ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ನೀತಿಗಳು ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಸ್ತಿ ಗಳಿಕೆಯ ಕುರಿತು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಭೂಮಿ ಕಬಳಿಕೆ ಮತ್ತು ಡ್ರಗ್ಸ್ ದಂಧೆ ನಿಯಂತ್ರಣದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
'ಟೀಕೆ ಬಿಟ್ಟು ಡ್ರಗ್ಸ್ ದಂಧೆ ಮಟ್ಟಹಾಕಲಿ':
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಹೆಚ್ಚುತ್ತಿರುವ ಮಾದಕ ದ್ರವ್ಯ ಜಾಲದ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಚ್.ಡಿ. ಕುಮಾರಸ್ವಾಮಿ, "ಗೃಹ ಸಚಿವರು ವಿರೋಧ ಪಕ್ಷಗಳನ್ನು ಟೀಕಿಸುವುದಕ್ಕೆ ಕೊಡುವ ಸಮಯವನ್ನು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡ್ರಗ್ಸ್‌ದಂಧೆಯನ್ನು ಮಟ್ಟಹಾಕಲು ಕೊಡಲಿ," ಎಂದು ಜರಿದರು. ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಇಂತಹ ಗಂಭೀರ ದಂಧೆಗಳ ವಿರುದ್ಧ ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
30 ವರ್ಷಗಳಲ್ಲಿ ಸಾಧನೆಯೇನು?:
ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ಧ ಪ್ರಶ್ನೆಗಳ ಸುರಿಮಳೆಗರೆದ ಸಚಿವರು, "ಹಿಂದೆ ಬಿಎಂಐಸಿಪಿ ಪ್ರಾಧಿಕಾರ ರಚನೆಯಾದಾಗ ಅದಕ್ಕೆ ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗಿದ್ದರು. ಬೆಂಗಳೂರು-ಮೈಸೂರು ರಸ್ತೆಯಲ್ಲಿ ರಸ್ತೆ ಮತ್ತು ಟೌನ್‌ಶಿಪ್ ನಿರ್ಮಾಣಕ್ಕಾಗಿ ಬರೋಬ್ಬರಿ 1.75 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಂದು ಅಧಿಸೂಚನೆ ಹೊರಡಿಸಲಾಗಿತ್ತು. ಕಳೆದ 30 ವರ್ಷಗಳಲ್ಲಿ ಆ ಪ್ರಾಜೆಕ್ಟ್‌ನಲ್ಲಿ ಇವರು ಮಾಡಿದ್ದೇನು?" ಎಂದು ಪ್ರಶ್ನಿಸಿದರು.
'3 ಎಕರೆ ಜಮೀನಿದ್ದವರು 1400 ಕೋಟಿ ಆಸ್ತಿ ಮಾಡಿದ್ದು ಹೇಗೆ?':
ಡಿ.ಕೆ. ಶಿವಕುಮಾರ್ ಅವರ ಆಸ್ತಿ ಮೌಲ್ಯದ ಬೆಳವಣಿಗೆಯನ್ನು ತೀವ್ರವಾಗಿ ವ್ಯಂಗ್ಯವಾಡಿದ ಕುಮಾರಸ್ವಾಮಿ, "1999ರ ಅಫಿಡವಿಟ್ ಪ್ರಕಾರ ಕೇವಲ 3 ಎಕರೆ ಪಿತ್ರಾರ್ಜಿತ ಜಮೀನು ಹೊಂದಿದ್ದ ಡಿ.ಕೆ. ಶಿವಕುಮಾರ್, 2018ರ ವೇಳೆಗೆ 1400 ಕೋಟಿಗೂ ಅಧಿಕ ಆಸ್ತಿ ಸಂಪಾದಿಸಿದ್ದು ಹೇಗೆ? ಈ ರಹಸ್ಯ ಏನೆಂಬುದನ್ನು ಅವರು ಇಡೀ ರಾಜ್ಯದ ಜನತೆಗೆ ಮತ್ತು ರೈತರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲಿ. ನಮ್ಮ ಸಣ್ಣ ಹಿಡುವಳಿದಾರ ರೈತರೂ ಸಹ ಅವರಂತೆ ಶ್ರೀಮಂತರಾಗುವುದು ಹೇಗೆ ಎಂದು ಹೇಳಿಕೊಡಲಿ," ಎಂದು ಲೇವಡಿ ಮಾಡಿದರು.
ಬಿಡದಿ ಟೌನ್‌ಶಿಪ್ ಸರ್ಕಾರದ ರಿಯಲ್ ಎಸ್ಟೇಟ್ ದಂಧೆ:
ಬಿಡದಿ ಬಳಿ ಉದ್ದೇಶಿತ ಟೌನ್‌ಶಿಪ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, "ಬಿಡದಿ ಟೌನ್‌ಶಿಪ್ ಸರ್ಕಾರದ ರಿಯಲ್ ಎಸ್ಟೇಟ್ ಯೋಜನೆಯಾಗಿದೆ. ಮುಖ್ಯಮಂತ್ರಿಗಳೇ ನೇರವಾಗಿ ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈಜೋಡಿಸಿದ್ದು, ಸರ್ಕಾರವೇ ರಿಯಲ್ ಎಸ್ಟೇಟ್ ಏಜೆಂಟ್‌ನಂತೆ ವರ್ತಿಸುತ್ತಿದೆ. ಅಲ್ಲಿನ ರೈತರು ಭೂಮಿ ಕೊಡಲು ಸಿದ್ಧರಿಲ್ಲದಿದ್ದರೂ ಪೊಲೀಸರು ಮತ್ತು ರೌಡಿಗಳನ್ನು ಬಿಟ್ಟು ಬೆದರಿಸಲಾಗುತ್ತಿದೆ," ಎಂದು ಗಂಭೀರ ಆರೋಪ ಮಾಡಿದರು.
"ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಬರಡು ಭೂಮಿಯಲ್ಲಿ ಟೌನ್‌ಶಿಪ್ ನಿರ್ಮಿಸಿದ್ದಾರೆ. ಆದರೆ ಬಿಡದಿಯಲ್ಲಿ ಲಕ್ಷಾಂತರ ತೆಂಗು, ಅಡಿಕೆ ಬೆಳೆಗಳಿರುವ ಫಲವತ್ತಾದ ಕೃಷಿ ಭೂಮಿ ಇದೆ. ಸರ್ಕಾರಕ್ಕೆ ನಿಜಕ್ಕೂ ಅಭಿವೃದ್ಧಿಯ ಚಿಂತೆ ಇದ್ದರೆ ಕೃಷಿಗೆ ಯೋಗ್ಯವಲ್ಲದ ಒಣಭೂಮಿಯಲ್ಲಿ ಟೌನ್‌ಶಿಪ್ ಮಾಡಲಿ, ನಮ್ಮದೇನೂ ಅಭ್ಯಂತರವಿಲ್ಲ" ಎಂದು ಎಚ್‌ಡಿಕೆ ಸ್ಪಷ್ಟಪಡಿಸಿದರು.
ಡಿ.ಕೆ. ಶಿವಕುಮಾರ್ ಆಸ್ತಿ ವಿವರ:
ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 1,400 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಸಾಮ್ರಾಜ್ಯ, ಉದ್ಯಮಗಳು ಮತ್ತು ಅವರ ಮೇಲಿರುವ ತನಿಖೆಗಳ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ.



