ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ಮೂರನೇ ಅಥವಾ ನಾಲ್ಕನೇ ಮುಖ್ಯಮಂತ್ರಿಯೂ ಅಧಿಕಾರಕ್ಕೆ ಬರಬಹುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಸರ್ಕಾರದ ಕೆಲಸ ಕ್ಯಾಮೆರಾ ಹಿಡಿದು ಬೆಡ್‌ರೂಮ್‌ಗೆ ಹೋಗುವುದಲ್ಲ. ಈ ರೀತಿ ಕೃತ್ಯ ಎಸಗುವವರು ಪಾಪಿಗಳು, ಕಳ್ಳರು ಹಾಗೂ ಬ್ಲಾಕ್‌ಮೇಲರ್‌ಗಳು. ಈ ಪ್ರಕರಣವನ್ನು ತಕ್ಷಣವೇ ಸಿಬಿಐಗೆ ವಹಿಸಬೇಕು. ಆದರೆ ಸರ್ಕಾರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗೃಹ ಸಚಿವರು 'ಅನ್‌ಫಿಟ್':
ಸ್ಟಿಂಗ್ ಆಪರೇಷನ್ ವಿವಾದದ ಕುರಿತು ಮಾತನಾಡಿರುವ ಗೃಹ ಸಚಿವರು ನಿಷ್ಪಕ್ಷಪಾತವಾಗಿರಬೇಕು, ಆದರೆ ಆಪಾದನೆಗಳಲ್ಲಿ ಅವರೂ ಒಬ್ಬರಾಗಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರು ಒಂದು ವಿಷಯವನ್ನು ಹೊರಗೆ ತಂದಾಗ, ಅದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಬೇಕಿತ್ತು. ಆದರೆ ಗೃಹ ಸಚಿವರು ಬೇರೆ ಯಾವುದೋ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ನಾಲೆಡ್ಜ್ ಇಲ್ಲದ, ಗೃಹ ಮಂತ್ರಿಯಾಗಿ ಏನು ಮಾಡಬೇಕೆಂದು ಇನ್ನೂ ಓದಿಕೊಳ್ಳದ ಇವರು ಒಬ್ಬ 'ಅನ್‌ಫಿಟ್ ಹೋಮ್ ಮಿನಿಸ್ಟರ್' ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್‌ನಿಂದ ಸರ್ಕಾರಕ್ಕೆ ಶಿಫ್ಟ್ ಆದ ಸ್ಟಿಂಗ್ ಫ್ಯಾಕ್ಟರಿ:
ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನೋ ರಕ್ಷಣೆ ಮಾಡಲು ಹೊರಟಿದ್ದಾರೆ. ಸ್ಟಿಂಗ್ ಆಪರೇಷನ್ ಫ್ಯಾಕ್ಟರಿ ಮೂಲತಃ ಕಾಂಗ್ರೆಸ್‌ನಲ್ಲೇ ಇತ್ತು, ಈಗ ಅದು ಪಕ್ಷದಿಂದ ಸರ್ಕಾರಕ್ಕೆ ಶಿಫ್ಟ್ ಆಗಿದೆ. ಪ್ರತಿಯೊಬ್ಬರೂ ತಪ್ಪು ಮಾಡಿದಾಗ ಯಾರೂ ಮಾತನಾಡmದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜವಾಬ್ದಾರಿಯುತ ಸಚಿವರಾದವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಮುದಾಯದ ಪ್ಲೇ ಕಾರ್ಡ್ ಬಳಸಬಾರದು ಎಂದು ಎಚ್ಚರಿಸಿದರು.
ರೈತರಿಗೆ ದ್ರೋಹ ಬಗೆದಿರುವ ಸರ್ಕಾರ:
ಬಿಜೆಪಿಯವರು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆಂಬ ಸಿಎಂ ಮತ್ತು ಡಿಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೊದಲು ಕಾಂಗ್ರೆಸ್ ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ರೈತರಿಗೆ ಕೇವಲ 2,500 ರೂ. ಘೋಷಣೆ ಮಾಡಲಾಗಿದ್ದು, ಇದುವರೆಗೂ ಅವರ ಖಾತೆಗೆ ಒಂದು ರೂಪಾಯಿಯನ್ನೂ ಹಾಕಿಲ್ಲ. ನಾವು ಕೇಳುತ್ತಿರುವುದು ರೈತರಿಗೆ ಒಟ್ಟು 25,000 ರೂ. ಬಿಡುಗಡೆ ಮಾಡಿ, ಮೊದಲ ಕಂತಾಗಿ ಕನಿಷ್ಠ 10,000 ರೂ. ನೀಡಿ ಎಂದು. ಆದರೆ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ಹಣ ಬಿಡುಗಡೆ ಮಾಡದೆ ಸರ್ಕಾರವೇ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟು, ರಾಜ್ಯ ಸರ್ಕಾರದಿಂದ ರೈತರಿಗಾಗಿ ಏನು ಪ್ರಯತ್ನ ಮಾಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.
ಯತ್ನಾಳ್ - ವಿಜಯೇಂದ್ರ ಭೇಟಿ ಕುರಿತು ಸ್ಪಷ್ಟನೆ:
ಬಾಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿ.ವೈ. ವಿಜಯೇಂದ್ರ ಭೇಟಿಯ ಕುರಿತು ಪ್ರತಿಕ್ರಿಯಿಸಿ, ನಮ್ಮ ಪಕ್ಷ ಯಾರನ್ನೂ ದೂಡುವುದಿಲ್ಲ. ಯತ್ನಾಳ್ ಅವರು ಯಾವುದೋ ಕಾರಣಕ್ಕೆ ಪಕ್ಷದ ಚೌಕಟ್ಟಿನಿಂದ ಹೊರಗಿದ್ದಾರೆ, ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಸಹಜವಾಗಿಯೇ ಭೇಟಿ ಮಾಡಿದ್ದಾರೆ. ಇನ್ನು ಇವರ ಬಗ್ಗೆ ಯಾವಾಗ, ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದರು.



