ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ನವೀಕೃತ ಸಭಾ ಭವನ ಲೋಕಾರ್ಪಣೆ ಅಂಗವಾಗಿ ಮುಖ್ಯದ್ವಾರವನ್ನು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಉದ್ಘಾಟಿಸಿದರು.
ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಶನಿವಾರ ಹೈಟೆಕ್ ಮಾದರಿಯಲ್ಲಿ ನವೀಕರಿಸಲಾದ ಚಿತ್ರದುರ್ಗ ಪತ್ರಿಕಾ ಸಭಾ ಭವನದ ಮುಖ್ಯದ್ವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪತ್ರಕರ್ತರ ಕಾಮಗಾರಿಗಾಗಿ 5 ಲಕ್ಷ ರೂ.ಗಳನ್ನು ನೀಡಿದ್ದೆ. ಮುಂದೆ ಪತ್ರಕರ್ತರಿಗಾಗಿ ಆಧುನಿಕ ಸ್ಟುಡಿಯೋ ನಿರ್ಮಾಣ ಮಾಡಲು ಎಲ್ಲ ರೀತಿಯ ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದರು.
ಪತ್ರಕರ್ತರ ಬಹುದಿನಗಳ ಬೇಡಿಕೆ ಈಡೇರಿಸಲು ಸ್ಪಂದಿಸುವುದಾಗಿ ಭರವಸೆ ನೀಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಪತ್ರಕರ್ತರಿಗೆ ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಖನಿಜ ಪ್ರತಿಷ್ಠಾನದಿಂದ 25 ಲಕ್ಷ ರೂ. ಅನುದಾನದಲ್ಲಿ ಪಿವಿಎಸ್ ಥಿಯೇಟರ್ ಮಾದರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಅಕಾಸ್ಟಿಕ್ ಆಡಿಯೋ ಥಿಯೇಟರ್‌ನಂತೆ ನವೀಕೃತಗೊಂಡಿರುವ ಸಭಾ ಭವನ ಅದ್ಭುತವಾಗಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಸಿ. ಹೆಂಜಾರಪ್ಪ, ಸಂಘದ ಜಿಲ್ಲಾ ಖಜಾಂಚಿ ಡಿ. ಕುಮಾರಸ್ವಾಮಿ, ಕಾರ್ಯದರ್ಶಿ ವಿನಾಯಕ ಬಿ.ಎಸ್. ತೊಡರನಾಳ್, ರವಿ ಉಗ್ರಾಣ, ವಿ. ವೀರೇಶ್ (ಅಪ್ಪು), ರಾಜು ಸೇರಿದಂತೆ ಇತರರಿದ್ದರು.


