ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇದು ಸಮೀಕ್ಷೆ ಅಲ್ಲ, ಸ್ಕ್ಯಾಮ್! ಇಂತಹ ಕಾಟಾಚಾರದ, ಬೂಟಾಟಿಕೆಯ, ತೋರಿಕೆಯ ಜಾತಿ ಸಮೀಕ್ಷೆ ಏಕೆ ಮಾಡುತ್ತಿದ್ದೀರಿ ಸಿಎಂ ಸಿದ್ದರಾಮಯ್ಯ ನವರೇ? ಇದು ಯಾವ ಪುರುಷಾರ್ಥಕ್ಕೆ? ಯಾರ ಲಾಭಕ್ಕೆ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಟುವಾಗಿ ಟೀಕಿಸಿದ್ದಾರೆ.
ಸಮೀಕ್ಷೆ ನಡೆಸಬೇಕಾದ ಸಿಬ್ಬಂದಿ ಮನೆ ಮನೆಗೆ ಹೋಗದೇ, ಜನರೊಂದಿಗೆ ಸಂಪರ್ಕವಿಲ್ಲದೆ, ಕೇವಲ ಬಾಗಿಲಿಗೆ "ಸಮೀಕ್ಷೆ ಪೂರ್ಣ" ಎನ್ನುವ ಸ್ಟಿಕ್ಕರ್ ಅಂಟಿಸಿ ಹೊರಸುತ್ತಿದ್ದಾರೆ.
ಜನರ ಜಾತಿಯ ಬಗ್ಗೆ ಕೇಳದೆ, ಮಾಹಿತಿ ಸಂಗ್ರಹಿಸದೇ ನಡೆಯುತ್ತಿರುವ ಇದನ್ನು ಸಮೀಕ್ಷೆ ಅನ್ನುತ್ತಾರಾ? ಇದು ಸಮೀಕ್ಷೆ ಅಲ್ಲ, ಇದು ಸರ್ಕಾರಿ ನಿರ್ದೇಶಿತ ಸ್ಕ್ಯಾಮ್! ಎಂದು ಅಶೋಕ್ ಗಂಭೀರ ಆರೋಪ ಮಾಡಿದರು.
ಜಾತಿ ಗಣತಿ ಹೆಸರಿನಲ್ಲಿ ಈಗಾಗಲೇ 160 ಕೋಟಿ ರೂಪಾಯಿ ಪೋಲು ಮಾಡಿದ್ದೀರಿ. ಈಗ ಒಳಮೀಸಲಾತಿಗಾಗಿ ಮಾಡುತ್ತಿರುವ ಸಮೀಕ್ಷೆಯ ಹೆಸರಿನಲ್ಲಿ ಇನ್ನೊಂದಿಷ್ಟು ಕೋಟಿ ಲೂಟಿ.
ಇದು ಯಾವ ಸೀಮೆ ಸಾಮಾಜಿಕ ನ್ಯಾಯ ಸ್ವಾಮಿ? ಜನರ ತೆರಿಗೆ ದುಡ್ಡನ್ನ ಹಗಲು ದರೋಡೆ ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ದಲಿತರಿಗೆ ಮೋಸ ಮಾಡುತ್ತಿದೆ ಎಂದು ಅಶೋಕ್ ಆರೋಪಿಸಿದರು.


