ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯೆಟ್) ಹಾಗೂ ಕರ್ನಾಟಕ ಮಾದರಿ ಶಾಲೆಗಳ ಮಾರ್ಗೋಪಾಯ ಕಾರ್ಯಕ್ರಮದ (KMSPP) ಭಾಗವಾಗಿರುವ ಶಿಕ್ಷಣ ಫೌಂಡೇಶನ್‌ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಐಯುಡಿಪಿ ಲೇಔಟ್‌ನಲ್ಲಿ ಫೌಂಡೇಶನಲ್ ಲಿಟರಸಿ ಅಂಡ್ ನ್ಯೂಮರಸಿ (FLN) ಅಭ್ಯಾಸ ಪುಸ್ತಕಗಳ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಯೋಜನೆಗಳ ಸಮನ್ವಯಾಧಿಕಾರಿ (DYPC) ಹನುಮಂತಪ್ಪ, "ಶಿಕ್ಷಣ ಇಲಾಖೆಯು FLN ಕಾರ್ಯಕ್ರಮದ ಕುರಿತು ಆಳವಾಗಿ ಕೆಲಸ ಮಾಡುತ್ತಿದೆ. ಈ ಅಭ್ಯಾಸ ಪುಸ್ತಕಗಳು ಇಲಾಖೆಯ ಪ್ರಯತ್ನಗಳಿಗೆ ಪೂರಕವಾಗಿದ್ದು, ಮಕ್ಕಳು ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹಾಗೆಯೇ, ಶಿಕ್ಷಕರು ಸಹ ಮಕ್ಕಳು ಪುಸ್ತಕಗಳನ್ನು ಸರಿಯಾಗಿ ಬರೆದಿದ್ದಾರೆಯೇ ಎಂಬುದನ್ನು ವೀಕ್ಷಣೆ ಮಾಡಬೇಕು," ಎಂದು ತಿಳಿಸಿದರು.
ಡಯೆಟ್‌ನ ಹಿರಿಯ ಉಪನ್ಯಾಸಕಿ ಹಾಗೂ ಎಪಿಎಲ್‌ಎನ್‌ನೋಡಲ್ ಅಧಿಕಾರಿ ಜ್ಞಾನೇಶ್ವರಿ ಮೇಡಂ ಅವರು ಮಾತನಾಡಿ, ಈ ಅಭ್ಯಾಸ ಪುಸ್ತಕಗಳು ಚಟುವಟಿಕೆ ಆಧಾರಿತವಾಗಿದ್ದು, ಮಕ್ಕಳು ಶಾಲೆ ಹಾಗೂ ಮನೆಯಲ್ಲೂ ಅಭ್ಯಾಸ ಮಾಡಬೇಕು. ಇದರ ಬಗ್ಗೆ ಪೋಷಕರಿಗೂ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಡಯೆಟ್ ಚಿತ್ರದುರ್ಗದ ಎಫ್‌ಎಲ್‌ಎನ್‌ನೋಡಲ್ ಅಧಿಕಾರಿ ರೇವಣ್ಣ ಮಾತನಾಡಿ, ಜಿಲ್ಲೆಯ KMSPP ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿರುವ 70 ಶಾಲೆಗಳಿಗೆ ಎರಡು ದಿನಗಳಲ್ಲಿ ಅಭ್ಯಾಸ ಪುಸ್ತಕಗಳು ತಲುಪಲಿವೆ. ಇಲಾಖೆಯ ಕಲಿಕಾ ಫಲಿತಾಂಶ ಆಧರಿಸಿರುವುದರಿಂದ, ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಇದನ್ನು ಉತ್ತಮವಾಗಿ ಬಳಕೆ ಮಾಡುವಂತೆ ಪ್ರೇರೇಪಿಸಬೇಕು ಹಾಗೂ ಮೌಲ್ಯಮಾಪನ ಮಾಡಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ KMSPP ಕಾರ್ಯಕ್ರಮದಲ್ಲಿ ಹಲವಾರು ಸಂಸ್ಥೆಗಳು ಸೇರಿ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿವೆ. FLN ಕಾರ್ಯಕ್ರಮದ ಅಭ್ಯಾಸ ಪುಸ್ತಕಗಳು ಮತ್ತು ಫಾಲೋಅಪ್ ಕ್ರಮಗಳು ಕಲಿಕೆಗೆ ಉತ್ತಮ ವಾತಾವರಣ ಒದಗಿಸುತ್ತಿವೆ ಎಂದು ತಿಳಿಸಿದರು.
ಶಿಕ್ಷಣ ಫೌಂಡೇಶನ್‌ನ ವ್ಯವಸ್ಥಾಪಕ ನಾರಾಯಣ್ ಕಿಲೋಸ್ಕರ್, ಮಕ್ಕಳು ಪ್ರತಿದಿನ ಒಂದು ಪುಟದಷ್ಟು ನಿರಂತರವಾಗಿ ಅಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.
ಶಿಕ್ಷಣ ಫೌಂಡೇಶನ್‌ನ ಜಿಲ್ಲಾ ಸಂಯೋಜಕ ಕುಮಾರ್, ಈ ಅಭ್ಯಾಸ ಪುಸ್ತಕಗಳನ್ನು ನಕಲು ಮಾಡುವ ಬದಲು ಸ್ವಂತವಾಗಿ ಬರೆಯಬೇಕು. ಗೊತ್ತಿಲ್ಲದ ಅಂಶಗಳನ್ನು ಸ್ನೇಹಿತರು ಅಥವಾ ಶಿಕ್ಷಕರಿಂದ ತಿಳಿದುಕೊಂಡು ಬರೆಯಬೇಕು ಎಂದು ಮಕ್ಕಳಿಗೆ ಪ್ರೇರೇಪಿಸಿದರು.
ಈ ಕಾರ್ಯಕ್ರಮದಲ್ಲಿ ಒಂದರಿಂದ ಮೂರನೇ ತರಗತಿಯ ಮಕ್ಕಳಿಗೆ ಕನ್ನಡ, ಇಂಗ್ಲಿಷ್, ಮತ್ತು ಗಣಿತವನ್ನು ಒಳಗೊಂಡಿರುವ ಒಂದು ಅಭ್ಯಾಸ ಪುಸ್ತಕ ಹಾಗೂ ನಾಲ್ಕರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕನ್ನಡ, ಇಂಗ್ಲಿಷ್ ಮತ್ತು ಗಣಿತ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಫಯಾಜ್, ಶಾಲಾ ಸಹ ಶಿಕ್ಷಕರು, ಶಿಕ್ಷಣ ಫೌಂಡೇಶನ್‌ನ ತಾಲೂಕು ನೋಡಲ್ ಪ್ರಭಾಕರ್ ಪಿ.ವಿ ಮತ್ತು ಗುಂಡಮ್ಮ ಕೆ ಉಪಸ್ಥಿತರಿದ್ದರು. ಸಹಶಿಕ್ಷಕ ಡಾ.ತಿಪ್ಪೇಸ್ವಾಮಿ.ಸ್ವಾಗತಿಸಿ ವಂದಿಸಿದರು.


