ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇದೇ ವೇಳೆ ಆಯುಧ ಪೂಜೆಯ ಶುಭ ಸಂದರ್ಭದಲ್ಲಿ ರಾಜ್ಯದ ಜನತೆಗೆ, ವಿಶೇಷವಾಗಿ ವಾಹನ ಚಾಲಕರು, ಮಾಲೀಕರು ಹಾಗೂ ಪ್ರಯಾಣಿಕರಿಗೆ ಡಿ.ಕೆ. ಶಿವಕುಮಾರ್ ಶುಭಾಶಯ ಕೋರಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬ ಸಮೇತರಾಗಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆಯುಧ ಮತ್ತು ವಾಹನ ಪೂಜೆಯ ಮಹತ್ವದ ಕುರಿತು ಮಾತನಾಡಿದರು.
"ಭಾರತದ ಸಂಸ್ಕೃತಿ ಮತ್ತು ಕರ್ನಾಟಕದ ಪರಂಪರೆಯಲ್ಲಿ ತಾಯಿ ಚಾಮುಂಡಿಯನ್ನು ಸ್ಮರಿಸುತ್ತಾ ಆಯುಧ ಪೂಜೆ ಮಾಡುವ ಸಂಪ್ರದಾಯವಿದೆ. ಒಬ್ಬ ಪ್ರಜಾಸೇವಕನಾಗಿ ಮತ್ತು ಮುಖ್ಯಮಂತ್ರಿಯಾಗಿ, ಆ ತಾಯಿಯ ಶಕ್ತಿಯಿಂದ ಎಲ್ಲರಿಗೂ ಅನುಗ್ರಹವಾಗಲಿ ಎಂದು ಪ್ರಾರ್ಥಿಸಿದ್ದೇನೆ" ಎಂದರು.
ಆಟೋ, ಬಸ್, ಲಾರಿ, ಟ್ಯಾಕ್ಸಿ, ಖಾಸಗಿ, ಸರ್ಕಾರಿ ಹಾಗೂ ಕೈಗಾರಿಕಾ ವಾಹನಗಳ ಚಾಲಕರು, ಮಾಲೀಕರು ಮತ್ತು ಪ್ರಯಾಣಿಕರೆಲ್ಲರಿಗೂ ತಾಯಿ ಚಾಮುಂಡಿ ಹಾಗೂ ದುರ್ಗಾ ದೇವಿಯ ಆಶೀರ್ವಾದ ಸಿಗಲಿ ಮತ್ತು ಸುರಕ್ಷಿತ ಪ್ರಯಾಣ ಸಾಗಲಿ ಎಂದು ಹಾರೈಸಿದರು.
ಡಿಸೆಂಬರ್ 31 ರೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ:
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಡಿಸೆಂಬರ್ 31 ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಗಡುವಿನ ಹಿನ್ನೆಲೆಯಲ್ಲಿ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ಯಾವಾಗ ಬೇಕಾದರೂ ಘೋಷಣೆಯಾಗಬಹುದು. ಈ ಹಿನ್ನೆಲೆಯಲ್ಲಿ ಸರ್ವ ಸನ್ನದ್ಧರಾಗಿರುವಂತೆ ಸಚಿವರು ಹಾಗೂ ಶಾಸಕರಿಗೆ ಸೂಚಿಸಲಾಗಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಂಚಾಯಿತಿ ಮಟ್ಟದಲ್ಲಿ ರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿತ್ತು. ಹೀಗಾಗಿ, ತಮ್ಮ ತಮ್ಮ ಕ್ಷೇತ್ರಗಳಿಗೆ ಅಗತ್ಯವಿರುವ ಅನುದಾನದ ಕುರಿತು ತಕ್ಷಣವೇ ವರದಿ ಸಲ್ಲಿಸುವಂತೆ ಶಾಸಕರಿಗೆ ಕೋರಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.



