ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಬಸವ ಭವನ ಪಕ್ಕದ ಸೋಮೇಶ್ವರ ಕುಂಟೆ ಜಾಗ ಈಗಾಗಲೇ ಒತ್ತುವರಿಯಾಗಿದ್ದು ಅದನ್ನು ತೆರವು ಗೊಳಿಸಲು ಸಾರ್ವಜನಿಕರಿಂದ ಒತ್ತಾಯಗಳು ಕೇಳಿ ಬಂದಿದೆ. ಈ ಬಗ್ಗೆ ಕುಂಟೆ ಜಾಗ ಒತ್ತುವರಿ ತೆರವು ಗೊಳಿಸಲು ಕರವೇ ಕನ್ನಡಿಗರ ಬಣ ಹೋರಾಟ ನಡೆಸಿದೆ. ಇದೆಲ್ಲದರ ಮದ್ಯೆ ಸೋಮೇಶ್ವರ ಕುಂಟೆ ಜಾಗದಲ್ಲಿ ಸ್ಕೂಟರ್ ಶೋ ರೂಮ್ ಒಂದರ ತಾತ್ಕಾಲಿಕ ವಾಣಿಜ್ಯ ಮಳಿಗೆ ಪ್ರಾರಂಭ ಗೊಂಡಿದೆ. ಇದನ್ನು ಖಂಡಿಸಿ ಕರವೇ ಕನ್ನಡಿಗರ ಬಣ ಚಂದ್ರಶೇಖರ್ ನೇತೃತ್ವದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತಾತ್ಕಾಲಿಕ ವಾಣಿಜ್ಯ ಮಳಿಗೆ ತೆರವು ಗೊಳಿಸಲು ಯಶಸ್ವಿಯಾಗಿದೆ.
ಈ ಬಗ್ಗೆ ಕರವೇ ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್ ಮಾಧ್ಯಮಗಳೊಂದಿಗೆ ಮಾತನಾಡಿ ಸರ್ಕಾರಿ ಕುಂಟೆಗಳು, ಗೋಮಾಳ ಜಾಗಗಳು ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಇತ್ತೀಚೆಗೆ ಅನಧಿಕೃತವಾಗಿ ತಾತ್ಕಾಲಿಕ ವಾಣಿಜ್ಯ ಮಳಿಗೆಗಳು ತಲೆ ಎತ್ತುತ್ತಿವೆ. ಸರ್ಕಾರಿ ಜಾಗಗಳಲ್ಲಿ ವಾಣಿಜ್ಯ ವ್ಯಾಪಾರಕ್ಕೆ ಯಾರು ಅನುಮತಿ ಕೊಡುತ್ತಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ತಾಲೂಕು ಆಡಳಿತ, ನಗರಸಭೆ ಆಡಳಿತಾಧಿಕಾರಿಗಳ ಗಮನಕ್ಕೆ ಬಾರದೆ ಇವೆಲ್ಲ ನಡೆಯುತ್ತಿರುವುದು ತಾಲೂಕು ಆಡಳಿತ ಅಧಿಕಾರಿಗಳ ಜಾಣ ಕುರುಡು ತನಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳ ಕಣ್ಣೆದುರೇ ಇದ್ದರೂ ಸಹಾ ಸಾರ್ವಜನಿಕರು ಅಥವಾ ಸಂಘಟನೆಗಳು ದೂರು ಕೊಟ್ಟು ಒತ್ತಾಯ ಮಾಡಿದಾಗ ಮಾತ್ರ ಅದರ ಬಗ್ಗೆ ಗಮನ ಹಾರೈಸುತ್ತಾರೆ ಎಂಬುದು ಬೇಸರದ ಸಂಗತಿ. ಎಲ್ಲವನ್ನು ಸಾರ್ವಜನಿಕರೇ ಮಾಡುವಂತಿದ್ದರೆ ಆಡಳಿತಗಳು ಯಾಕೆ ಅಧಿಕಾರಿಗಳು ಯಾಕೆ ಎಂದು ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.



