ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸೇವಾ ಮನೋಭಾವನೆಯುಳ್ಳವರು ಮಾತ್ರ ರಾಜಕೀಯದಲ್ಲಿ ಅಧಿಕಾರ ಹಿಡಿಯಬಹುದು ಎಂದು ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜುರವರ ಹುಟ್ಟುಹಬ್ಬದ ಅಂಗವಾಗಿ ಐ.ಎಂ.ಎ.ಹಾಲ್‌ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎಲ್ಲಿ ಎಡವಿದ್ದೇವೆ, ಹಿಂದುಳಿದಿದ್ದೇವೆನ್ನುವುದನ್ನು ಮಾದಿಗ ಜನಾಂಗ ಸೂಕ್ಷ್ಮವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ೨೦೦೪ ರಲ್ಲಿ ನಾನು ಹಿರಿಯೂರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಮಾದಿಗರ ಸ್ಥಿತಿಗತಿ ಎಷ್ಟು ಕೆಟ್ಟದಾಗಿದೆ ಎನ್ನುವುದು ಗಮನಕ್ಕೆ ಬಂದಿತು. ಮತಯಾಚನೆಗಾಗಿ ಗೊಲ್ಲರಹಟ್ಟಿಗೆ ಹೋದಾಗ ಅನೇಕ ಕಟ್ಟುಪಾಡುಗಳು ಎದುರಾಯಿತು. ಆಗ ಮಾದಿಗರು ಇನ್ನು ಅಸ್ಪೃಶ್ಯತೆ ಅನುಭವಿಸುತ್ತಿದ್ದಾರೆನ್ನುವುದು ಅರ್ಥವಾಯಿತು. ಕಂದಾಚಾರ, ಮೂಢನಂಬಿಕೆಯಿಂದ ಯಾದವರು ಹೊರಬರಲು ಆಗುತ್ತಿಲ್ಲ. ಅಹಿಂದ ಮಧ್ಯದಲ್ಲಿ ಸಮರವಾಗುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಮಕ್ಕಳ ಭವಿಷ್ಯಕ್ಕೆ ಕುತ್ತು ಬರುತ್ತದೆ ಎಂದರು.
ರಾಜ್ಯದಲ್ಲಿ ೩೮ ಲಕ್ಷ ಮಾದಿಗರಿದ್ದು, ಕೇವಲ ೯೬ ಸಾವಿರ ಮಂದಿ ಮಾತ್ರ ಸರ್ಕಾರಿ ನೌಕರಿಯಲ್ಲಿದ್ದಾರೆ. ಮಾದಿಗ ಮಹಾಸಭಾದಿಂದ ಸಮೀಕ್ಷೆ ಮಾಡಿಸುತ್ತೇನೆ. ನರಸಿಂಹರಾಜ ಎಲ್ಲಾ ಜನಾಂಗದವರನ್ನು ಜೊತೆಯಲ್ಲಿಟ್ಟುಕೊಂಡಿರುವುದರಿಂದ ಜಿಲ್ಲಾ ಪಂಚಾಯಿತಿ ಸದಸ್ಯನಾಗಲು ಸಾಧ್ಯವಾಯಿತು ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಶಾಸಕನಾಗಲಿ ಎಂದು ಹಾರೈಸಿದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯಿರುತ್ತದೆ. ರಕ್ತದಾನದಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಪ್ರಾಣ ಉಳಿಸಬಹುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಕೃಷ್ಣಮೂರ್ತಿ ಮಾತನಾಡಿ ಅಪಘಾತ, ಹೆರಿಗೆ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ರಕ್ತ ಬೇಕಾಗುತ್ತದೆ. ಹಾಗಾಗಿ ರಕ್ತದಾನಿಗಳು ಸ್ವಇಚ್ಚೆಯಿಂದ ರಕ್ತದಾನ ಮಾಡಬೇಕು. ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವ ಬದಲು ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ನರಸಿಂಹರಾಜ ರಕ್ತದಾನದ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಅವರಲ್ಲಿರುವ ಸೇವಾ ಗುಣವನ್ನು ತೋರಿಸುತ್ತದೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಜಂಟಿ ನಿರ್ದೇಶಕ ರೇವಣಸಿದ್ದಪ್ಪ ಮಾತನಾಡಿ ದಾನದಲ್ಲಿ ಶ್ರೇಷ್ಟದಾನ ಯಾವುದೆಂದರೆ ಅನ್ನದಾನ ಎನ್ನುವ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ. ರಕ್ತದಾನ ಶ್ರೇಷ್ಟದಾನ ಎನ್ನುವಂತಾಗಿದೆ. ನಾಯಕನಾದವನಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವಿರಬೇಕು. ಅಂತಹ ವ್ಯಕ್ತಿತ್ವ ಆರ್.ನರಸಿಂಹರಾಜರವರಲ್ಲಿದೆ. ರಕ್ತ ದಾನದಿಂದ ಅನೇಕರು ಪ್ರಾಣ ಉಳಿಸಬಹುದು ಎಂದು ಹೇಳಿದರು.
ಕುರುಬರ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಂ, ಸಹಾಯಕ ಆಯುಕ್ತ ನಾರಾಯಣಸ್ವಾಮಿ ಮಾತನಾಡಿ ರಕ್ತದಾನದ ಮೂಲಕ ಆರ್.ನರಸಿಂಹರಾಜ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ರಕ್ತದಾನದಿಂದ ಮತ್ತೊಬ್ಬರ ಪ್ರಾಣ ಉಳಿಸಬಹುದು ಎಂದರು.
ಉಪ ವಿಭಾಗಾಧಿಕಾರಿ ಕಾಂತರಾಜ್, ತಹಶೀಲ್ದಾರ್ ಗೋವಿಂದರಾಜ್, ಅಣ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಶಂಶೀರ್, ಶಿಲ್ಪಾ ಇವರುಗಳು ವೇದಿಕೆಯಲ್ಲಿದ್ದರು.


