ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರೊಂದಿಗೆ ವೀಕ್ಷಿಸಿದರು.
ಕಾರ್ಗಿಲ್ ವಿಜಯ್ ದಿವಸ್‌ನ ಹೆಮ್ಮೆಯ ದಿನದಂದೇ ಪ್ರಧಾನಿ ನೀಡಿದ ಸಂದೇಶವು ದೇಶದ ಜನರಲ್ಲಿ ಹೊಸ ಉತ್ಸಾಹ ತುಂಬಿದೆ ಎಂದು ಈ ವೇಳೆ ಅವರು ಹೇಳಿದರು.
ವಿಕಸಿತ ಭಾರತ ನಿರ್ಮಾಣಕ್ಕೆ ಕರೆ:
ಕಾರ್ಯಕ್ರಮದ ಬಳಿಕ ಮಾತನಾಡಿದ ಬಿ.ವೈ. ವಿಜಯೇಂದ್ರ, "ಕಾರ್ಗಿಲ್ ವಿಜಯ್ ದಿವಸ್‌ನ ಈ ಶುಭ ದಿನದಂದು ದೇಶದ ಯೋಧರ ಅಮರ ತ್ಯಾಗ, ನವ ಭಾರತದ ಸಂಕಲ್ಪ ಹಾಗೂ ಯುವಶಕ್ತಿಯ ಸಾಮರ್ಥ್ಯದ ಕುರಿತು ಪ್ರಧಾನಿಯವರು ನೀಡಿದ ಸಂದೇಶ ಪ್ರತಿಯೊಬ್ಬರಲ್ಲೂ ದೇಶಭಕ್ತಿ ಹಾಗೂ ಹುಮ್ಮಸ್ಸನ್ನು ಹೆಚ್ಚಿಸಿದೆ. ಪ್ರಧಾನಿಗಳ ಈ ಪ್ರೇರಣಾದಾಯಿ ವಿಚಾರಗಳನ್ನು ಪ್ರತಿಯೊಂದು ಮನೆಗೂ ತಲುಪಿಸಿ, ಸಮರ್ಥ, ಸಮೃದ್ಧ ಹಾಗೂ 'ವಿಕಸಿತ ಭಾರತ' ನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗಿ ಶ್ರಮಿಸಬೇಕಾಗಿದೆ," ಎಂದರು.
ಪ್ರಮುಖರ ಉಪಸ್ಥಿತಿ
ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ, ಮಾಜಿ ಪಾಲಿಕೆ ಸದಸ್ಯ ಕಟ್ಟಾ ಜಗದೀಶ್ ಸೇರಿದಂತೆ ಹಲವು ಪ್ರಮುಖ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಪ್ರಧಾನಿಗಳ 'ಮನ್ ಕೀ ಬಾತ್' ಕಾರ್ಯಕ್ರಮವನ್ನು ವೀಕ್ಷಿಸಿದರು.



