Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮದ್ದೂರಿನ ಗಣೇಶ - ಮಸೀದಿ - ಕಲ್ಲು ತೂರಾಟ ಮತ್ತು ಜನಸಾಮಾನ್ಯ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮದ್ದೂರಿನ ಗಣೇಶ - ಮಸೀದಿ - ಕಲ್ಲು ತೂರಾಟ ಮತ್ತು ಜನಸಾಮಾನ್ಯ...... ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ, ಯಾವುದೇ ಪ್ರತಿಕ್ರಿಯೆ ನೀಡದೆ ನಮ್ಮ ಪಾಡಿಗೆ ನಾವಿದ್ದರೆ ಖಂಡಿತವಾಗಲೂ ಮುಂದಿನ ದಿನಗಳು ನಮ್ಮ ಬುಡಕ್ಕೆ ಈ ಸಮಸ್ಯೆ ಬರಬಹುದು. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ  ಗಲಭೆಗಳು ಸಾಮಾನ್ಯವಾಗುತ್ತಿದೆ. ಅದರ ಅರ್ಥ ಮನಸ್ಸುಗಳು ಧರ್ಮದ ಆಧಾರದ ಮೇಲೆ ಒಡೆದು ಹೋಗುತ್ತಿದೆ. ಇದಕ್ಕೆ ಆ ಕ್ಷಣದ ಆ ಘಟನೆಯಾ ಮೇಲೆ ಚರ್ಚೆ ಮಾಡಿಕೊಂಡು ಒಂದು ನಿರ್ಧಾರಕ್ಕೆ ಬರುವುದು ತೀರ ಬಾಲಿಶವಾದದ್ದು. ವ್ಯವಸ್ಥೆ ಮತ್ತು ಅದು ಸಾಗುತ್ತಿರುವ ದಿಕ್ಕನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.

ನಮ್ಮನ್ನು ಕಾಪಾಡಬೇಕಾಗಿದ್ದ ದೇವರು, ನಮ್ಮನ್ನು ರಕ್ಷಿಸಿ ಕ್ರಮಬದ್ಧ ಜೀವನಶೈಲಿ ರೂಪಿಸಬೇಕಾಗಿದ್ದ ಧರ್ಮಗಳು ಇಂದು ನಮ್ಮನ್ನು ವಿಭಜಿಸಿರುವುದು ಮಾತ್ರವಲ್ಲದೆ ದೇವರು ಧರ್ಮವನ್ನು ಉಳಿಸಬೇಕಾದ ಪರಿಸ್ಥಿತಿ ಶ್ರೀ ಸಾಮಾನ್ಯನಿಗೆ ಹೊರಿಸಿ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಮೇಲ್ವರ್ಗದವರು ತಾವು ಸುಖವಾಗಿದ್ದಾರೆ. ಇದು ವಿಚಿತ್ರವಲ್ಲವೇ. ಬೇಕಾದರೆ ಗಮನಿಸಿ.......

ಸ್ವಲ್ಪ ಖಾರವಾದರೂ ವಾಸ್ತವ ಇದೇ ಅಲ್ಲವೇ.....ಒಂದು ಕಡೆ ಮದ್ದೂರಿನ ತರಕಾರಿ ಕಮಲಮ್ಮನ ಮಗ, ಗಣೇಶ ಉತ್ಸವದಲ್ಲಿ ಭಾಗವಹಿಸಿ, ಅಂದು ನಡೆದ ಗಲಭೆಯಲ್ಲಿ ಆರೋಪಿಯಾಗಿ ಪೊಲೀಸರು ಬಂಧಿಸಿದ್ದರಿಂದ ಇಂದು ಜೈಲಿನಲ್ಲಿದ್ದಾನೆ. ಆತನ ಜಾಮೀನಿಗಾಗಿ ಕಮಲಮ್ಮನವರು ತುಂಬಾ ನೋವಿನಿಂದ, ಕಷ್ಟದಿಂದ ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮಗಳ ಮುಂದೆ ಗೋಳಾಡುತ್ತಿದ್ದಾರೆ......

ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರು ಈಗ ಎಂ ಎಲ್ ಸಿ  ಯಾಗಿ ಮುಂದೆ ತನ್ನ ತಂದೆಯ ನಂತರ ರಾಜ್ಯದಲ್ಲಿ ಮಂತ್ರಿಯಾಗಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.....

ಒಂದು ಕಡೆ ಭದ್ರಾವತಿಯ ಹಣ್ಣಿನ ಅಂಗಡಿಯ ಇಬ್ರಾಹಿಂ ಅವರ ಮಗ ನಿನ್ನೆ ನಡೆದ ಗಣೇಶ ಉತ್ಸವದ ಗಲಾಟೆಯ ಸಂದರ್ಭದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಈಗ ಜೈಲು ಸೇರಿದ್ದಾನೆ. ಅವನ ಬಿಡುಗಡೆಗಾಗಿ ಅವರ ತಂದೆ ಇಬ್ರಾಹಿಂ ಕಣ್ಣೀರು ಸುರಿಸುತ್ತಾ ಓಡಾಡುತ್ತಿದ್ದಾರೆ.......

ಮತ್ತೊಂದು ಕಡೆ ಕರ್ನಾಟಕ ಸರ್ಕಾರದ ಮಂತ್ರಿಗಳು ಹಾಗೂ ಮುಸ್ಲಿಂ ಸಮುದಾಯದ ನಾಯಕರು ಆದ ಜಮೀರ್ ಅಹ್ಮದ್ ಅವರ ಪುತ್ರ ಹಿಂದೆ ಒಂದು ಸಿನಿಮಾದಲ್ಲಿ ಅಭಿನಯ ಮಾಡಿ ಈಗ ನಾಯಕನಾಗಿ ಮತ್ತೊಂದು ದೊಡ್ಡ ಬಜೆಟ್ಟಿನ ಸಿನಿಮಾ ಮಾಡಲು ಸಿದ್ಧತೆಯಲ್ಲಿ ತೊಡಗಿ ಅದಕ್ಕಾಗಿ ತುಂಬಾ ಶ್ರಮವಹಿಸುತ್ತಿದ್ದಾರೆ.......

ಒಂದು ಕಡೆ ಶಿವಮೊಗ್ಗಾದ ರೈತರಾದ ಕೃಷ್ಣಪ್ಪರನವರ ಮಗ ಅದೇ ಗಣೇಶನ ಮೆರವಣಿಗೆಯಲ್ಲಿ ಭಾಗವಹಿಸಿ ಆರೋಪಿಯಾಗಿ ಜೈಲು ಸೇರಿದ್ದಾನೆ. ಕೃಷ್ಣಪ್ಪನವರು ಅದೇ ಕೊರಗಿನಲ್ಲಿ ಹಾಸಿಗೆ ಹಿಡಿದಿದ್ದಾರೆ. ಅವರ ಬಂಧುಗಳು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ......

ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಮುಂದೆ ತಮ್ಮ ಪಕ್ಷವನ್ನು ರಾಜ್ಯಾದ್ಯಂತ ಬೆಳೆಸುವ ನಿಟ್ಟಿನಲ್ಲಿ ಅದರ ಅಧ್ಯಕ್ಷರಾಗಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ....

ಒಂದು ಕಡೆ ದಾವಣಗೆರೆಯ ಬಟ್ಟೆ ಅಂಗಡಿ ಖಲೀಲ್ ಸಾಬರ ಮಗ ಮತ್ತೆ ಅದೇ ಗಣೇಶೋತ್ಸವದ ಗಲಾಟೆಯ ಆರೋಪದಲ್ಲಿ ಜೈಲು ಪಾಲಾಗಿದ್ದಾನೆ. ಖಲೀಲ್ ಸಾಬರು ಇದ್ದ ಒಂದಷ್ಟು ಹಣ ಕೂಡಿಸಿ ಸಾಲ ಮಾಡಿ ಮಗನನ್ನು ಬಿಡಿಸಿಕೊಳ್ಳಲು ವಕೀಲರ ಮನೆ ಬಾಗಿಲು ಸುತ್ತುತ್ತಿದ್ದಾರೆ.....

ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಮಗ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ಮುಂದೆ ಪಕ್ಷವನ್ನು ಅಧಿಕಾರಕ್ಕೆ ತಂದು ತಾವೇ ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಸಾಕಷ್ಟು ಶ್ರಮ ಪಡುತ್ತಿದ್ದಾರೆ......

ಒಂದು ಕಡೆ ನಾಗಮಂಗಲದ ಎಂಬಿಎ ಓದಿದ್ದ ಕೆಂಚೇಗೌಡರ ಮಗ ಈ ಗಲಭೆಯಲ್ಲಿ ಆರೋಪಿಯಾಗಿ ಜೈಲಿಗೆ ಸೇರಿದ್ದಾನೆ. ಅವನನ್ನು ವಿದೇಶದಲ್ಲಿ ಓದಿಸಬೇಕೆಂದು ಕನಸುಕಂಡಿದ್ದ ಕೆಂಚೇಗೌಡರು ಅವನ ಮುಂದಿನ ಭವಿಷ್ಯ, ಪಾಸ್ ಪೋರ್ಟ್, ವೀಸಾಗೆ  ಈ ಬಂಧನ ಎಷ್ಟರಮಟ್ಟಿಗೆ ತೊಂದರೆ ಕೊಡಬಹುದು ಎಂಬ ಚಿಂತೆಯಲ್ಲಿ ಕೊರಗುತ್ತಿದ್ದಾರೆ......

ಮತ್ತೊಂದು ಕಡೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಗಳು ಒಂದು ಬೃಹತ್ ಉದ್ದಿಮೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ, ಅದನ್ನು ಇನ್ನೂ ದೇಶ ವಿದೇಶಗಳಲ್ಲಿ ಬೆಳೆಸಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ.....

ಈ ಎಲ್ಲಾ ಹೆಸರುಗಳು ಕೇವಲ ಸಾಂಕೇತಿಕ. ನಿಮ್ಮ ಮನಸ್ಸಿನಲ್ಲಿ ಸುಳಿದಾಡುವ  ಯಾವುದೇ ರಾಜಕಾರಣಿ ಅಥವಾ ಪತ್ರಕರ್ತರು ಅಥವಾ ಧಾರ್ಮಿಕ ಮುಖಂಡರು ಅಥವಾ ದೊಡ್ಡ ಹುದ್ದೆಯ ಅಧಿಕಾರಿಗಳು ಅಥವಾ ಸಿನಿಮಾ ನಟರು ಅಥವಾ ವಿಜ್ಞಾನಿಗಳು ಅಥವಾ ಸಾಹಿತಿಗಳು ಅಥವಾ ಯಾರೇ ಆಗಿರಲಿ ದೊಡ್ಡವರ ಮಕ್ಕಳು ಎಂದಿಗೂ ಕಲ್ಲು ಎಸೆಯುವುದಿಲ್ಲ. ಮಚ್ಚು ಹಿಡಿದು ಹೊಡೆದಾಡುವುದಿಲ್ಲ. ಈ ರೀತಿಯ ಉತ್ಸವಗಳ ಗಲಭೆಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ಬಡವರು, ಮಧ್ಯಮ ವರ್ಗದವರು ಹುಚ್ಚು ಹಿಡಿದವರಂತೆ, ಅಜ್ಞಾನದಿಂದ, ತಮ್ಮ ಧರ್ಮಗಳ, ದೇವರುಗಳ ರಕ್ಷಣೆ ಮಾಡುತ್ತೇವೆ ಎನ್ನುವ ಭ್ರಮೆಗೆ ಒಳಗಾಗಿ ಜೈಲು ಪಾಲಾಗುತ್ತಿರುವುದು ನಮ್ಮ ಕಣ್ಣ ಮುಂದೆ ನಡೆಯುತ್ತಿದೆ......

ಅಷ್ಟು ದೊಡ್ಡ ದೊಡ್ಡ ಮಾತನಾಡುವ ಎರಡೂ ಕಡೆಯ ಧರ್ಮ ರಕ್ಷಕರು ತಮ್ಮ ಮಕ್ಕಳನ್ನು ಹೊಡೆದಾಟಗಳಿಗೆ ಕಳುಹಿಸಲಿ ನೋಡೋಣ. ಅನೇಕ ಮೇಲ್ವರ್ಗದ ಜನ ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸಿ ಅಲ್ಲಿಯೇ ವಾಸಿಸುವಂತೆ ಮಾಡಿ ಈಗ ಇಲ್ಲಿ ಧರ್ಮ ರಕ್ಷಣೆಗೆ ಬಡ ಮತ್ತು ಮಧ್ಯಮ ವರ್ಗದ ಜನರನ್ನ ಉಪಯೋಗಿಸಿಕೊಂಡು ರೊಚ್ಚಿಗೆಬ್ಬಿಸಿ ಅವರನ್ನು ಜೈಲು ಪಾಲು ಮಾಡುತ್ತಿದ್ದಾರೆ......

ಈಗ ಯೋಚಿಸುವ ಸರದಿ ನಮ್ಮದು. ಇದೆಲ್ಲವೂ ಬೇಕೆ. ಒಮ್ಮೆ ಆರೋಪಿಯಾಗಿ ಕೋರ್ಟ್ ಕಟಕಟೆ ಹತ್ತಿ ಅಲ್ಲಿಂದ ಜೈಲು ಸೇರಿದ ಮೇಲೆ ನಮ್ಮ ಜೀವನದಲ್ಲಿ ಆ ದಾಖಲೆ ಶಾಶ್ವತವಾಗಿ ಉಳಿದುಬಿಡುತ್ತದೆ. ಯಾವುದೇ ಪಾಸ್ ಪೋರ್ಟ್, ವೀಸಾ ಅಥವಾ ಸರ್ಕಾರಿ ನೌಕರಿ ಪಡೆಯಬೇಕೆಂದಾಗ ಈ ಒಂದು ವಿಷಯ ಸದಾ ಅಡ್ಡಿಪಡಿಸುತ್ತದೆ. ಆಗ ಯಾವ ದೇವರು, ಧರ್ಮವು, ರಾಜಕೀಯ ನಾಯಕರು, ಧಾರ್ಮಿಕ ನಾಯಕರು ನಮ್ಮ ರಕ್ಷಣೆಗೆ ಬರುವುದಿಲ್ಲ. ಇದನ್ನು ಗಂಭೀರವಾಗಿ ಯೋಚಿಸಿ.....

ಧರ್ಮ ರಕ್ಷಣೆ ಮಾಡಲು, ಹೊಡೆದಾಡಲು ಸಿ ಟಿ ರವಿ, ಸಂತೋಷ್ ಲಾಡ್, ಆರ್. ಅಶೋಕ್, ಪ್ರತಾಪ್ ಸಿಂಹ, ದಿನೇಶ್ ಗುಂಡೂರಾವ್ ಮುಂತಾದ ಯಾರು ಬರುವುದಿಲ್ಲ. ಈಶ್ವರ್ ಕಂಡ್ರೆ ಅವರ ಮಗ, ಸತೀಶ್ ಜಾರಕಿಹೊಳಿ ಅವರ ಮಗಳು, ಮೈಸೂರಿನ ಮಹಾರಾಜ, ಯಡಿಯೂರಪ್ಪನವರ ಇನ್ನೊಬ್ಬ ಮಗ, ಕುಮಾರಸ್ವಾಮಿಯವರ ಪತ್ನಿ ಇಂತಹವರೇ ಎಂಎಲ್ಎ ಎಂಪಿಗಳಾಗುತ್ತಾರೆ. ಇವರು ಬಂದು ಹೊಡೆದಾಡಲಿ ನೋಡೋಣ.....

ದಯವಿಟ್ಟು ಮತ್ತೆ ಮತ್ತೆ ಅರ್ಥ ಮಾಡಿಕೊಳ್ಳಿ. ರಾಜಕಾರಣಿಗಳೇ ಗಲಭೆ ಮಾಡಿಕೊಳ್ಳಲಿ. ನಾವು ನಮ್ಮ ನಮ್ಮ ಹಂತದಲ್ಲಿ ಪ್ರೀತಿ, ಸೌಹಾರ್ದತೆ, ಸಮನ್ವಯ ಮಾಡಿಕೊಂಡು ಬಾಂಧವ್ಯ ಬೆಸೆದು ನೆಮ್ಮದಿಯಾಗಿರೋಣ. ಪ್ರತಿ ಗಣೇಶ ಹಬ್ಬದಲ್ಲೋ ಅಥವಾ ಈದ್ ಮಿಲಾದ್, ರಂಜಾನ್ ಬಕ್ರೀದ್ ಸಂದರ್ಭದಲ್ಲಿ ಈ ರೀತಿ ಒಬ್ಬರಿಗೊಬ್ಬರು ಹೊಡೆದಾಟ ಮಾಡಿಕೊಂಡು ಬಡವರೇ ಜೈಲು ಪಾಲಾಗುವ ಈ ವ್ಯವಸ್ಥೆಯನ್ನು ಇನ್ನು ಮುಂದಾದರು ತಡೆಯೋಣ.....

ಅಧಿಕಾರ ಅನುಭವಿಸುವವರು, ಧರ್ಮದ, ಜಾತಿಯ ಹೆಸರೇಳಿ ಉನ್ನತ ಸ್ಥಾನ ಪಡೆಯುವವರು ಬೇಕಾದರೆ ಹೊಡೆದಾಡಿಕೊಳ್ಳಲಿ. ನಮಗ್ಯಾಕೆ ಆ ಚಿಂತೆ......

ಕೇವಲ ಬಡವರ ಮಕ್ಕಳು ಮಾತ್ರ ಗಣೇಶೋತ್ಸವದಲ್ಲಿ ಡೊಳ್ಳು ಡೋಲು ತಮಟೆ ಹೊಡೆಯುತ್ತಾ, ಡಿಜೆ ಶಬ್ಧಕ್ಕೆ ಕುಣಿಯುತ್ತಾ, ತಾವೇ ಧರ್ಮರಕ್ಷಕರಂತೆ ಆಡುತ್ತಾರೆ. ಯಾವುದೇ ಹಿರಿಯ ಅಧಿಕಾರಿಗಳ, ರಾಜಕಾರಣಿಗಳ, ಉದ್ಯಮಿಗಳ ಮಕ್ಕಳು ಅಲ್ಲಿಗೆ ಬರುವುದೇ ಇಲ್ಲ. ಇದನ್ನು ಸಹ ಗಂಭೀರವಾಗಿ ಯೋಚಿಸಿ......

ದೇಶಕ್ಕೆ ಸ್ವಾತಂತ್ರ್ಯ ಸಿಗಲು, ಜನ ಒಗ್ಗೂಡಲು ತನ್ನದೇ ಕೊಡುಗೆ ನೀಡಿದ ಈ ಉತ್ಸವಗಳು ದೇಶದ ವಿಭಜನೆಗೆ ಕಾರಣವಾಗದಿರಲಿ ಎಂದು ಎಚ್ಚರಿಸುತ್ತಾ.......
ಲೇಖನ-ವಿವೇಕಾನಂದ. ಎಚ್. ಕೆ. 9663750451


 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ