ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿಮ್ಮ ಆಸ್ತಿ, ನಮ್ಮ ಗ್ಯಾರಂಟಿ ಇ- ಖಾತಾ ಪಡೆದುಕೊಳ್ಳಿ, ವಂಚನೆಯಿಂದ ತಪ್ಪಿಸಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು. ಜಿಬಿಎ (ಬಿಬಿಎಂಪಿ) ಯಲಹಂಕ ವಲಯದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಇ-ಖಾತಾ ಮೇಳ ಹಾಗೂ ಮನೆ-ಮನೆಗೆ ಖಾತಾ ವಿತರಣಾ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಯಾವುದೇ ವಂಚನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಇ- ಖಾತಾ ಯೋಜನೆಯನ್ನು ಜಾರಿಗೊಳಿಸಿದ್ದೇವೆ. 25 ಲಕ್ಷ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಬೃಹತ್ ಆಂದೋಲನವನ್ನು ಹಮ್ಮಿಕೊಂಡಿದ್ದೇವೆ. ಈ ರೀತಿಯ ಅನೇಕ ಜನಪರ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ ಎಂದು ಡಿಸಿಎಂ ತಿಳಿಸಿದರು.
5 ಲಕ್ಷಕ್ಕೂ ಅಧಿಕ ಖಾತೆಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಇತ್ತೀಚೆಗೆ 1,11,111 ತಾಂಡಾ, ಬುಡಕಟ್ಟು ಜನರಿಗೆ, ಆರನೇ ಭೂ ಗ್ಯಾರಂಟಿ ಮೂಲಕ ಭೂಮಿ ದಾಖಲೆಗಳನ್ನು ಉಚಿತವಾಗಿ ಹಂಚಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಭಾರತ ಸರ್ಕಾರವು ಕೊಡುವ ಇ- ಆಡಳಿತ ಗೋಲ್ಡನ್ ಅವಾರ್ಡ್‌ಗೂ ಇ- ಖಾತಾ ಭಾಜನವಾಗಿದೆ. ದೇಶದ ಯಾವುದೇ ಭಾಗದಲ್ಲಿದ್ದರೂ ಇ- ಖಾತಾ ಮಾಡಿಸುವುದರಿಂದ, ನಿಮ್ಮ ಆಸ್ತಿ ದಾಖಲೆಗಳು ಫೋಟೋ ಸಮೇತ ನಿಮ್ಮ ಕೈಸೇರಿರುತ್ತದೆ. ಇದು ನಮ್ಮ ಗ್ಯಾರಂಟಿ. ಅಧಿಕಾರಿಗಳು ಮತ್ತು ಸ್ವಯಂಸೇವಕರು ನಿಮ್ಮ ಮನೆಬಾಗಿಲಿಗೆ ಬಂದು ಇ- ಖಾತಾ ಮಾಡಿಕೊಟ್ಟು, ನೆರವಾಗುತ್ತಾರೆ. ಜನಸಾಮಾನ್ಯರು ಇ- ಖಾತಾಗೆ ಸಂಬಂಧಿಸಿದ ಯಾವುದೇ ಸಂದೇಹಗಳಿದ್ದರೂ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಡಿಸಿಎಂ ಅವರು ಕರೆ ನೀಡಿದರು.
ಬೆಂಗಳೂರಿನ ಹೆಬ್ಬಾಗಿಲಾದ ಬ್ಯಾಟರಾಯನಪುರದಿಂದ ನಾವು ಈ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ. ಈ ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿಗೂ ಅಧಿಕ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಜುಲೈ 1ರಿಂದ ಒಂದು ತಿಂಗಳುಗಳ ಕಾಲ ಇ-ಖಾತಾ ಆಂದೋಲನ ನಡೆಯಲಿದ್ದು, ಬೆಂಗಳೂರಿನ ಎಲ್ಲಾ ವಾರ್ಡ್‌ಗಳಲ್ಲೂ ಇದೇ ರೀತಿಯ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು ಎಂದು ಡಿಸಿಎಂ ಹೇಳಿದರು.
50X80 ಸೈಟ್‌ಗಳನ್ನು ಹೊಂದಿರುವವರಿಗೆ ನಂಬಿಕೆ ನಕ್ಷೆಯ ಮೂಲಕ ಕಟ್ಟಡ ನಕ್ಷೆಯನ್ನು ಮನೆ ಬಾಗಿಲಿಗೆ ಒದಗಿಸುವ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಇದನ್ನೂ ಆಂದೋಲನದ ರೀತಿಯಲ್ಲಿ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರಿಗೆ ತೆರಿಗೆ ಪಾವತಿಗಾಗಿ ಒನ್ ಟೈಮ್ ಸೆಟಲ್ಮೆಂಟ್ ಮಾಡುವ ಅವಕಾಶ ನೀಡಲಾಗಿದ್ದು,1200 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶನುಸಾರ ಕಟ್ಟಡ ನಕ್ಷೆ ಇಲ್ಲದೇ, ಪ್ರಮಾಣಪತ್ರವಿಲ್ಲದೇ ವಿದ್ಯುತ್, ನೀರಿನ ಸೌಲಭ್ಯಗಳನ್ನು ಕೊಡುವಂತಿಲ್ಲ. ಈ ಬಾರಿ ನಮ್ಮ ಜನರಿಗೆ ಸಹಾಯ ಮಾಡಲು ಅಧಿಕಾರಿಗಳ ಜೊತೆ ಚರ್ಚಿಸಿ, ಪರಿಹಾರ ಸೂಚಿಸುವಂತೆ ತಿಳಿಸಿದ್ದೇನೆ. ಅನಧಿಕೃತವಾಗಿ ಯಾವುದೇ ಕಾರಣಕ್ಕೂ ಕಟ್ಟಡವನ್ನು ಕಟ್ಟಬೇಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ.
ಇ- ಖಾತಾ ಪಡೆದುಕೊಂಡು, ವಂಚನೆಯಿಂದ ತಪ್ಪಿಸಿಕೊಳ್ಳಿ. ನಿಮ್ಮ ಆಸ್ತಿ- ನಮ್ಮ ಗ್ಯಾರಂಟಿ. ನಿಮ್ಮ ಮನೆಬಾಗಿಲಿಗೆ ಬಂದು ನಮ್ಮ ಸರ್ಕಾರ ವಿಶೇಷವಾಗಿ ಸೇವೆ ಮಾಡುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಮತ್ತಿತರ ನಾಯಕರು, ಅಧಿಕಾರಿಗಳು ಇದ್ದರು.


