ಚಂದ್ರವಳ್ಳಿ ನ್ಯೂಸ್, ಲಕ್ನೋ:
ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಬಿರುಗಾಳಿ ಮತ್ತು ಅಕಾಲಿಕ ಮಳೆಗೆ ಬಲಿಯಾದವರ ಸಂಖ್ಯೆ 100ರ ಗಡಿ ದಾಟಿದೆ. ಗುರುವಾರ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ರಾಜ್ಯದಾದ್ಯಂತ ಸುಮಾರು 114ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ತಿಪಾಸ್ತಿಗೆ ಭಾರೀ ಹಾನಿಯಾಗಿದೆ.
ಜಿಲ್ಲಾವಾರು ಸಾವಿನ ವಿವರ:
ಪ್ರಕೃತಿ ವಿಕೋಪಕ್ಕೆ ಅತಿ ಹೆಚ್ಚು ಬಲಿಯಾಗಿರುವುದು ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಲಭ್ಯವಿರುವ ಅಂಕಿಅಂಶಗಳ ವಿವರ ಹೀಗಿದೆ.
ಪ್ರಯಾಗ್‌ರಾಜ್: 21 ಸಾವು, ಭದೋಹಿ: 16 ಸಾವು, ಮಿರ್ಜಾಪುರ: 11 ಸಾವು, ಫತೇಪುರ್: 09 ಸಾವು, ಉನ್ನಾವ್: 06 ಸಾವು, ಬದೌನ್: 05 ಸಾವು, ಪ್ರತಾಪ್‌ಗಢ (4), ಚಂದೌಲಿ (2), ಕುಶಿನಗರ (2) ಮತ್ತು ಸೋನ್‌ಭದ್ರ (1).
ಗೋಡೆ ಕುಸಿದು ಬಾಲಕಿಯರ ದುರ್ಮರಣ:
ಬದೌನ್ ಜಿಲ್ಲೆಯ ಸಿದ್ಧಾಪುರ ಕೈಥೋಲಿ ಗ್ರಾಮದಲ್ಲಿ ಮಳೆಗೆ ಆಶ್ರಯ ಪಡೆಯಲು ಗುಡಿಸಲೊಂದರಲ್ಲಿ ನಿಂತಿದ್ದ ಇಬ್ಬರು ಬಾಲಕಿಯರು (ಮೌಸಾಮಿ ಮತ್ತು ರಜನಿ) ಮಣ್ಣಿನ ಗೋಡೆ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಫೈಜ್‌ಗಂಜ್ ಬೆಹ್ತಾ ಭಾಗದಲ್ಲಿ ಕೊಳವೆ ಬಾವಿಯ ಕೋಣೆಯ ಮೇಲೆ ಮರ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಸಿಎಂ ಯೋಗಿ ಆದಿತ್ಯನಾಥ್ ಸೂಚನೆ:
ದುರಂತದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳ ಒಳಗೆ ಪರಿಹಾರ ಧನ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಚುರುಕುಗೊಳಿಸಲು ಸೂಚಿಸಿದ್ದಾರೆ.
ಅಸ್ತವ್ಯಸ್ತಗೊಂಡ ಸಂವಹನ ಮತ್ತು ವಿದ್ಯುತ್:
ಭದೋಹಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಂಡಿರುವುದು ರಕ್ಷಣಾ ಕಾರ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸದ್ಯ ಉಪವಿಭಾಗೀಯ ನ್ಯಾಯಾಧೀಶರು ಮತ್ತು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಚಂಡಮಾರುತದ ತೀವ್ರತೆಗೆ ಹಲವು ಕಡೆ ಮನೆಗಳ ಛಾವಣಿ ಹಾರಿಹೋಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯು ಮುಂದಿನ ಕೆಲವು ಗಂಟೆಗಳ ಕಾಲ ಎಚ್ಚರಿಕೆಯಿಂದ ಇರಲು ಸೂಚಿಸಿದೆ.


