ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ, ಬುಧವಾರ ಲೋಕಭವನದಲ್ಲಿ ಆಯೋಜಿಸಲಾಗಿರುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.
ದೇವೇಗೌಡರ ನಿವಾಸದಲ್ಲಿ ಹಿರಿಯ ನಾಯಕರನ್ನು ಭೇಟಿ ಮಾಡಿದ ಡಿ.ಕೆ. ಶಿವಕುಮಾರ್, ಮುಂಬರುವ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಧಿಕೃತ ಆಹ್ವಾನ ಪತ್ರಿಕೆ ನೀಡಿ ಕೋರಿದರು.

ಭೇಟಿಯ ವೇಳೆ ಇಬ್ಬರು ನಾಯಕರು ಕೆಲಕಾಲ ಸಮಾಲೋಚನೆ ನಡೆಸಿದರು. ಇದೇ ವೇಳೆ ತಮ್ಮ ರಾಜಕೀಯ ಕಡು ವೈರಿ ದೇವೇಗೌಡರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು.
ಮಾರ್ಗದರ್ಶನ ಸದಾ ಪ್ರೇರಣೆ: ಡಿ.ಕೆ. ಶಿವಕುಮಾರ್
ಭೇಟಿಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, "ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಿರಿಯ ನಾಯಕರಾದ ಹೆಚ್.ಡಿ. ದೇವೇಗೌಡ ಅವರ ಸುದೀರ್ಘ ರಾಜಕೀಯ ಅನುಭವ ಹಾಗೂ ಮಾರ್ಗದರ್ಶನ ಸದಾ ಪ್ರೇರಣೆಯಾಗಲಿದೆ," ಎಂದು ಗೌರವಪೂರ್ವಕವಾಗಿ ತಿಳಿಸಿದರು.
ಲೋಕಭವನದಲ್ಲಿ ರಾಜಕೀಯ ಮುಖಂಡರು ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರನ್ನು ಖುದ್ದಾಗಿ ಭೇಟಿ ಮಾಡಿ ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.



