Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸವಾಲಿನ ವಿರುದ್ದವೇ ಕೆಲಸ ಮಾಡುವ ಛಾತಿ ಬೆಳೆಸಿಕೊಳ್ಳಿ: ಡಾ.ವಿಜಯಾ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಧಿಸುವ ಛಲ, ವೃತ್ತಿ ಬದ್ಧತೆ ಇದ್ದರೆ ಪತ್ರಕರ್ತರಿಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಸವಾಲಿನ ವಿರುದ್ದವೇ ಕೆಲಸ ಮಾಡುವ ವೃತ್ತಿ ಬದ್ಧತೆಯ ಛಾತಿ ರೂಢಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತೆ, ರಂಗಕರ್ಮಿ, ಸಾಹಿತಿ ಡಾ.ವಿಜಯಾ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಹಿಳಾ ದಿನಾಚರಣೆ ಪ್ರಯುಕ್ತ ಮತ್ತು ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮನದುಂಬಿ ನಮನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ಪತ್ರಿಕಾ ವೃತ್ತಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಹೇಳಿದರು.

ಪತ್ರಿಕೋದ್ಯಮದ ಜೊತೆಗೆ ಅನ್ಯಾಯಗಳ ವಿರುದ್ಧ ತಾನು ಸಾಕಷ್ಟು ಹೋರಾಟ ಮಾಡಿಕೊಂಡ ಕಾರಣಕ್ಕೆ ಸಮಾಜದ ವ್ಯವಸ್ಥೆಯ ಬಗ್ಗೆ ಪತ್ರಕರ್ತೆಯಾಗಿ ತನಗೆ ಸಂಪೂರ್ಣ ಅರಿವಿದೆ. ಕೆಲವು ಪತ್ರಿಕಾ ಸಂಸ್ಥೆಗಳು ಇತ್ತೀಚೆಗೆ ಕಾರ್ಪೋರೇಟ್ ವ್ಯವಸ್ಥೆಯಿಂದ ಕೂಡಿವೆ, ಅವು ಆ ಯೋಚನೆಯಿಂದ ಹೊರಬಂದು ಪತ್ರಕರ್ತರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪತ್ರಕರ್ತರನ್ನು ರೂಪಿಸಿ,  ನಡೆಸಿಕೊಳ್ಳಬೇಕು ಎಂದರು.

ಐಟಿಐ ಸಂಸ್ಥೆಯಿಂದ ಸುದ್ದಿಮನೆಗೆ ಪಯಣ:
ದಾವಣಗೆರೆ ಮೂಲದ ಡಾ.ವಿಜಯಾ ಅವರು ಬೆಂಗಳೂರಿನ ಐಟಿಐ ಸಂಸ್ಥೆಯಲ್ಲಿ ವೃತ್ತಿರಂಗಕ್ಕೆ ಪ್ರವೇಶಿಸಿದವರು. ಅಲ್ಲಿ ಆರಂಭವಾದ ಅವರ ಬರವಣಿಗೆಯ ಹವ್ಯಾಸವು ನಾಡಿನ ಹಿರಿಯ ಮತ್ತು ಪ್ರಶಸ್ತಿ ವಿಜೇತ ಪತ್ರಕರ್ತೆಯ ಸಾಲಿನಲ್ಲಿ ತಂದು ನಿಲ್ಲಿಸಿದೆ. ಪ್ರಜಾಮತ ಪತ್ರಿಕೆಯಲ್ಲಿ ಆರಂಭವಾದ ಅವರ ಬರಹಗಳು ಅದೇ ಸಂಸ್ಥೆಯ ಮಯೂರ, ಉದಯವಾಣಿ ಬಳಗದ ತುಷಾರ, ರೂಪತಾರ, ಮಲ್ಲಿಗೆ ಮುಂತಾದ ಪತ್ರಿಕೆಗಳ ಅಂಕಣಕಾರರನ್ನಾಗಿಸಿತು ಹಾಗೂ ಆ ಪತ್ರಿಕೆಗಳ ಸಂಪಾದಕ ಸ್ಥಾನವನ್ನೂ ದೊರಕಿಸಿಕೊಟ್ಟಿತು. ಮಲ್ಲಿಗೆ ಪತ್ರಿಕೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತು. ಆರಂಭದಲ್ಲಿ ಗೋಕಾಕ್ ಚಳುವಳಿಯಲ್ಲಿ ಕಾರಾಗೃಹ ವಾಸವನ್ನೂ ಅನುಭವಿಸಿರುವ ಡಾ. ವಿಜಯ ಅವರ ಆರಂಭಿಕ ಚಟುವಟಿಕೆಗಳು ಹೋರಾಟ ಮನೋಭಾವಕ್ಕೆ ಮಾತ್ರ ಸೀಮಿತವಾಗಿದ್ದರೂ, ಕ್ರಮೇಣ ರಂಗಭೂಮಿಯತ್ತ ಅವರು ಮನಸ್ಸನ್ನು ಹೊರಳಿಸಿ ಬೀದಿ ನಾಟಕ ಎಂಬ ಕಲ್ಪನೆಯನ್ನು ಹುಟ್ಟು ಹಾಕಿ, ಬಳಿಕ ಸಾವಿರಾರು ಸಿನಿಮಾ ಲೇಖನಗಳನ್ನು ಬರೆದು ಕನ್ನಡದ ಖ್ಯಾತ ಸಿನಿಮಾ ಪತ್ರಕರ್ತೆ ಎಂದೆನಿಸಿಕೊಂಡವರು. ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅವರು, ’ವಿಜಯಮ್ಮಎಂದೇ ಪತ್ರಕರ್ತರ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ತಮಗೆ ದೊರೆತ ಪ್ರಶಸ್ತಿಗಳ ಜೊತೆ ಬಂದ ನಗದು ಬಹುಮಾನಗಳನ್ನೆಲ್ಲಾ ಮರಳಿ ನೀಡಿದವರು, ಇಲ್ಲವೇ ಸಾಮಾಜಿಕ ಸೇವಾ ಕಾರ್ಯಕ್ಕೆ ವಿನಿಯೋಗಿಸಿಕೊಂಡವರು. ಯಾರ ಹಂಗಿನಲ್ಲೂ ಇರದೆ, ಸ್ವಾಭಿಮಾನಿ ಗುಣವನ್ನು ಮೈಗೂಡಿಸಿಕೊಂಡ ಸ್ವಭಾವ ಅವರದ್ದಾಗಿದೆ.

ಅನನ್ಯವಾದ ಸೇವೆಯ ಅಮ್ಮ:
ಇದೇ ಸಂದರ್ಭದಲ್ಲಿ ಡಾ. ವಿಜಯಾ ಅವರ ಸಾಧನೆಯ ಬಗ್ಗೆ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ತಮ್ಮ ಸುದೀರ್ಘ ಅವಧಿಯ ವೃತ್ತಿ ಜೀವನದ ಅವರ ಕೊಡುಗೆ ಪತ್ರಿಕಾ ರಂಗಕ್ಕೆ ನಿಜಕ್ಕೂ ಬಹುದೊಡ್ಡ ಕೊಡುಗೆ. 90ರ ದಶಕದ ಬಾಗೂರು ಚಳುವಳಿಗಾರರಿಗೂ ಅವರು ಸಹಕಾರ ನೀಡಿದ ದೂರದೃಷ್ಟಿಯ ಚಿಂತನೆಯ ಸಹಕಾರವೂ ಸ್ಮರಣೀಯ. ಅವರ ಆದರ್ಶ ಇಂದಿನ ಯುವ ಪತ್ರಕರ್ತರಿಗೆ ನಿಜಕ್ಕೂ ಮಾದರಿ ಎಂದರು. ಪತ್ರಕರ್ತೆಯಾಗಿ, ಸಂಘಟಕಿಯಾಗಿ, ಸಾಹಿತಿಯಾಗಿ, ರಂಗಕರ್ಮಿಯಾಗಿ ವಿಜಯಮ್ಮ ಅವರ ಸೇವೆ ಅನನ್ಯ ಎಂದು ಶ್ಲಾಸಿದರು.

ಅಮ್ಮನ ಭಾವ ತುಂಬಿದ ವಿಜಯಮ್ಮ:
ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ಬದ್ಧತೆ ಏನೆಂಬುದನ್ನು ತೋರಿಸಿದ ದಿಟ್ಟ ಪತ್ರಕರ್ತೆ ಡಾ. ವಿಜಯಾ ಅವರು ಎಂದು ಉದಾಹರಣೆ ಸಹಿತ ಶ್ಲಾಘಿಸಿದರು. ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಪ್ರಭಾವಿಸಿ, ಅವರಿಗೆ ನೆರವಾಗಿರುವ ಕಾರಣಕ್ಕೆ ಅವರಿಗೆ ಅಮ್ಮ ಪಟ್ಟ ದೊರೆತಿದೆ. ಸಮಾಜಕ್ಕೆ ಮೊದಲು ಬೀದಿ ನಾಟಕಗಳ ಪರಿಕಲ್ಪನೆಯನ್ನು ಬಿತ್ತಿದ್ದನ್ನು ಮರೆಯುವಂತಿಲ್ಲ. ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುವ ಅವರ ಮಾತೃ ಹೃದಯ ಇಡೀ ಸಮಾಜಕ್ಕೆ ಮಾದರಿ ಎಂದರು.

ಹೊಸಭಾಷ್ಯ ಬರೆದರು:
ಚಲನಚಿತ್ರ ಪತ್ರಿಕೋದ್ಯಮದಲ್ಲಿ ಹೊಸ ಭಾಷ್ಯ ಬರೆದ ಹೆಗ್ಗಳಿಕೆಗೆ ಡಾ.ವಿಜಯಾ ಅವರು ಪಾತ್ರರಾಗಿದ್ದು, ಅವರ ಬರವಣಿಗೆಯ ಮಾರ್ಗದರ್ಶನ ಇಂದಿನ ಪತ್ರಕರ್ತರಿಗೂ ದೊರೆತಿದೆ ಎಂದು ಹಿರಿಯ ಪತ್ರಕರ್ತ ಬಾ.ನಾ. ಸುಬ್ರಮಣ್ಯ ಇದೇ ಸಂದರ್ಭದಲ್ಲಿ ಹೇಳಿದರು.

ಪತ್ರಕರ್ತೆಯರಿಗೆ ಆಸರೆ:
ಪತ್ರಕರ್ತೆಯರ ಸಂಘದ ಮಾಲತಿ ಭಟ್ ಮಾತನಾಡಿ, ಉನ್ನತ ವ್ಯಕ್ತಿತ್ವದ ಡಾ. ವಿಜಯ ಅವರು ಪತ್ರಕರ್ತೆಯರ ಸಮಸ್ಯೆಗಳಿಗೂ ಸ್ಪಂದಿಸಿದರು ಮತ್ತು ಪರ್ತ್ರಕರ್ತೆಯರ ಸಂಘದ ಹುಟ್ಟಿಗೂ ಕಾರಣಕರ್ತರಾದವರು ಎಂದರು.
ಡಾ. ವಿಜಯ ಅವರು ಪತ್ರಿಕಾ ವೃತ್ತಿಯ ಜೊತೆಗೆ ಹಲವಾರು ಮೌಲ್ಯಯುತ ಗ್ರಂಥಗಳ ಸಂಪಾದಕಿಯಾಗಿ ಪುಸ್ತಕ ಪ್ರಕಟಣೆಗಳ ಮೆರಗನ್ನು ಹೆಚ್ಚಿಸಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್ ಹೇಳಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್. ದೇವರಾಜ್, ನಗರ ಘಟಕದ ಸಮಿತಿ ಸದಸ್ಯ ಡಿ.ಎಲ್.ಹರೀಶ್, ಶಿವರಾಜ್, ಸದಸ್ಯರಾದ ಸುಂದರೇಶ್, ಶರಣ ಬಸಪ್ಪ, ಪೂರ್ಣಿಮಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಸ್ವಾಗತಿಸಿ, ಕೊನೆಯಲ್ಲಿ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು.
ಕಾರ್ಯಕ್ರಮದ ವೇಳೆ ಡಾ. ವಿಜಯಾ ಅವರ ಸಹೋದರಿ ಪುಷ್ಪಾ, ಪುತ್ರ ಗುರು, ಸೊಸೆ ಭಾರತಿ ಸೇರಿದಂತೆ ಅವರ ಹಲವಾರು ಹಿತೈಷಿಗಳು ಪಾಲ್ಗೊಂಡಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ