ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ತೀವ್ರ ರಾಜಕೀಯ ಸಂಘರ್ಷ ಮತ್ತು ಗದ್ದಲಕ್ಕೆ ಸಾಕ್ಷಿಯಾಗಿದೆ. ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ. ಕೆ. ಸುಧಾಕರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆಂಬಲಿಗರ ನಡುವೆ ನಡೆದ ಮಾತಿನ ಚಕಮಕಿ, ಜಯಂತಿ ಆಚರಣೆಯ ವೇದಿಕೆಯನ್ನು ರಣರಂಗವಾಗಿಸಿತು.
ವೇದಿಕೆಯಲ್ಲಿ ಗಲಾಟೆ: ಶಾಸಕರ ಭಾಷಣಕ್ಕೆ ತಡೆ
ಕಾರ್ಯಕ್ರಮಕ್ಕೆ ಶಾಸಕ ಪ್ರದೀಪ್ ಈಶ್ವರ್ ಆಗಮಿಸಿ ಭಾಷಣ ಆರಂಭಿಸುತ್ತಿದ್ದಂತೆಯೇ ಜೆಡಿಎಸ್ ಮತ್ತು ಒಕ್ಕಲಿಗ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
"ಶಾಸಕ ಪ್ರದೀಪ್ ಈಶ್ವರ್ ಅವರು ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ನೀಡಿದ ಹೇಳಿಕೆಗೆ ತಕ್ಷಣ ಕ್ಷಮೆ ಕೇಳಬೇಕು ಮತ್ತು ಕಾರ್ಯಕ್ರಮದಿಂದ ಹೊರಗೆ ಹೋಗಬೇಕು" ಎಂದು ಘೋಷಣೆ ಕೂಗಲಾರಂಭಿಸಿದರು.
ಇದೇ ವೇಳೆ ಸಂಸದ ಡಾ. ಕೆ. ಸುಧಾಕರ್ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಹೊರಗೆ ಕಳುಹಿಸುವಂತೆ ಸುಧಾಕರ್ ಹಾಗೂ ಕುಮಾರಸ್ವಾಮಿ ಬೆಂಬಲಿಗರು ಪಟ್ಟು ಹಿಡಿದರು.
ಹೊರಬರುತ್ತಿದ್ದಂತೆ ಹೈಡ್ರಾಮಾ: ಚಪ್ಪಲಿ ಎಸೆತ!
ಗದ್ದಲದ ನಡುವೆಯೇ ಕಾರ್ಯಕ್ರಮದಿಂದ ಹೊರಗೆ ಬಂದ ಶಾಸಕ ಪ್ರದೀಪ್ ಈಶ್ವರ್, ತಮ್ಮ ಎಂದಿನ ಶೈಲಿಯಲ್ಲಿ ಮೀಸೆ ತಿರುವುತ್ತಾ, ಎದೆ ತಟ್ಟಿಕೊಳ್ಳುತ್ತಾ ಹಾವಭಾವ ಪ್ರದರ್ಶಿಸಿದರು. "ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ" ಎಂಬಂತೆ ಸವಾಲು ಹಾಕುತ್ತಿದ್ದಾಗ, ನೆರೆದಿದ್ದ ಜನಸಂದಣಿಯಿಂದ ವ್ಯಕ್ತಿಯೊಬ್ಬರು ಶಾಸಕರನ್ನು ಗುರಿಯಾಗಿಸಿ ಚಪ್ಪಲಿ ಎಸೆದಿದ್ದಾರೆ. ಆದರೆ, ಆ ಚಪ್ಪಲಿ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಬಿದ್ದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಚಪ್ಪಲಿ ಎಸೆದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
"ಒಬಿಸಿ ಶಾಸಕನಿಗೆ ಅವಮಾನ":ಪ್ರದೀಪ್ ಈಶ್ವರ್ ಆಕ್ರೋಶ
ಘಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಿಂದುಳಿದ ವರ್ಗದ ಅಸ್ತ್ರ: "ನಾನು ಈ ಜಿಲ್ಲೆಯ ಏಕೈಕ ಶೋಷಿತ ಒಬಿಸಿ ಶಾಸಕ. ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಕರೆದು, ಈಗ ಕುಮಾರಣ್ಣನ ಬೆಂಬಲಿಗರು ನನಗೆ ಅವಮಾನ ಮಾಡಿದ್ದಾರೆ. ಈ ಜಿಲ್ಲೆಯಲ್ಲಿ ಒಬಿಸಿ ಶೋಷಿತರು ಬದುಕಬಾರದಾ ಕುಮಾರಣ್ಣ?" ಎಂದು ಪ್ರಶ್ನಿಸಿದರು.
ನಾಯಕರ ಸಹಿಸಲ್ಲ: "ಕುಮಾರಣ್ಣನಿಗೆ ಡಿ.ಕೆ. ಶಿವಕುಮಾರ್ ಆಗಲ್ಲ, ಚಲುವರಾಯಸ್ವಾಮಿ ಸಹಿಸಲ್ಲ, ಈಗ ಒಬ್ಬ ಒಬಿಸಿ ಶಾಸಕ ಬೆಳೆಯುವುದನ್ನೂ ಸಹಿಸುತ್ತಿಲ್ಲ" ಎಂದು ದೂರಿದರು.
ತಾಕತ್ತಿದ್ದರೆ ಚಿಕ್ಕಬಳ್ಳಾಪುರಕ್ಕೆ ಬಾ:ಕುಮಾರಸ್ವಾಮಿಗೆ ಸವಾಲು!
ತಮ್ಮ ಆಕ್ರೋಶವನ್ನು ಮುಂದುವರಿಸಿದ ಪ್ರದೀಪ್ ಈಶ್ವರ್, ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೇರ ಚುನಾವಣಾ ಸವಾಲು ಹಾಕಿದರು.
"ಕುಮಾರಣ್ಣ, ನಾನು ನಿನ್ನ ಚೇಲಾಗಳಿಗೆ ಹೆದರುವುದಿಲ್ಲ. ನಿನಗೆ ತಾಕತ್ತಿದ್ದರೆ ನೇರವಾಗಿ ಬಂದು ಚಿಕ್ಕಬಳ್ಳಾಪುರದಲ್ಲಿ ನನ್ನ ವಿರುದ್ಧ ಚುನಾವಣೆಗೆ ನಿಲ್ಲು. ನೀನಾ... ನಾನಾ... ಒಂದು ಕೈ ನೋಡಿಯೇ ಬಿಡೋಣ" ಎಂದು ತೊಡೆ ತಟ್ಟಿದರು.
ಸದ್ಯ ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ವಾತಾವರಣ ಸಂಪೂರ್ಣ ಕಾವೇರಿದ್ದು, ಜಯಂತಿಯ ನೆಪದಲ್ಲಿ ಭುಗಿಲೆದ್ದ ಈ ರಾಜಕೀಯ ಕಿಡಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.



