Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಂಸ್ಕೃತಿ ಉಳಿಸಿ-ಬೆಳೆಸಲು ದಸರಾ ಉತ್ಸವ-ಡಾ.ಜಿ.ಪರಮೇಶ್ವರ

ಚಂದ್ರವಳ್ಳಿ ನ್ಯೂಸ್, ತುಮಕೂರು:
ನಮ್ಮ ಧಾರ್ಮಿಕ ಆಚರಣೆ, ವಿಚಾರಧಾರೆ, ಭವ್ಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಲು  ತುಮಕೂರಿನಲ್ಲಿ ಪ್ರಪ್ರಥಮ ಬಾರಿಗೆ ತುಮಕೂರು ದಸರಾ ಉತ್ಸವ ಆಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ್ ತಿಳಿಸಿದರು.

ನಗರದ  ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಂದು ಅದ್ದೂರಿಯ ಉತ್ಸವಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತುಮಕೂರು ದಸರಾ ಉತ್ಸವವನ್ನು ಪ್ರಾರಂಭಿಸಿರುವುದು ಮೈಸೂರು ದಸರಾಗೆ ಹೋಲಿಕೆ ಮಾಡಲು ಅಲ್ಲ ಎಂದು ಸ್ಪಷ್ಟನೆ ನೀಡಿದರು.

ತುಮಕೂರು ದಸರಾ ಆಚರಣೆಗೆ ಮುಖ್ಯಮಂತ್ರಿಯವರು ೧ ಕೋಟಿ ರೂ.ಗಳ ಅನುದಾನ ನೀಡಿ ಪ್ರೋತ್ಸಾಹಿಸಿದ್ದಾರೆ. ದಸರಾ ಪ್ರಯುಕ್ತ ಮುಂದಿನ ೯ ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಚಾಮುಂಡೇಶ್ವರಿ ದೇವಿ ಕೃಪೆಗೆ ಪಾತ್ರರಾಗಿ  ಖ್ಯಾತ ಕಲಾವಿದರಿಂದ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬೇಕೆಂದು ಮನವಿ ಮಾಡಿದರು.

ಹೊಸ ಚರಿತ್ರೆ ಸೃಷ್ಠಿ:
ಇದಕ್ಕೂ ಮುನ್ನ ತುಮಕೂರು ದಸರಾ ಉತ್ಸವದ ಮೊದಲ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು
, ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಅದ್ದೂರಿಯಾಗಿ ಇಂದಿನಿಂದ ೧೦ ದಿನಗಳ ಕಾಲ ತುಮಕೂರು ದಸರಾ ಉತ್ಸವ ಆಚರಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹೊಸ ಚರಿತ್ರೆ ಸೃಷ್ಠಿಯಾಗಿದೆ ಎಂದು ತಿಳಿಸಿದರು.

ದಸರಾ ಹಬ್ಬದ ಆಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಮೈಸೂರು ಮಹಾರಾಜರು ಪ್ರಾರಂಭಿಸಿದ ಮೈಸೂರು ದಸರಾ ಉತ್ಸವವು ವಿಶ್ವ ವಿಖ್ಯಾತ ಹೊಂದಿ ಇತಿಹಾಸದ ಪುಟಗಳಲ್ಲಿ ಸೇರಿದ ರೀತಿಯಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊಂಡಿರುವ ತುಮಕೂರು ದಸರಾ ಆಚರಣೆ ಕೂಡ ಇತಿಹಾಸದ ಪುಟಗಳಲ್ಲಿ ಸೇರಲಿದೆ ಎಂದು ತಿಳಿಸಿದರಲ್ಲದೆ, ತುಮಕೂರು ದಸರಾ ದೇವರ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ರಮವಾಗಿ ಮೂಡಿಬರಲಿದೆ ಎಂದು ತಿಳಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ದಸರಾ ಉತ್ಸವಕ್ಕೆ ಅನೇಕ ವಿಚಾರಧಾರೆಗಳಿವೆ. ಈ ವಿಚಾರ ಧಾರೆಗಳು ಪ್ರತಿಯೊಬ್ಬ ಭಾರತೀಯನಿಗೆ ತಲುಪಬೇಕು. ಪ್ರತಿಯೊಬ್ಬರಿಗೂ ನನ್ನ ದೇಶ, ನನ್ನ ಸಂಸ್ಕೃತಿ ಎಂಬ ಭಾವನೆ ಬರಬೇಕೆಂದು ತಿಳಿಸಿದರು.

ಚಾಮುಂಡಿ ದೇವಿಯು ದುಷ್ಟ ಶಕ್ತಿಯನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸಿದ ಸ್ಮರಣೆಗಾಗಿ ದಸರಾ ಹಬ್ಬದ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ತಾಯಿಯ ಆಶೀರ್ವಾದದಿಂದ ನಮ್ಮಲ್ಲಿರುವ ಕೆಟ್ಟತನವನ್ನು ಅಳಿಸಿ ಒಳ್ಳೆಯತನವನ್ನು ರೂಢಿಸಿಕೊಳ್ಳೋಣ. ಜಿಲ್ಲೆಯ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳನ್ನು ಬಿಂಬಿಸುವ ರೀತಿಯಲ್ಲಿ ವೈಭವಯುತವಾಗಿ ಹಾಗೂ ಅರ್ಥಪೂರ್ಣವಾಗಿ ದಸರಾ ಉತ್ಸವವನ್ನು ಆಚರಿಸಲಾಗುತ್ತಿದ್ದು, ಜಿಲ್ಲೆಯ ಜನತೆ ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.

ಹಲವಾರು ವರ್ಷಗಳಿಂದ ಜಿಲ್ಲೆಯ ಹಿರಿಯರು ಒಗ್ಗೂಡಿ ದಸರಾ ಉತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದರು. ಅವರ ಸಲಹೆ-ಸೂಚನೆಗಳನ್ನು ತೆಗೆದುಕೊಂಡು ಈ ಬಾರಿ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ. ದಸರಾ ಉತ್ಸವವು ತುಮಕೂರು ಜಿಲ್ಲೆಯ ಸಂಸ್ಕೃತಿ ಪ್ರತಿಬಿಂಬಿಸುವಂತಾಗಬೇಕು. ಸ್ಥಳೀಯ ಸಂಸ್ಕೃತಿ, ಧಾರ್ಮಿಕ ಆಚಾರ-ವಿಚಾರಗಳು ಪ್ರತಿಯೊಬ್ಬರಿಗೂ ತಲುಪಬೇಕು. ಧರ್ಮದ ಆಧಾರದ ಮೇಲೆಯೇ ನಮ್ಮ ಸಂವಿಧಾನ ರಚಿತವಾಗಿದೆ. ಡಾ: ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಇದು ನನ್ನ ದೇಶ, ನನ್ನ ಧರ್ಮ ಎಂಬ ಭಾವನೆ ಮೂಡಬೇಕೆಂದು ಬರೆಯಲಾಗಿದೆ ಎಂದು ತಿಳಿಸಿದರು.

ದಸರಾ ಉತ್ಸವದಲ್ಲಿ ಸಾಂಸ್ಕೃತಿಕ ದಸರಾ, ಯುವ ದಸರಾ, ರೈತ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ವಿಂಟೇಜ್ ಕಾರ್ ಮೆರವಣಿಗೆ, ಡ್ರೋಣ್ ಶೋ, ಹೆಲಿಕಾಪ್ಟರ್ ಶೋ, ಇಸ್ರೋ ಸಂಸ್ಥೆಯಿಂದ ಮಕ್ಕಳ ಜ್ಞಾನವನ್ನು ಹೆಚ್ಚಿಸಲು ಬಾಹ್ಯಾಕಾಶ ಕುರಿತು ವಿಶೇಷ ವಸ್ತು ಪ್ರದರ್ಶನಸೇರಿದಂತೆ  ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ ಖ್ಯಾತ ಸಿನಿಮಾ ತಾರೆಯರು, ಗಾಯಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ದಸರಾ ಉತ್ಸವದ ಪ್ರಯುಕ್ತ ಅಕ್ಟೋಬರ್ ೧೨ರಂದು ಜರುಗಲಿರುವ ಮೆರವಣಿಗೆಯಲ್ಲಿ ಜಂಬೂ ಸವಾರಿ ನಡೆಯಲಿದ್ದು, ಅಲಂಕೃತ ಆನೆಗಳು, ಕುದುರೆಗಳು, ವಿವಿಧ ಕಲಾ ತಂಡಗಳು ಮತ್ತು ಜಿಲ್ಲೆಯ ೭೦ಕ್ಕೂ ಹೆಚ್ಚು ದೇವರ ಉತ್ಸವ ಮೂರ್ತಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷವೆಂದು ತಿಳಿಸಿದರು.   

ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪೂರ್ವಜರು ಹಬ್ಬಗಳ ಆಚರಣೆಯನ್ನು ಪ್ರಾರಂಭಿಸಿದ್ದು, ಅವುಗಳನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಬ್ದಾರಿ ಎಂದರು.

ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, ದಸರಾ ಉತ್ಸವ ಆಚರಣೆಯಿಂದ ಮೈಸೂರಿನಂತೆ ತುಮಕೂರು ನಗರವೂ ಸಹ ಸಾಂಸ್ಕೃತಿಕ ನಗರವಾಗಿ ರೂಪುಗೊಳ್ಳುತ್ತಿದೆ. ವಿಜಯನಗರ ಅರಸರಿಂದ ಮೈಸೂರು ಅರಸರವರೆಗೆ ದಸರಾ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮಲ್ಲಿರುವ ಕೆಟ್ಟ ಭಾವನೆಯನ್ನು ಹೋಗಲಾಡಿಸಿ ಒಳ್ಳೆಯದ್ದನ್ನು ಅಳವಡಿಸಿಕೊಳ್ಳಬೇಕು ಎಂಬ ಪ್ರತೀಕವೇ ದಸರಾ ಆಚರಣೆ. ತುಮಕೂರಿನ ದಸರಾ ಉತ್ಸವವು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕು ಎಂದು ತಿಳಿಸಿದರು.

ಕೊರಟಗೆರೆ ತಾಲೂಕು ಎಲೆರಾಂಪುರದ ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ಡಾ. ಹನುಮಂತನಾಥ ಮಹಾಸ್ವಾಮೀಜಿ ಮಾತನಾಡಿ, ತುಮಕೂರು ದಸರಾ ಉತ್ಸವ ಆಚರಿಸಲು ಜಿಲ್ಲಾಡಳಿತ ಹಗಲಿರುಳು ಶ್ರಮಿಸಿದೆ. ಚಾಮುಂಡಿ ದೇವಿ ಅನುಗ್ರಹ ಜಿಲ್ಲೆಯ  ಜನತೆ ಮೇಲಿರಲಿ ಎಂದು ಆಶೀರ್ವದಿಸಿದರು.

ನವದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ. ಬಿ. ಜಯಚಂದ್ರ ಮಾತನಾಡಿ, ಇಡೀ ದೇಶದಲ್ಲೇ ೯ ದಿನಗಳ ಕಾಲ ನವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಮೈಸೂರು ದಸರಾ ಮಾದರಿಯಲ್ಲಿ  ತುಮಕೂರಿನಲ್ಲಿಯೂ ದಸರಾ ಉತ್ಸವವನ್ನು ಆರಂಭಿಸಿರುವ ಜಿಲ್ಲಾಡಳಿತಕ್ಕೆ ಅಭಿನಂದನೆ ಹೇಳಿದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ಕಲೆ, ಸಂಸ್ಕೃತಿಯನ್ನು ಬೆಳೆಸಿರುವ ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ  ಸರ್ಕಾರದಿಂದ ಪ್ರಾರಂಭವಾಗಿರುವ ಈ ದಸರಾ ಉತ್ಸವ ಶಾಶ್ವತವಾಗಿ ಪ್ರತಿವರ್ಷ ಆಚರಿಸುವಂತಾಗಬೇಕು ಎಂದು ಆಶಿಸಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮಾರು ೩೩ ವರ್ಷದಿಂದಲೂ ದಸರಾ ಸಮಿತಿ ಸಂಘಟಕರಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಈ ಬಾರಿ ಸರ್ಕಾರದಿಂದಲೇ ದಸರಾ ಉತ್ಸವ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಹಾಗೂ ಪತ್ನಿ ಕನ್ನಿಕಾ ಪರಮೇಶ್ವರ ದಂಪತಿಗಳು ಹೋಮ-ಹವನ, ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ತುಮಕೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದು, ಶಕ್ತಿ ದೇವತೆಯ ಆರಾಧನೆಯಿಂದ ಜಿಲ್ಲೆಯ ಜನತೆಗೆ ಸನ್ಮಂಗಳ ಉಂಟಾಗಲಿ ಎಂದು ಆಶಿಸಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಗಣ್ಯರನ್ನು ಸ್ವಾಗತಿಸಿದರು. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರಿನಲ್ಲಿ ನಿರ್ಮಿಸಿರುವ ಧಾರ್ಮಿಕ ಮಂಟಪದ ಮುಂಭಾಗದಲ್ಲಿ ಸಚಿವ ಡಾ: ಜಿ. ಪರಮೇಶ್ವರ ಧ್ವಜಾರೋಹಣ ನೆರವೇರಿಸಿದರು.  ಭಕ್ತಾದಿಗಳು ಶ್ರೀ ಶೈಲಪುತ್ರಿ ಅಲಂಕಾರದಲ್ಲಿದ್ದ ಚಾಮುಂಡಿ ದೇವಿಯ ದರ್ಶನ ಮಾಡಿ ತಮ್ಮ ಭಕ್ತಿಭಾವವನ್ನು ಸಮರ್ಪಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ವಾಗತಿಸಿದರು. ಜಿಪಂ ಸಿಇಒ ಜಿ. ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ವಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಡಿವೈಎಸ್‌ಪಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಸೇರಿದಂತೆ ದಸರಾ ಸಮಿತಿಯ ವಿವಿಧ ಪದಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ