್ತಿಲ್ಲ. ಶಾರ್ಟ್ ಸರ್ಕೀಟ್ ಆದ ಕಾರಣಕ್ಕೆ ಬೆಂಕಿ ಹೊತ್ತುಕೊಂಡು ಸಾವನ್ನಪ್ಪಿದ್ದಾರೆ. ಮೃತರೆಲ್ಲಾ ರಾಜಸ್ಥಾನ ಮೂಲದವರು.ಎಲ್ಲಿಯವರಾದರೇನು ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದಿದ್ದರು ಎಂದರು.
ಎರಡು ದಿನಗಳ ಹಿಂದೆ ಸಿಲಿಂಡರ್ ಸ್ಪೋಟಗೊಂಡು ಮನೆ ಹಾನಿಯಾಗಿದೆ, ಜನರ ಗಾಯಗೊಂಡಿದ್ದಾರೆ. ಬೆಂಕಿಗೆ ಸಿಲುಕಿ ಐದು ಮಂದಿ ಸತ್ತಿದ್ದಾರೆ. ಬಾಡಿಗೆಗಾಗಿ ಹೀಗೆ ಕಟ್ಟಡಗಳನ್ನು ನಿರ್ಮಾಣ ಮಾಡಿರುವುದೇ ಇದೆಲ್ಲದಕ್ಕೂ ಕಾರಣ.ಇದು ಸರಿಯಲ್ಲ ಎಂದರು.
ಧರ್ಮಸ್ಥಳ ಬಿಜೆಪಿ ಆಸ್ತಿಯಲ್ಲ:
ಬಿಜೆಪಿಯವರು ಧರ್ಮಸ್ಥಳ ಯಾತ್ರೆ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಜೆಪಿಯವರು ಮಾಡುತ್ತಿರುವುದು ರಾಜಕೀಯದ ಯಾತ್ರೆ. ಧರ್ಮದ ಯಾತ್ರೆಯಲ್ಲ.ಧರ್ಮಸ್ಥಳ ಬಿಜೆಪಿಯ ಮನೆ ಆಸ್ತಿಯಲ್ಲ, ಸಾರ್ವಜನಿಕರ ಸ್ವತ್ತು ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.


